AUS vs NZ: ಬರೋಬ್ಬರಿ 771 ರನ್​​ಗಳು: ಏಕದಿನ ವಿಶ್ವಕಪ್​ನಲ್ಲಿ ಹೊಸ ಇತಿಹಾಸ

| Updated By: ಝಾಹಿರ್ ಯೂಸುಫ್

Updated on: Oct 28, 2023 | 7:51 PM

Australia Vs New Zealand: ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಟ್ರಾವಿಸ್ ಹೆಡ್ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 19.1 ಓವರ್​ಗಳಲ್ಲಿ 175 ರನ್​ಗಳ ಜೊತೆಯಾಟವಾಡಿದ ಬಳಿಕ ವಾರ್ನರ್ (81) ಔಟಾದರು.

AUS vs NZ: ಬರೋಬ್ಬರಿ 771 ರನ್​​ಗಳು: ಏಕದಿನ ವಿಶ್ವಕಪ್​ನಲ್ಲಿ ಹೊಸ ಇತಿಹಾಸ
Australia Vs New Zealand
Follow us on

ಏಕದಿನ ವಿಶ್ವಕಪ್​ನ 27ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ಹಂಗಾಮಿ ನಾಯಕ ಟಾಮ್ ಲಾಥಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಟ್ರಾವಿಸ್ ಹೆಡ್ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 19.1 ಓವರ್​ಗಳಲ್ಲಿ 175 ರನ್​ಗಳ ಜೊತೆಯಾಟವಾಡಿದ ಬಳಿಕ ವಾರ್ನರ್ (81) ಔಟಾದರು.

ಮತ್ತೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ ಟ್ರಾವಿಸ್ ಹೆಡ್ 67 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 109 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಗ್ಲೆನ್ ಮ್ಯಾಕ್ಸ್​ವೆಲ್ 41 ರನ್ ಬಾರಿಸಿದರೆ, ಜೋಶ್ ಇಂಗ್ಲಿಸ್ 38 ರನ್ ಕಲೆಹಾಕಿದರು. ಹಾಗೆಯೇ ಅಂತಿಮ ಓವರ್​ಗಳಲ್ಲಿ ಪ್ಯಾಟ್ ಕಮಿನ್ಸ್ ಬಿರುಸಿನ 37 ರನ್ ಸಿಡಿಸಿದರು. ಇದರೊಂದಿಗೆ ಆಸ್ಟ್ರೇಲಿಯಾ ತಂಡ 49.2 ಓವರ್​ಗಳಲ್ಲಿ 388 ರನ್ ಬಾರಿಸಿ ಆಲೌಟ್ ಆದರು.

389 ರನ್​ಗಳ ಕಠಿಣ ಗುರಿ ಪಡೆದ ನ್ಯೂಝಿಲೆಂಡ್ ತಂಡಕ್ಕೆ ಡೆವೊನ್ ಕಾನ್ವೆ (28) ಹಾಗೂ ವಿಲ್ ಯಂಗ್ (32) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಚಿನ್ ರವೀಂದ್ರ 77 ಎಸೆತಗಳಲ್ಲಿ ಸ್ಪೋಟಕ ಸೆಂಚುರಿ ಸಿಡಿಸಿದರು.

ಮತ್ತೊಂದೆಡೆ ಡೇರಿಲ್ ಮಿಚೆಲ್ 54 ರನ್​ಗಳ ಕಾಣಿಕೆ ನೀಡಿದರು. ಪರಿಣಾಮ 40 ಓವರ್​ಗಳ ವೇಳೆ ನ್ಯೂಝಿಲೆಂಡ್ ತಂಡದ ಸ್ಕೋರ್ 300ರ ಗಡಿಗೆ ಬಂದು ತಲುಪಿತು. ಈ ಹಂತದಲ್ಲಿ 89 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ 116 ರನ್ ಬಾರಿಸಿದ್ದ ರಚಿನ್ ರವೀಂದ್ರ ಬಿರುಸಿನ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದರು.

