Sanath Jayasuriya: ಸನತ್ ಜಯಸೂರ್ಯ ಶ್ರೀಲಂಕಾ ತಂಡದ ನೂತನ ಕೋಚ್

India vs Sri Lanka: ಶ್ರೀಲಂಕಾ ಪರ 586 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಸನತ್ ಜಯಸೂರ್ಯ ಒಟ್ಟು 21032 ರನ್ ಕಲೆಹಾಕಿದ್ದಾರೆ. ಹಾಗೆಯೇ 440 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಇದೀಗ ಸತತ ಸೋಲುಗಳಿಂದ ಕಂಗೆಟ್ಟಿರುವ ಲಂಕಾದ ತಂಡ ಸಾರಥ್ಯವನ್ನು ಲೆಜೆಂಡ್ ಆಟಗಾರನಿಗೆ ವಹಿಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಂದಾಗಿದೆ.

Sanath Jayasuriya: ಸನತ್ ಜಯಸೂರ್ಯ ಶ್ರೀಲಂಕಾ ತಂಡದ ನೂತನ ಕೋಚ್
Sanath Jayasuriya
Follow us
ಝಾಹಿರ್ ಯೂಸುಫ್
|

Updated on:Jul 08, 2024 | 2:54 PM

ಶ್ರೀಲಂಕಾ ತಂಡದ ನೂತನ ಕೋಚ್ ಆಗಿ ಮಾಜಿ ಆಟಗಾರ ಸನತ್ ಜಯಸೂರ್ಯ (Sanath Jayasuriya) ನೇಮಕವಾಗಲಿದ್ದಾರೆ. ಈ ಹಿಂದೆ ಮುಖ್ಯ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದ ಕ್ರಿಸ್ ಸಿಲ್ವರ್‌ವುಡ್ ಟಿ20 ವಿಶ್ವಕಪ್​ನಲ್ಲಿನ ಹೀನಾಯ ಸೋಲಿನ ಬೆನ್ನಲ್ಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಅವರಿಂದ ತೆರವಾದ ಸ್ಥಾನಕ್ಕೆ ಶ್ರೀಲಂಕಾ ತಂಡದ ಮಾಜಿ ಆಲ್​ರೌಂಡರ್ ಸನತ್ ಜಯಸೂರ್ಯ ಅವರನ್ನು ಆಯ್ಕೆ ಮಾಡಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಂದಾಗಿದೆ.

ಈ ಬಗ್ಗೆ ಮಾತನಾಡಿರುವ ಸನತ್ ಜಯಸೂರ್ಯ, ಶ್ರೀಲಂಕಾ ತಂಡದ ಕೋಚ್ ಹುದ್ದೆಯನ್ನು ಅಲಂಕರಿಸುವಂತೆ ಮಂಡಳಿ ನನ್ನಲ್ಲಿ ಕೇಳಿಕೊಂಡಿದೆ. ಈ ಮನವಿಯನ್ನು ನಾನು ಸಂತೋಷದಿಂದಲೇ ಸ್ವೀಕರಿಸಿದ್ದು, ಅದರಂತೆ ಮುಂಬರುವ ಸರಣಿಗಳಲ್ಲಿ ಶ್ರೀಲಂಕಾ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದೇನೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಸನತ್ ಜಯಸೂರ್ಯ ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಮುಖ್ಯ ಆಯ್ಕೆಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಲಂಕಾ ತಂಡದ ತರಬೇತುದಾರನಾಗಿ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.

ಭಾರತದ ವಿರುದ್ಧ ಹೊಸ ಇನಿಂಗ್ಸ್:

ಝಿಂಬಾಬ್ವೆ ಪ್ರವಾಸದ ಬಳಿಕ ಭಾರತ ತಂಡವು ಶ್ರೀಲಂಕಾ ವಿರುದ್ಧ ಸರಣಿ ಆಡಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಒಟ್ಟು 6 ಪಂದ್ಯಗಳನ್ನಾಡಲಿದೆ. ಇದೇ ವೇಳೆ ಸನತ್ ಜಯಸೂರ್ಯ ಶ್ರೀಲಂಕಾ ತಂಡದ ಕೋಚ್ ಆಗಿ ಇನಿಂಗ್ಸ್ ಆರಂಭಿಸಲಿದ್ದಾರೆ.

ಇನ್ನು ಭಾರತ ಮತ್ತು ಶ್ರೀಲಂಕಾ ನಡುವಣ ಸರಣಿಯ ದಿನಾಂಕ ಇನ್ನೂ ಕೂಡ ನಿಗದಿ ಮಾಡಲಾಗಿಲ್ಲ. ಇದಾಗ್ಯೂ ಜುಲೈ 27 ರಿಂದ ಆಗಸ್ಟ್ 7 ರ ನಡುವೆ ಉಭಯ ತಂಡಗಳು 3 ಟಿ20 ಮತ್ತು 3 ಏಕದಿನ ಪಂದ್ಯಗಳನ್ನಾಡಲಿದೆ ಎಂದು ತಿಳಿದು ಬಂದಿದೆ.

ಸನತ್ ಜಯಸೂರ್ಯ ವೃತ್ತಿಜೀವನ:

ಶ್ರೀಲಂಕಾ ಪರ 110 ಟೆಸ್ಟ್ ಪಂದ್ಯಗಳನ್ನಾಡಿರುವ ಸನತ್ ಜಯಸೂರ್ಯ ಒಟ್ಟು 6973 ರನ್ ಕಲೆಹಾಕಿದ್ದಾರೆ. ಈ ವೇಳೆ 3 ದ್ವಿಶತಕ, 31 ಅರ್ಧಶತಕ ಹಾಗೂ 14 ಶತಕಗಳನ್ನು ಸಿಡಿಸಿದ್ದಾರೆ.

ಹಾಗೆಯೇ 445 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಎಡಗೈ ದಾಂಡಿಗ, 28 ಶತಕ ಹಾಗೂ 68 ಅರ್ಧಶತಕಗಳೊಂದಿಗೆ ಒಟ್ಟು 13430 ರನ್ ಕಲೆಹಾಕಿದ್ದಾರೆ.

ಇನ್ನು ಲಂಕಾ ಪರ 31 ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಸನತ್ ಜಯಸೂರ್ಯ 4 ಅರ್ಧಶತಕಗಳೊಂದಿಗೆ 629 ರನ್ ಗಳಿಸಿದ್ದಾರೆ. ಇನ್ನು ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್​ನಲ್ಲಿ ಕ್ರಮವಾಗಿ 98, 323 ಮತ್ತು 19 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಶ್ರೀಲಂಕಾ ತಂಡ ಕಂಡ ಅತ್ಯಂತ ಶ್ರೇಷ್ಠ ಆಲ್​ರೌಂಡರ್​ ಆಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: Team India: ಕೊನೆಯ 10 ಓವರ್​ಗಳಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ

ಇದೀಗ ಸತತ ಸೋಲಿನಿಂದ ಕಂಗೆಟ್ಟಿರುವ ಶ್ರೀಲಂಕಾ ತಂಡಕ್ಕೆ ಲೆಜೆಂಡ್ ಸನತ್ ಜಯಸೂರ್ಯ ಮುಖ್ಯ ಕೋಚ್ ಆಗಿ ನೇಮಕವಾಗುತ್ತಿರುವುದು ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ.

Published On - 2:24 pm, Mon, 8 July 24