ಸೆಲ್ಫಿ ಗಲಾಟೆ; ಪೃಥ್ವಿ ಶಾ ವಿರುದ್ಧ ಐಪಿಸಿಯ 10 ಕ್ಕೂ ಹೆಚ್ಚು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ ಸಪ್ನಾ!
ಜಾಮೀನು ಪಡೆದು ಹೊರಬಂದಿರುವ ಸಪ್ನಾ, ಐಪಿಸಿ ಸೆಕ್ಷನ್ 34, 120ಎ, 144, 146, 148, 149, 323, 324, 351, 354 ಮತ್ತು 509 ಅಡಿಯಲ್ಲಿ ಪೃಥ್ವಿ ಶಾ ವಿರುದ್ಧ ದೂರು ದಾಖಲಿಸಿದ್ದಾರೆ.
ಟೀಂ ಇಂಡಿಯಾ (Team India) ಆಟಗಾರ ಪೃಥ್ವಿ ಶಾ (Prithvi Shaw) ಹಾಗೂ ಭೋಜ್‌ಪುರಿ ನಟಿ ಸಪ್ನಾ ಗಿಲ್ (Sapna Gill) ನಡುವಣ ಸೆಲ್ಫಿ ವಿವಾದ ಸದ್ಯಕ್ಕೆ ಅಂತ್ಯ ಕಾಣುವ ಲಕ್ಷಣಗಳು ಕಾಣುತ್ತಿಲ್ಲ. ಕೆಲವು ದಿನಗಳ ಹಿಂದೆ ಸೆಲ್ಫಿ ವಿಚಾರಕ್ಕೆ ಪೃಥ್ವಿ ಶಾ ಜೊತೆ ಜಗಳ ಮಾಡಿಕೊಂಡಿದ್ದ ಭೋಜ್‌ಪುರಿ ನಟಿ ಸಪ್ನಾ ಗಿಲ್, ಇದೀಗ ಪೃಥ್ವಿ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಶಾ ವಿರುದ್ಧ ಸಪ್ನಾ ಐಪಿಸಿಯ 10 ಕ್ಕೂ ಹೆಚ್ಚು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಪ್ನಾ, ಪೃಥ್ವಿ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಮಾರಕ ಆಯುಧದಿಂದ ಹಲ್ಲೆ ಆರೋಪ ಹೊರಿಸಿದ್ದಾರೆ. ಪೃಥ್ವಿ ಶಾ ಸೆಲ್ಫಿ ನಿರಾಕರಿಸಿದಕ್ಕೆ ಆರಂಭವಾದ ಈ ಜಗಳ ತಾರಕಕ್ಕೇರಿತ್ತು. ಹೋಟೆಲ್ನಿಂದ ಹೊರ ಬಂದ ಶಾ ಹಾಗೂ ಅವರ ಸ್ನೇಹಿತ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಸಪ್ನಾ ಹಾಗೂ ಆಕೆಯ ಸ್ನೇಹಿತರು ಬೇಸ್ ಬಾಲ್ ಬ್ಯಾಟ್ನಿಂದ ದಾಳಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸದಂತೆ ಮುಂಬೈ ಪೋಲಿಸರು ಪ್ರಕರಣವನ್ನು ಕೂಡ ದಾಖಲಿಸಿದ್ದರು.