ಇದಾಗ್ಯೂ ಅಂತಿಮ ಹಂತದಲ್ಲಿ ಅಬ್ಬರಿಸಿದ ಜಿಮ್ಮಿ ನೀಶಮ್ ಸ್ಪೋಟಕ ಅರ್ಧಶತಕ ಸಿಡಿಸಿದರು. ಪರಿಣಾಮ ಕೊನೆಯ ಓವರ್​ನಲ್ಲಿ ನ್ಯೂಝಿಲೆಂಡ್ ತಂಡಕ್ಕೆ 19 ರನ್​ಗಳ ಅವಶ್ಯಕತೆಯಿತ್ತು. ಆದರೆ ಕೊನೆಯ 2 ಎಸೆತಗಳಲ್ಲಿ 7 ರನ್ ಬೇಕಿದ್ದ ವೇಳೆ ನೀಶಮ್ (58) ರನೌಟ್ ಆದರು. ಅಂತಿಮವಾಗಿ ನ್ಯೂಝಿಲೆಂಡ್ ತಂಡ 9 ವಿಕೆಟ್ ನಷ್ಟಕ್ಕೆ 383 ರನ್ ಬಾರಿಸುವ ಮೂಲಕ 5 ರನ್​ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.

ವಿಶ್ವಕಪ್​ನಲ್ಲಿ ವಿಶ್ವ ದಾಖಲೆ:

ಈ ಪಂದ್ಯದಲ್ಲಿ ಉಭಯ ತಂಡಗಳು ಸೇರಿ ಕಲೆಹಾಕಿದ್ದು ಬರೋಬ್ಬರಿ 771 ರನ್​ಗಳು. ಇದು ವಿಶ್ವಕಪ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಮೂಡಿಬಂದ ಗರಿಷ್ಠ ಸ್ಕೋರ್. ಇದಕ್ಕೂ ಮುನ್ನ ಈ ಬಾರಿಯ ವಿಶ್ವಕಪ್​ನಲ್ಲಿ ಸೌತ್ ಆಫ್ರಿಕಾ-ಶ್ರೀಲಂಕಾ ಜೊತೆಗೂಡಿ ಕಲೆಹಾಕಿದ್ದ 754 ರನ್​ಗಳು ಗರಿಷ್ಠ ಒಟ್ಟು ಮೊತ್ತವಾಗಿತ್ತು. ಇದೀಗ ಆಸ್ಟ್ರೇಲಿಯಾ (388) ಹಾಗೂ ನ್ಯೂಝಿಲೆಂಡ್ (383) 771 ರನ್ ಪೇರಿಸಿ ಏಕದಿನ ವಿಶ್ವಕಪ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಟ್ರಾವಿಸ್ ಹೆಡ್ , ಮಿಚೆಲ್ ಮಾರ್ಷ್ , ಸ್ಟೀವ್ ಸ್ಮಿತ್ , ಮಾರ್ನಸ್ ಲಾಬುಶೇನ್ , ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್) , ಗ್ಲೆನ್ ಮ್ಯಾಕ್ಸ್ ವೆಲ್ , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ , ಆ್ಯಡಮ್ ಝಂಪಾ , ಜೋಶ್ ಹ್ಯಾಝಲ್​ವುಡ್.

ಇದನ್ನೂ ಓದಿ: ಸ್ಪೋಟಕ ಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ಕನ್ನಡಿಗ ರಚಿನ್ ರವೀಂದ್ರ

ನ್ಯೂಝಿಲೆಂಡ್ ಪ್ಲೇಯಿಂಗ್ 11: ಡೆವೊನ್ ಕಾನ್ವೇ , ವಿಲ್ ಯಂಗ್ , ರಚಿನ್ ರವೀಂದ್ರ , ಡೇರಿಲ್ ಮಿಚೆಲ್ , ಟಾಮ್ ಲ್ಯಾಥಮ್ (ನಾಯಕ) , ಗ್ಲೆನ್ ಫಿಲಿಪ್ಸ್ , ಜೇಮ್ಸ್ ನೀಶಮ್ , ಮಿಚೆಲ್ ಸ್ಯಾಂಟ್ನರ್ , ಮ್ಯಾಟ್ ಹೆನ್ರಿ , ಲಾಕಿ ಫರ್ಗುಸನ್ , ಟ್ರೆಂಟ್ ಬೌಲ್ಟ್