ಒಮಾನ್ನ ಅಲ್ ಎಮಿರಾತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎಮರ್ಜಿಂಗ್ ಏಷ್ಯಾಕಪ್ ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎ ತಂಡಕ್ಕೆ ಅಫ್ಘಾನಿಸ್ತಾನ್ ಸೋಲುಣಿಸಿದೆ. ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ್ ಎ ತಂಡ ಫೈನಲ್ಗೆ ಪ್ರವೇಶಿಸಿದರೆ, ಟೀಮ್ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ಎ ತಂಡವು ಮೊದಲು ಬ್ಯಾಟಿಂಗ್ ಮಾಡಿತು.
ಆರಂಭಿಕರಾಗಿ ಕಣಕ್ಕಿಳಿದ ಝುಬೈದ್ ಅಕ್ಬರಿ (64) ಹಾಗೂ ಸೆದಿಖುಲ್ಲಾ ಅಟಲ್ (83) ಮೊದಲ ವಿಕೆಟ್ಗೆ 137 ರನ್ಗಳ ಜೊತೆಯಾಟವಾಡಿದರು. ಇನ್ನು ಕರೀಮ್ ಜನ್ನತ್ 20 ಎಸೆತಗಳಲ್ಲಿ 41 ರನ್ ಬಾರಿಸಿದರು. ಈ ಮೂಲಕ ಅಫ್ಘಾನಿಸ್ತಾನ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತು.
207 ರನ್ಗಳ ಕಠಿಣ ಗುರಿ ಪಡೆದ ಭಾರತ ಎ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಪ್ರಭ್ ಸಿಮ್ರಾನ್ ಸಿಂಗ್ (19) ಹಾಗೂ ಅಭಿಷೇಕ್ ಶರ್ಮಾ (7) ಬೇಗನೆ ವಿಕೆಟ್ ಒಪ್ಪಿಸಿದರೆ, ಆ ಬಳಿಕ ಬಂದ ತಿಲಕ್ ವರ್ಮಾ 16 ರನ್ಗಳಿಸಿ ಔಟಾದರು.
ಈ ಹಂತದಲ್ಲಿ ಕಣಕ್ಕಿಳಿದ ಆಯುಷ್ ಬದೋನಿ 31 ರನ್ ಬಾರಿಸಿದರೆ, ನೆಹಾಲ್ ವಧೇರಾ 20 ರನ್ಗಳ ಕೊಡುಗೆ ನೀಡಿದರು. ಇನ್ನು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಮಣ್ದೀಪ್ ಸಿಂಗ್ ಸ್ಪೋಟಕ ಇನಿಂಗ್ಸ್ ಆಡಿದರು.
ಕೇವಲ 34 ಎಸೆತಗಳನ್ನು ಎದುರಿಸಿದ ರಮಣ್ದೀಪ್ 2 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 64 ರನ್ ಚಚ್ಚಿದರು. ಇದಾಗ್ಯೂ ಅವರಿಗೆ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ ಎ ತಂಡವು 20 ಓವರ್ಗಳಲ್ಲಿ 7 ವಿಕೆಟ್ ನಷ್ಟದೊಂದಿಗೆ 186 ರನ್ ಬಾರಿಸಿ 20 ರನ್ಗಳಿಂದ ಸೋಲೊಪ್ಪಿಕೊಂಡಿತು.
ಭಾರತ ಎ ಪ್ಲೇಯಿಂಗ್ 11: ಪ್ರಭ್ ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್) , ಅಭಿಷೇಕ್ ಶರ್ಮಾ , ತಿಲಕ್ ವರ್ಮಾ (ನಾಯಕ) , ಆಯುಷ್ ಬದೋನಿ , ನೆಹಾಲ್ ವಧೇರಾ , ರಮಣ್ದೀಪ್ ಸಿಂಗ್ , ನಿಶಾಂತ್ ಸಿಂಧು , ಅಂಶುಲ್ ಕಾಂಬೋಜ್ , ರಾಹುಲ್ ಚಹರ್ , ರಸಿಖ್ ದಾರ್ ಸಲಾಂ , ಆಕಿಬ್ ಖಾನ್.
ಇದನ್ನೂ ಓದಿ: 4 ಓವರ್ಗಳಲ್ಲಿ 93 ರನ್ಗಳು… 7 ರನ್ಗಳಿಂದ ಬೌಲರ್ಗೆ ಶತಕ ಮಿಸ್..!
ಅಫ್ಘಾನಿಸ್ತಾನ್ ಎ ಪ್ಲೇಯಿಂಗ್ 11: ಸೆದಿಖುಲ್ಲಾ ಅಟಲ್ , ಝುಬೈದ್ ಅಕ್ಬರಿ , ದರ್ವಿಶ್ ರಸೂಲಿ (ನಾಯಕ) , ಮೊಹಮ್ಮದ್ ಇಶಾಕ್ (ವಿಕೆಟ್ ಕೀಪರ್) , ಕರೀಂ ಜನ್ನತ್ , ಶಾಹಿದುಲ್ಲಾ ಕಮಾಲ್ , ಶರಫುದ್ದೀನ್ ಅಶ್ರಫ್ , ಅಬ್ದುಲ್ ರೆಹಮಾನ್ , ಅಲ್ಲಾ ಗಜನ್ಫರ್ , ಖೈಸ್ ಅಹ್ಮದ್ , ಬಿಲಾಲ್ ಸಮಿ.
ಉದಯೋನ್ಮುಖ ತಂಡಗಳ ಏಷ್ಯಾಕಪ್ ಟಿ20 ಟೂರ್ನಿಯ ಮೊದಲ ಸೆಮಿಫೈನಲ್ನಲ್ಲಿ ಪಾಕಿಸ್ತಾನ್ ವಿರುದ್ಧ ಶ್ರೀಲಂಕಾ 7 ವಿಕೆಟ್ಗಳ ಜಯ ಸಾಧಿಸಿದೆ. ಹಾಗೆಯೇ ಎರಡನೇ ಸೆಮಿಫೈನಲ್ನಲ್ಲಿ ಭಾರತ ವಿರುದ್ಧ ಗೆಲುವು ದಾಖಲಿಸಿರುವ ಅಫ್ಘಾನಿಸ್ತಾನ್ ತಂಡವು ಫೈನಲ್ಗೆ ಎಂಟ್ರಿಕೊಟ್ಟಿದೆ. ಅದರಂತೆ ಅಕ್ಟೋಬರ್ 27 ರಂದು ನಡೆಯಲಿರುವ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ಎ ಮತ್ತು ಅಫ್ಘಾನಿಸ್ತಾನ್ ಎ ತಂಡಗಳು ಮುಖಾಮುಖಿಯಾಗಲಿದೆ.