Abu Dhabi T10 League: ಅಬುಧಾಬಿಯಲ್ಲಿ ನಡೆಯುತ್ತಿರುವ ಟಿ10 ಲೀಗ್ನಲ್ಲಿ ಪಾಕ್ ಆಟಗಾರ ಇಫ್ತಿಕಾರ್ ಅಹ್ಮದ್ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಡೆಲ್ಲಿ ಬುಲ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ಟೈಗರ್ಸ್ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಬಾಂಗ್ಲಾ ಪರ ಹಝ್ರತುಲ್ಲಾ ಝಝೈ ಹಾಗೂ ಜೋ ಕ್ಲಾರ್ಕ್ ಇನಿಂಗ್ಸ್ ಆರಂಭಿಸಿದ್ದರು. ಆದರೆ ಈ ಆರಂಭಿಕರಿಂದ ನಿರೀಕ್ಷಿತ ಆಟ ಮೂಡಿಬಂದಿರಲಿಲ್ಲ. ತಂಡದ ಮೊತ್ತ 38 ಆಗುವಷ್ಟರಲ್ಲಿ ಇಬ್ಬರು ಪೆವಿಲಿಯನ್ ಕಡೆ ಮುಖ ಮಾಡಿದ್ದರು. ಈ ವೇಳೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಫ್ತಿಕಾರ್ ಅಹ್ಮದ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಡೆಲ್ಲಿ ಬುಲ್ಸ್ ಬೌಲರ್ಗಳ ಬೆಂಡೆತ್ತಿದ ಇಫ್ತಿಕಾರ್ 8 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳನ್ನು ಬಾರಿಸಿದರು.
ಪರಿಣಾಮ ಕೇವಲ 30 ಎಸೆತಗಳಲ್ಲಿ ಇಫ್ತಿಕಾರ್ ಅಹ್ಮದ್ ಬ್ಯಾಟ್ನಿಂದ 83 ರನ್ಗಳು ಮೂಡಿಬಂತು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಬಾಂಗ್ಲಾ ಟೈಗರ್ಸ್ ತಂಡವು ನಿಗದಿತ 10 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕಿತು.
60 ಎಸೆತಗಳಲ್ಲಿ 134 ರನ್ಗಳ ಬೃಹತ್ ಟಾರ್ಗೆಟ್ ಪಡೆದ ಡೆಲ್ಲಿ ಬುಲ್ಸ್ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಟಾಮ್ ಬ್ಯಾಂಟನ್ (4) ಹಾಗೂ ರಿಲೀ ರೊಸ್ಸೊ (15) ಬೇಗನೆ ನಿರ್ಗಮಿಸಿದರು. ಇನ್ನು ಜೋರ್ಡನ್ ಕೋಕ್ಸ್ 34 ರನ್ಗಳ ಕಾಣಿಕೆ ನೀಡಿದರು.
ಆದರೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಿಮ್ ಡೇವಿಡ್ ಇಡೀ ಪಂದ್ಯದ ಚಿತ್ರಣ ಬದಲಿಸುವ ಸೂಚನೆ ನೀಡಿದರು. ಸ್ಪೋಟಕ ಇನಿಂಗ್ಸ್ ಆಡಿದ ಡೇವಿಡ್ 6 ಭರ್ಜರಿ ಸಿಕ್ಸ್ನೊಂದಿಗೆ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಅಂತಿಮ ಹಂತದಲ್ಲಿ ಉತ್ತಮ ದಾಳಿ ಸಂಘಟಿಸಿದ ಬಾಂಗ್ಲಾ ಟೈಗರ್ಸ್ ತಂಡವು 12 ರನ್ಗಳಿಂದ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾದರು.
The battle between Iftikhar Ahmed and Harbhajan Singh ?????#AbuDhabiT10 pic.twitter.com/pg8Nr7uBvp
— Farid Khan (@_FaridKhan) November 29, 2022
ಬಾಂಗ್ಲಾ ಟೈಗರ್ಸ್ ಪ್ಲೇಯಿಂಗ್ 11: ಹಝ್ರತುಲ್ಲಾ ಝಝೈ , ಜೋ ಕ್ಲಾರ್ಕ್ (ವಿಕೆಟ್ ಕೀಪರ್) , ಇಫ್ತಿಕಾರ್ ಅಹ್ಮದ್ , ಎವಿನ್ ಲೆವಿಸ್ , ಕಾಲಿನ್ ಮುನ್ರೋ , ಶಕೀಬ್ ಅಲ್ ಹಸನ್ (ನಾಯಕ) , ಉಮೈರ್ ಅಲಿ , ಬೆನ್ನಿ ಹೋವೆಲ್ , ರೋಹನ್ ಮುಸ್ತಫಾ , ಮೊಹಮ್ಮದ್ ಅಮೀರ್ , ಲ್ಯೂಕ್ ಫ್ಲೆಚರ್
ಡೆಲ್ಲಿ ಬುಲ್ಸ್ ಪ್ಲೇಯಿಂಗ್ 11: ಟಾಮ್ ಬ್ಯಾಂಟನ್ (ವಿಕೆಟ್ ಕೀಪರ್) , ರಿಲಿ ರೊಸ್ಸೊ , ಟಿಮ್ ಡೇವಿಡ್ , ಡ್ವೇನ್ ಬ್ರಾವೋ (ನಾಯಕ) , ಕೀಮೋ ಪಾಲ್ , ರಿಚರ್ಡ್ ಗ್ಲೀಸನ್ , ಇಮಾದ್ ವಾಸಿಮ್ , ಜೋರ್ಡಾನ್ ಕೊಕ್ಸ್ , ಹರ್ಭಜನ್ ಸಿಂಗ್ , ಶಿರಾಜ್ ಅಹ್ಮದ್ , ಆಸಿಫ್ ಖಾನ್