ಇದು ಆರಂಭವಷ್ಟೇ… ಅಭಿಷೇಕ್ ಆಟಕ್ಕೆ ಯುವರಾಜ್ ಸಿಂಗ್ ಮೆಚ್ಚುಗೆ

|

Updated on: Jul 08, 2024 | 12:26 PM

Abhishek Sharma: ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರಿಂದ ಅಭಿಷೇಕ್ ಶರ್ಮಾ ಕೋಚಿಂಗ್ ಪಡೆದಿದ್ದಾರೆ. ಈ ಬಾರಿಯ ಐಪಿಎಲ್​​ಗೂ ಮುನ್ನ ಅಭಿಷೇಕ್ ಯುವರಾಜ್ ಸಿಂಗ್ ಅವರ ಕ್ಯಾಂಪ್​ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ನೇರವಾಗಿ ಐಪಿಎಲ್​ಗೆ ಆಗಮಿಸಿದ್ದ ಯುವ ದಾಂಡಿಗ ಸನ್​ರೈಸರ್ಸ್ ಹೈದರಾಬಾದ್ ಪರ ಭರ್ಜರಿ ಪ್ರದರ್ಶನ ನೀಡಿದ್ದರು. ಈ ಪ್ರದರ್ಶನದ ಫಲವಾಗಿ ಇದೀಗ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದಿದ್ದಾರೆ.

ಝಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ದಾಂಡಿಗ ಅಭಿಷೇಕ್ ಶರ್ಮಾ (Abhishek Sharma) ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಮೊದಲ ಓವರ್​ನಲ್ಲೇ ಸಿಕ್ಸ್ ಸಿಡಿಸುವ ಮೂಲಕ ರನ್​ ಖಾತೆ ತೆರೆದಿದ್ದರು.ಇದಾದ ಬಳಿಕ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಅಭಿಷೇಕ್ ಶರ್ಮಾ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಆ ಬಳಿಕ ಶುರುವಾದ ಸಿಡಿಲಬ್ಬರಕ್ಕೆ ಝಿಂಬಾಬ್ವೆ ಬೌಲರ್​ಗಳು ಹೈರಾಣರಾದರು. ಪರಿಣಾಮ ಕೇವಲ 46 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಶತಕ ಸಿಡಿಸಿ ಔಟಾದರು.

ಈ ಶತಕದ ನೆರವಿನಿಂದ ಟೀಮ್ ಇಂಡಿಯಾ 234 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಝಿಂಬಾಬ್ವೆ ತಂಡವು ಕೇವಲ 134 ರನ್​ಗಳಿಗೆ ಆಲೌಟ್ ಆಗಿ 100 ರನ್​ಗಳ ಹೀನಾಯ ಸೋಲನುಭವಿಸಿದೆ. ಈ ಗೆಲುವಿನ ಬಳಿಕ ಅಭಿಷೇಕ್ ಶರ್ಮಾ ತಮ್ಮ ಪೋಷಕರಿಗೆ ವಿಡಿಯೋ ಕಾಲ್ ಮಾಡಿದ್ದರು. ಇದೇ ವೇಳೆ ತಂದೆ-ತಾಯಿ ಮಗನ ಸೆಂಚುರಿ ಬಗ್ಗೆ ಖುಷಿ ವ್ಯಕ್ತಪಡಿಸಿದ್ದರು.

ಇದಾದ ಬಳಿಕ ಅಭಿಷೇಕ್ ಶರ್ಮಾ ಕರೆ ಮಾಡಿದ್ದು ತನ್ನ ಗುರು ಯುವರಾಜ್ ಸಿಂಗ್​ಗೆ ಎಂಬುದು ವಿಶೇಷ. ಈ ವಿಡಿಯೋ ಕರೆಯನ್ನು ಸ್ವೀಕರಿಸಿದ ಯುವಿ, ನಮ್ಮ ಆಟದ ಬಗ್ಗೆ ಹೆಮ್ಮೆಯಿದೆ. ಇದು ಆರಂಭವಷ್ಟೇ, ನಿನ್ನಿಂದ ಇನಷ್ಟು ನಿರೀಕ್ಷಿಸುತ್ತಿದ್ದೇನೆ ಎಂದು ಅಭಿಷೇಕ್ ಶರ್ಮಾ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅಭಿಷೇಕ್ ಶರ್ಮಾ ಧನ್ಯವಾದ ಹೇಳಿದ್ದಾರೆ. ಇದೀಗ ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

 

Follow us on