ಐಪಿಎಲ್ ಸೀಸನ್ 15 (IPL 2022) ಮುಕ್ತಾಯದ ಬೆನ್ನಲ್ಲೇ ಟಿ20 ವಿಶ್ವಕಪ್ (T20 World Cup 2022) ಚರ್ಚೆಗಳು ಶುರುವಾಗಿದೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಚುಟುಕು ಕ್ರಿಕೆಟ್ ಕದನಕ್ಕೆ ಭಾರತ ಬಲಿಷ್ಠ ತಂಡವನ್ನು ರೂಪಿಸಬೇಕೆಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಿಂಚಿದ್ದ ಆಟಗಾರರನ್ನು ಒಳಗೊಂಡಂತೆ ತಂಡವನ್ನು ಆಯ್ಕೆ ಮಾಡುವುದು ಉತ್ತಮ ಎಂದಿದ್ದಾರೆ.
IPL 2022 ರಲ್ಲಿ ಆಟಗಾರರ ಪ್ರದರ್ಶನವನ್ನು ಆಧರಿಸಿ T20 ವಿಶ್ವಕಪ್‌ಗೆ ತಮ್ಮ ಆದ್ಯತೆಯ ಭಾರತ ತಂಡವನ್ನು ಹೆಸರಿಸಿರುವ ಆಕಾಶ್ ಚೋಪ್ರಾ, ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರನ್ನು ತಂಡದಿಂದ ಕೈಬಿಟ್ಟಿದ್ದಾರೆ. ಅಷ್ಟೇ ವಿರಾಟ್ ಕೊಹ್ಲಿಗೂ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿಲ್ಲ ಎಂಬುದೇ ಅಚ್ಚರಿ. ಇನ್ನು ನಾಯಕನಾಗಿ ಆಯ್ಕೆ ಮಾಡಿದ್ದು ಈ ಬಾರಿಯ ಐಪಿಎಲ್ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಎಂಬುದು ವಿಶೇಷ.
ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ನಲ್ಲಿ 16 ಪಂದ್ಯಗಳಲ್ಲಿ ಕೇವಲ 341 ರನ್ ಗಳಿಸಿದ್ದರು. ಇನ್ನು ರೋಹಿತ್ ಶರ್ಮಾ 14 ಪಂದ್ಯಗಳಲ್ಲಿ 268 ರನ್ ಮಾತ್ರ ಕಲೆಹಾಕಿದ್ದರು. ಹೀಗಾಗಿ ಇವರನ್ನು ಕೈಬಿಟ್ಟಿರುವುದಾಗಿ ಚೋಪ್ರಾ ತಿಳಿಸಿದ್ದಾರೆ. ಹಾಗೆಯೇ ಆರಂಭಿಕರಾಗಿ ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೆ ಮೂರನೇ ಕ್ರಮಾಂಕಕ್ಕೆ ಎಸ್ಆರ್ಹೆಚ್ ಪರ ಆಡಿದ್ದ ರಾಹುಲ್ ತ್ರಿಪಾಠಿಗೆ ಅವಕಾಶ ನೀಡಿದ್ದಾರೆ.
ಕೆಎಲ್ ರಾಹುಲ್ ಉತ್ತಮ ಆರಂಭಿಕ ಆಟಗಾರ. ಅವರು 15-17 ಓವರ್‌ಗಳವರೆಗೆ ಆಡಬಹುದು. ಈ ಬಾರಿ ಐಪಿಎಲ್ನಲ್ಲಿ 600 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಹೀಗಾಗಿ ಎಡಗೈ ದಾಂಡಿಗ ಇಶಾನ್ ಕಿಶನ್ ಜೊತೆ ರಾಹುಲ್ ಅವರನ್ನು ಆಯ್ಕೆ ಮಾಡಿದ್ದೇನೆ. 3ನೇ ಕ್ರಮಾಂಕದಲ್ಲಿ ರಾಹುಲ್ ತ್ರಿಪಾಠಿಯನ್ನು ಆಯ್ಕೆ ಮಾಡಿಕೊಂಡಿರುವ ಉದ್ದೇಶ, ಅವರು ಈ ಬಾರಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅಲ್ಲದೆ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
4ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಿದ್ದೇನೆ. ಇನ್ನು 5ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಆಡುವುದು ಉತ್ತಮ. 6ನೇ ಕ್ರಮಾಂಕದಲ್ಲಿ ಫಿನಿಶರ್ ಆಗಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಆಡಿದ್ರೆ ಟೀಮ್ ಹೆಚ್ಚು ಸಮತೋಲನದಿಂದ ಕೂಡಿರಲಿದೆ. ಹೀಗಾಗಿ ರಿಷಭ್ ಪಂತ್ ಅವರನ್ನು ಕೈಬಿಟ್ಟು ಡಿಕೆಗೆ ಸ್ಥಾನ ನೀಡಲಾಗಿದೆ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ. ಇನ್ನು ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಿದ್ದೇನೆ. ಇನ್ನು ಆಲ್ರೌಂಡರ್ಗಳಾಗಿ ದೀಪಕ್ ಹೂಡಾ, ಕೃನಾಲ್ ಪಾಂಡ್ಯ ಅವರನ್ನು ಆರಿಸಿದ್ದಾರೆ.
ಹಾಗೆಯೇ ಈ ತಂಡದಲ್ಲಿ ಬೌಲರ್ಗಳಾಗಿ ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅವೇಶ್ ಖಾನ್, ಚಹಲ್, ಮೊಹಮ್ಮದ್ ಶಮಿ ಕೂಡ ಇದ್ದಾರೆ. ಆಗಿದ್ರೆ ಆಕಾಶ್ ಚೋಪ್ರಾ ಅವರ ಟಿ20 ವಿಶ್ವಕಪ್ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ನೋಡೋಣ…
ಆಕಾಶ್ ಚೋಪ್ರಾ ಟಿ20 ವಿಶ್ವಕಪ್ ತಂಡ: ಕೆಎಲ್ ರಾಹುಲ್, ಇಶಾನ್ ಕಿಶನ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ದಿನೇಶ್ ಕಾರ್ತಿಕ್, ಕೃನಾಲ್ ಪಾಂಡ್ಯ, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ಕುಲದೀಪ್ ಯಾದವ್, ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾ .
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.