ಏಷ್ಯಾಕಪ್ನ ಸೂಪರ್-4 ಹಂತದ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ್ ತಂಡವು ಹೀನಾಯವಾಗಿ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಭಾರತದ ನೀಡಿದ 356 ರನ್ಗಳ ಸವಾಲನ್ನು ಬೆನ್ನತ್ತಿದ ಪಾಕ್ ಪಡೆ ಕೇವಲ 128 ರನ್ಗಳಿಗೆ ಆಲೌಟ್ ಆಗಿತ್ತು. ಇತ್ತ 228 ರನ್ಗಳ ಅಮೋಘ ಗೆಲುವಿನೊಂದಿಗೆ ಟೀಮ್ ಇಂಡಿಯಾ ಇತಿಹಾಸ ನಿರ್ಮಿಸಿತು. ಇದೀಗ ಈ ಹೀನಾಯ ಸೋಲಿನಿಂದ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ್ ತಂಡವು ನಿರ್ಣಾಯಕ ಪಂದ್ಯಕ್ಕಾಗಿ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ.
ಅಂದರೆ ಗುರುವಾರ ಶ್ರೀಲಂಕಾ ವಿರುದ್ಧ ನಡೆಯಲಿರುವ ಈ ಪಂದ್ಯದಲ್ಲಿ ಪಾಕಿಸ್ತಾನ್ ಗೆದ್ದರೆ ಫೈನಲ್ಗೆ ಪ್ರವೇಶಿಸಬಹುದು. ಇದಕ್ಕಾಗಿ ಬಲಿಷ್ಠ ಪಡೆಯನ್ನೇ ರೂಪಿಸಲು ಪಾಕ್ ತಂಡದ ಆಡುವ ಬಳಗದಲ್ಲಿ ಐದು ಬದಲಾವಣೆ ಮಾಡಲಾಗಿದೆ.
ಈ ಬದಲಾವಣೆಗಾಗಿ ತಂಡದ ಅನುಭವಿ ಆರಂಭಿಕ ಆಟಗಾರ ಫಖರ್ ಝಮಾನ್ಗೆ ಗೇಟ್ ಪಾಸ್ ನೀಡಲಾಗಿದ್ದು, ಬದಲಿ ಆಟಗಾರನಾಗಿ ಮೊಹಮ್ಮದ್ ಹ್ಯಾರಿಸ್ರನ್ನು ಆಯ್ಕೆ ಮಾಡಲಾಗಿದೆ. ಇನ್ನು ಸಲ್ಮಾನ್ ಆಘಾ ಸ್ಥಾನದಲ್ಲಿ ಸೌದ್ ಶಕೀಲ್ ಸ್ಥಾನ ಪಡೆದಿದ್ದಾರೆ. ಹಾಗೆಯೇ ಫಹೀಮ್ ಅಶ್ರಫ್ ಜಾಗದಲ್ಲಿ ಮೊಹಮ್ಮದ್ ನವಾಝ್ ಕಣಕ್ಕಿಳಿಯಲಿದ್ದಾರೆ.
ಇನ್ನು ಗಾಯದಿಂದ ಬಳಲುತ್ತಿರುವ ಪ್ರಮುಖ ವೇಗಿಗಳಾದ ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್ ಸ್ಥಾನಗಳಲ್ಲಿ ಝಮಾನ್ ಖಾನ್ ಹಾಗೂ ಮೊಹಮ್ಮದ್ ವಾಸಿಂ ಜೂನಿಯರ್ ಕಾಣಿಸಿಕೊಳ್ಳಲಿದ್ದಾರೆ. ಈ ಐದು ಬದಲಾವಣೆಯೊಂದಿಗೆ ಪಾಕಿಸ್ತಾನ್ ತಂಡವು ಶ್ರೀಲಂಕಾ ವಿರುದ್ಧ ಕಣಕ್ಕಿಳಿಯಲಿದೆ.
ಪಾಕಿಸ್ತಾನ್ ಪ್ಲೇಯಿಂಗ್ ಇಲೆವೆನ್:
Our playing XI for the #PAKvSL match 🇵🇰#AsiaCup2023 pic.twitter.com/lhT5Vl8RtX
— Pakistan Cricket (@TheRealPCB) September 13, 2023
ಶ್ರೀಲಂಕಾ ಹಾಗೂ ಪಾಕಿಸ್ತಾನ್ ನಡುವಣ ಪಂದ್ಯದಲ್ಲಿ ಜಯ ಸಾಧಿಸುವ ತಂಡ ಏಷ್ಯಾಕಪ್ನ ಫೈನಲ್ಗೇರಲಿದೆ. ಹೀಗಾಗಿ ಈ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯಕ. ಒಂದು ವೇಳೆ ಈ ಪಂದ್ಯವು ಮಳೆಯಿಂದಾಗಿ ರದ್ದಾದರೆ ಉಭಯ ತಂಡಗಳು ಒಂದೊಂದು ಅಂಕ ಹಂಚಿಕೊಳ್ಳಲಿದೆ. ಅಲ್ಲದೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಶ್ರೀಲಂಕಾ ತಂಡವು ಫೈನಲ್ಗೆ ಅರ್ಹತೆ ಪಡೆಯಲಿದೆ.
ಇದನ್ನೂ ಓದಿ: ಕಿಂಗ್ ಕೊಹ್ಲಿಯ 1 ಶತಕಕ್ಕೆ 10 ದಾಖಲೆಗಳು ಉಡೀಸ್..!
ಪಾಕಿಸ್ತಾನ್ ತಂಡ: ಬಾಬರ್ ಆಝಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಫಹೀಮ್ ಅಶ್ರಫ್, ಫಖರ್ ಝಮಾನ್, ಇಫ್ತಿಕರ್ ಅಹ್ಮದ್, ಇಮಾಮ್-ಉಲ್-ಹಕ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಮ್ ಜೂನಿಯರ್, ಸಲ್ಮಾನ್ ಅಲಿ ಅಘಾ, ಸೌದ್ ಶಕೀಲ್, ಶಾಹೀನ್ ಅಫ್ರಿದಿ ಮತ್ತು ಉಸಾಮಾ ಮಿರ್, ಮೊಹಮ್ಮದ್ ವಾಸಿಂ ಜೂನಿಯರ್, ಝಮಾನ್ ಖಾನ್, ತಯ್ಯಬ್ ತಾಹಿರ್ (ಮೀಸಲು ಆಟಗಾರ).
Published On - 9:30 pm, Wed, 13 September 23