
ಬೆಂಗಳೂರು (ಸೆ. 27): ಭಾರತಕ್ಕೆ, ಏಷ್ಯಾ ಕಪ್ 2025 ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯವು ಕೇವಲ ಅಭ್ಯಾಸ ಪಂದ್ಯವಾಗಿತ್ತು. ಫೈನಲ್‌ಗೆ ಮೊದಲು, ಟೀಮ್ ಇಂಡಿಯಾ ಜಸ್ಪ್ರೀತ್ ಬುಮ್ರಾ ಮತ್ತು ಶಿವಂ ದುಬೆಗೆ ವಿಶ್ರಾಂತಿ ನೀಡಿತು. ಬೆಂಚ್ ಕಾದಿದ್ದ ಆಟಗಾರರಾದ ಅರ್ಶ್‌ದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಅವರಿಗೆ ಆಡಲು ಅವಕಾಶ ನೀಡಲಾಯಿತು. ಇದರ ಹೊರತಾಗಿಯೂ, ಫೈನಲ್‌ಗೆ ಮುಂಚಿತವಾಗಿ ಈ ಪಂದ್ಯವು ಟೀಮ್ ಇಂಡಿಯಾಕ್ಕೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ. ಹಾರ್ದಿಕ್ ಪಾಂಡ್ಯ (Hardik Pandya) ಮೊದಲ ಓವರ್ ಬೌಲ್ ಮಾಡಿದ ನಂತರ ಸೆಳೆತದಿಂದಾಗಿ ಮೈದಾನವನ್ನು ತೊರೆದರು. ಅವರು ಬಳಿಕ ಮೈದಾನದಕ್ಕೆ ಹಿಂತಿರುಗಲಿಲ್ಲ.
ಹಾರ್ದಿಕ್ ಪಾಂಡ್ಯ ಜೊತೆಗೆ, ಟೀಮ್ ಇಂಡಿಯಾದ ಯುವ ಬ್ಯಾಟ್ಸ್‌ಮನ್‌ಗಳಾದ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಕೂಡ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ತೊಂದರೆ ಅನುಭವಿಸಿದ್ದಾರೆ. 10 ನೇ ಓವರ್‌ನ ಎರಡನೇ ಎಸೆತದ ನಂತರ ಅಭಿಷೇಕ್ ನಿರ್ಗಮಿಸಿದರು. 18 ನೇ ಓವರ್‌ನಲ್ಲಿ ತಿಲಕ್ ವರ್ಮಾ ಕೂಡ ಗಾಯಗೊಂಡರು. ಅಕ್ಷರ್ ಪಟೇಲ್ ಎಸೆದ ಬೌಲಿಂಗ್‌ನಲ್ಲಿ ದಾಸುನ್ ಶನಕ ಮಿಡ್-ವಿಕೆಟ್‌ನಲ್ಲಿ ಸಿಕ್ಸರ್ ಬಾರಿಸಿದರು. ತಿಲಕ್ ವರ್ಮಾ ಚೆಂಡನ್ನು ತಡೆಯಲು ಎತ್ತರಕ್ಕೆ ಹಾರಿದರು. ಲ್ಯಾಂಡ್ ಆದ ನಂತರ, ತಿಲಕ್ ಅವರ ಕಾಲಿನಲ್ಲಿ ತೊಂದರೆ ಕಾಣಿಸಿಕೊಂಡಿತು ಮತ್ತು ಸರಿಯಾಗಿ ನಡೆಯಲು ಸಾಧ್ಯವಾಗಲಿಲ್ಲ. ಅವರು ಮೈದಾನವನ್ನು ತೊರೆದರು. ಹೀಗಾಗಿ ಶಿವಂ ದುಬೆ ಫೀಲ್ಡಿಂಗ್‌ಗೆ ಬಂದರು.
ಹಾರ್ದಿಕ್ ಮತ್ತು ಅಭಿಷೇಕ್ ಸೆಳೆತದಿಂದ ಬಳಲುತ್ತಿದ್ದರು, ಅದಕ್ಕಾಗಿಯೇ ಇಬ್ಬರೂ ಆಟಗಾರರು ಮೈದಾನವನ್ನು ತೊರೆದರು. ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಅಭಿಷೇಕ್ ಚೆನ್ನಾಗಿದ್ದಾರೆ ಎಂದು ಹೇಳಿದ್ದಾರೆ, ಆದರೆ ಹಾರ್ದಿಕ್ ಅವರನ್ನು ಪ್ರಸ್ತುತ ಮಾನಿಟರಿಂಗ್ ಮಾಡುತ್ತಿದ್ದೇವೆ. ದುಬೈನಲ್ಲಿ ಇದು ತುಂಬಾ ಬಿಸಿಲಿನ ವಾತಾವರಣವಾಗಿದ್ದು, ಅದಕ್ಕಾಗಿಯೇ ಆಟಗಾರರು ಸೆಳೆತವನ್ನು ಅನುಭವಿಸುತ್ತಿದ್ದಾರೆ.
2025 ರ ಏಷ್ಯಾ ಕಪ್ ಫೈನಲ್ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿದೆ. ಎರಡೂ ತಂಡಗಳು ಸೆಪ್ಟೆಂಬರ್ 28 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಹೀಗಿರುವಾಗ ಈ ಮಹತ್ವದ ಪಂದ್ಯಕ್ಕೆ ಈ ಮೂವರು ಆಟಗಾರರು ಫಿಟ್ ಆಗಿರುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಅಭಿಷೇಕ್ ಟೂರ್ನಿಯ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಹಾರ್ದಿಕ್ ಪಾಂಡ್ಯ ಫಿನಿಷರ್ ಪಾತ್ರವನ್ನು ನಿರ್ವಹಿಸುತ್ತಾರೆ ಮತ್ತು ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡುತ್ತಾರೆ. ತಿಲಕ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮೂವರು ಪ್ರಮುಖ ಆಟಗಾರರನ್ನು ಭಾರತ ಮಿಸ್ ಮಾಡಿಕೊಂಡರೆ ಹೊಡೆತ ಬೀಳುವುದು ಖಚಿತ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