ಮಾರಕಾಯುಧದಿಂದ ಹಲ್ಲೆ ಮಾಡಿದ ಆರೋಪ
ದೂರಿನನ್ವಯ ಪೋಲಿಸರು ಸಪ್ನಾ ಗಿಲ್ ಹಾಗೂ ಅವರ ಸ್ನೇಹಿತರನ್ನು ಬಂಧಿಸಿದ್ದರು. ಇದೀಗ ಜಾಮೀನು ಪಡೆದು ಹೊರಬಂದಿರುವ ಸಪ್ನಾ, ಐಪಿಸಿ ಸೆಕ್ಷನ್ 34, 120ಎ, 144, 146, 148, 149, 323, 324, 351, 354 ಮತ್ತು 509 ಅಡಿಯಲ್ಲಿ ಪೃಥ್ವಿ ಶಾ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಹಿಂದೆ ಪೃಥ್ವಿ ಮೇಲೆ ದಾಳಿ ನಡೆಸಿದ್ದ ಸಪ್ನಾ ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಮುಂಬೈ ನ್ಯಾಯಾಲಯವು ಸಪ್ನಾ ಅವರನ್ನು ಫೆಬ್ರವರಿ 20 ಕ್ಕೆ ಪೊಲೀಸ್ ಕಸ್ಟಡಿಗೆ ಕಳುಹಿಸಿತ್ತು. ನಂತರ ಈ ಪ್ರಕರಣದಲ್ಲಿ ಜಾಮೀನು ಪಡೆದ ಸಪ್ನಾ, ತಕ್ಷಣವೇ ಶಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪೃಥ್ವಿ ಶಾ ಮೇಲೆ ದಾಳಿಗೆ ಯತ್ನಿಸಿದ ಆರೋಪ ಹೊತ್ತಿರುವ ಸಪ್ನಾ ಗಿಲ್ ಯಾರು ಗೊತ್ತಾ?
ಏನಿದು ಸೆಲ್ಫಿ ಗಲಾಟೆ?
ಕಳೆದ ಬುಧವಾರದಂದು ಈ ಸೆಲ್ಫಿ ಪ್ರಕರಣ ನಡೆದಿತ್ತು. ಕ್ರಿಕೆಟಿಗ ಪೃಥ್ವಿ ಶಾ ತನ್ನ ಸ್ನೇಹಿತನೊಂದಿಗೆ ಹೋಟೆಲ್‌ಗೆ ಹೋಗಿದ್ದರು. ಈ ವೇಳೆ ಸಪ್ನಾ ತನ್ನ ಸ್ನೇಹಿತನೊಂದಿಗೆ ಪೃಥ್ವಿ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಪದೇ ಪದೇ ಸೆಲ್ಫಿ ತೆಗೆದುಕೊಂಡಿದ್ದಕ್ಕೆ ಸಿಟ್ಟಾದ ಶಾ ಹೋಟೆಲ್ ಮ್ಯಾನೇಜರ್‌ಗೆ ಈ ಇಬ್ಬರನ್ನು ಹೋಟೆಲ್ನಿಂದ ಹೊರ ಹಾಕುವಂತೆ ಹೇಳಿದ್ದಾರೆ. ಇದರಿಂದ ಬೇಸರಗೊಂಡ ಸಪ್ನಾ ಮತ್ತು ಶೋಭಿತ್, ಪೃಥ್ವಿ ಹೋಟೆಲ್ನಿಂದ ಹೊರಬರಲು ಸುಮಾರು 25 ನಿಮಿಷಗಳ ಕಾಲ ಕಾದು ಕುಳಿತು, ಪೃಥ್ವಿ ಶಾ ಹೋಟೆಲ್ನಿಂದ ಹೊರಬರುತ್ತಲೆ ಕಾರನ್ನು ಹಿಂಬಾಲಿಸಿ ದಾಳಿಗೆ ಯತ್ನಿಸಿದ್ದರು.
ಸಪ್ನಾ ಕೂಡ ಪೃಥ್ವಿ ಮೇಲೆ ಹಲ್ಲೆಗೆ ಯತ್ನಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಾದ ನಂತರ ಶಾ ಅವರ ಸ್ನೇಹಿತ ಆಶಿಶ್ ಸಪ್ನಾ ಮತ್ತು ಆಕೆಯ ಸ್ನೇಹಿತರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ಮರುದಿನ, ಗುರುವಾರ ಶಾ ಮೇಲೆ ಹಲ್ಲೆ ಮತ್ತು ಬೆದರಿಕೆ ಹಾಕಿರುವ ಆರೋಪದ ಮೇಲೆ ಓಶಿವಾರ ಪೊಲೀಸರು ಸಪ್ನಾ ಅವರನ್ನು ಬಂಧಿಸಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:53 am, Wed, 22 February 23