India Test Squad: ಭಾರತ ಟೆಸ್ಟ್ ತಂಡದಿಂದ ಮೂವರು ಔಟ್
Border-Gavaskar Trophy: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಒಟ್ಟು 5 ಪಂದ್ಯಗಳನ್ನಾಡಲಿದ್ದು, ಈ ಪಂದ್ಯಗಳಿಗಾಗಿ 18 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ.
Updated on: Oct 26, 2024 | 9:04 AM

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. 18 ಸದಸ್ಯರ ಈ ತಂಡದಲ್ಲಿ ಮೂವರು ಪ್ರಮುಖ ಆಟಗಾರರಿಗೆ ಸ್ಥಾನ ನೀಡಲಾಗಿಲ್ಲ ಎಂಬುದು ವಿಶೇಷ. ಅಂದರೆ ಪ್ರಸ್ತುತ ಟೆಸ್ಟ್ ತಂಡದ ಭಾಗವಾಗಿರುವ ಇಬ್ಬರು ಆಟಗಾರರನ್ನು ಮುಂಬರುವ ಸರಣಿಯಿಂದ ಕೈ ಬಿಡಲಾಗಿದೆ. ಅವರೆಂದರೆ...

ಕುಲ್ದೀಪ್ ಯಾದವ್: ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಭಾಗವಾಗಿರುವ ಕುಲ್ದೀಪ್ ಯಾದವ್ ಅವರನ್ನು ಆಸ್ಟ್ರೇಲಿಯಾ ಸರಣಿಯಿಂದ ಕೈ ಬಿಡಲಾಗಿದೆ. ಇದಕ್ಕೆ ಮುಖ್ಯ ಕಾರಣ ಫಿಟ್ನೆಸ್ ಸಮಸ್ಯೆ. ಕುಲ್ದೀಪ್ ಯಾದವ್ ದೀರ್ಘಕಾಲದ ತೊಡೆಸಂದು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ಟೆಸ್ಟ್ ತಂಡದಿಂದ ಕೈ ಬಿಡಲಾಗಿದೆ.

ಅಕ್ಷರ್ ಪಟೇಲ್: ಪ್ರಸ್ತುತ ಭಾರತ ಟೆಸ್ಟ್ ತಂಡದ ಭಾಗವಾಗಿರುವ ಅಕ್ಷರ್ ಪಟೇಲ್ ಕೂಡ ಬಾರ್ಡರ್-ಗವಾಸ್ಕರ್ ಸರಣಿಗೆ ಆಯ್ಕೆಯಾಗಿಲ್ಲ. ಇದಕ್ಕೆ ಕಾರಣ ಅವರು ಮುಂಬರುವ ಸೌತ್ ಆಫ್ರಿಕಾ ಸರಣಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು. ಅಕ್ಷರ್ ಪಟೇಲ್ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗಿಡಲಾಗಿದೆ.

ಮೊಹಮ್ಮದ್ ಶಮಿ: ಪಾದದ ಗಾಯದಿಂದ ಚೇತರಿಸಿಕೊಂಡಿರುವ ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ಕಂಬ್ಯಾಕ್ ಮಾಡುವ ನಿರೀಕ್ಷೆಯಿತ್ತು. ಆದರೆ ಸಂಪೂರ್ಣ ಫಿಟ್ನೆಸ್ನೊಂದಿಗೆ ಅವರು ಈವರೆಗೆ ಯಾವುದೇ ಪಂದ್ಯವಾಡಿಲ್ಲ. ಹೀಗಾಗಿ ಅವರನ್ನೂ ಸಹ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿಲ್ಲ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್ಮನ್ ಗಿಲ್ , ವಿರಾಟ್ ಕೊಹ್ಲಿ , ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸರ್ಫರಾಝ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ , ಮೊಹಮ್ಮದ್ ಸಿರಾಜ್ , ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.
