PAK vs AFG: ಪಾಕಿಸ್ತಾನ್​ಗೆ ಮಣ್ಣು ಮುಕ್ಕಿಸಿದ ಅಫ್ಘಾನಿಸ್ತಾನ್

| Updated By: ಝಾಹಿರ್ ಯೂಸುಫ್

Updated on: Oct 23, 2023 | 10:07 PM

Afghanistan vs Pakistan: ಏಕದಿನ ಕ್ರಿಕೆಟ್​ನಲ್ಲಿ ಪಾಕಿಸ್ತಾನ್ ಹಾಗೂ ಅಫ್ಘಾನಿಸ್ತಾನ್ ತಂಡಗಳು 8 ಬಾರಿ ಮುಖಾಮುಖಿಯಾಗಿವೆ. ಈ ವೇಳೆ 7 ಬಾರಿ ಪಾಕಿಸ್ತಾನ್ ತಂಡ ಜಯ ಸಾಧಿಸಿತ್ತು. ಇದೀಗ 8ನೇ ಬಾರಿಯ ಸೆಣಸಾಟದಲ್ಲಿ ಪಾಕ್ ಪಡೆಯನ್ನು ಬಗ್ಗು ಬಡಿದು ಅಫ್ಘಾನ್ ಚೊಚ್ಚಲ ಜಯ ಸಾಧಿಸಿರುವುದು ವಿಶೇಷ.

PAK vs AFG: ಪಾಕಿಸ್ತಾನ್​ಗೆ ಮಣ್ಣು ಮುಕ್ಕಿಸಿದ ಅಫ್ಘಾನಿಸ್ತಾನ್
Afghanistan
Follow us on

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್​ನ 22ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಅಫ್ಘಾನಿಸ್ತಾನ್ ತಂಡ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಬಾಬರ್ ಆಝಂ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡಕ್ಕೆ ಆರಂಭಿಕರಾದ ಅಬ್ದುಲ್ಲ ಶಫೀಕ್ (58) ಹಾಗೂ ಇಮಾಮ್ ಉಲ್ ಹಕ್ (17) ಉತ್ತಮ ಆರಂಭ ಒದಗಿಸಿದ್ದರು.

ಆ ಬಳಿಕ ಬ್ಯಾಟ್ ಬೀಸಿದ ನಾಯಕ ಬಾಬರ್ ಆಝಂ 92 ಎಸೆತಗಳಲ್ಲಿ 74 ರನ್​ ಬಾರಿಸಿದರು. ಇನ್ನು ಸೌದ್ ಶಕೀಲ್ 25 ರನ್​ಗಳ ಕೊಡುಗೆ ನೀಡಿದರು. ಅಂತಿಮ ಓವರ್​ಗಳ ವೇಳೆ ಅಬ್ಬರಿಸಿದ ಶಾದಾಬ್ ಖಾನ್ 38 ಎಸೆತಗಳಲ್ಲಿ 40 ರನ್​ ಬಾರಿಸಿದರೆ, ಇಫ್ತಿಕರ್ ಅಹ್ಮದ್ ಕೇವಲ 27 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 40 ರನ್ ಚಚ್ಚಿದರು. ಪರಿಣಾಮ ನಿಗದಿತ 50 ಓವರ್​ಗಳಲ್ಲಿ ಪಾಕಿಸ್ತಾನ್ ತಂಡದ ಮೊತ್ತ 7 ವಿಕೆಟ್ ನಷ್ಟಕ್ಕೆ 282 ಕ್ಕೆ ಬಂದು ನಿಂತಿತು.

283 ರನ್​ಗಳ ಸ್ಪರ್ಧಾತ್ಮಕ ಗುರಿ ಪಡೆದ ಅಫ್ಘಾನಿಸ್ತಾನ್ ತಂಡಕ್ಕೆ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 130 ರನ್​ಗಳ ಜೊತೆಯಾಟವಾಡಿದ ಬಳಿಕ ಗುರ್ಬಾಝ್ (65) ಔಟಾದರು.
ಈ ಹಂತದಲ್ಲಿ ಜೊತೆಗೂಡಿದ ಇಬ್ರಾಹಿಂ ಝದ್ರಾನ್ ಹಾಗೂ ರಹಮತ್ ಶಾ 2ನೇ ವಿಕೆಟ್​ಗೆ 60 ರನ್​ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ 87 ರನ್​ಗಳಿಸಿದ್ದ ಇಬ್ರಾಹಿಂ ಝದ್ರಾನ್ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಹಮತ್ ಶಾ 58 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ತಂಡಕ್ಕೆ ಆಸರೆಯಾದರು. ಪರಿಣಾಮ ಕೊನೆಯ 8 ಓವರ್​ಗಳಲ್ಲಿ ಅಫ್ಘಾನಿಸ್ತಾನ್ ತಂಡಕ್ಕೆ ಗೆಲ್ಲಲು 54 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಉತ್ತಮ ಹೊಂದಾಣಿಕೆ ಬ್ಯಾಟಿಂಗ್ ಪ್ರದರ್ಶಿಸಿದ ಹಶ್ಮತ್ ಶಾಹಿದಿ ಹಾಗೂ ರಹಮತ್ ಶಾ ವಿಕೆಟ್ ಬೀಳದಂತೆ ಕಾಪಾಡಿಕೊಂಡರು. ಅದರಂತೆ ಕೊನೆಯ 5 ಓವರ್​ಗಳಲ್ಲಿ ಅಫ್ಘಾನ್ ತಂಡಕ್ಕೆ 30 ರನ್​ಗಳ ಅವಶ್ಯಕತೆಯಿತ್ತು.

ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್​ನೊಂದಿಗೆ ರನ್ ಕಲೆಹಾಕುತ್ತಾ ಸಾಗಿದ ರಹಮತ್ ಶಾ (77) ಹಾಗೂ ಹಶ್ಮತ್ ಶಾಹಿದಿ (48) ತಂಡದ ಗೆಲುವನ್ನು ಖಚಿತಪಡಿಸಿದರು. ಅದರಲ್ಲೂ ಕೊನೆಯ 16 ಎಸೆತಗಳಲ್ಲಿ 11 ರನ್​ ಬೇಕಿದ್ದಾಗ ರಹಮತ್ ಶಾ ಭರ್ಜರಿ ಸಿಕ್ಸ್ ಸಿಡಿಸಿದರು. ಅಂತಿಮವಾಗಿ ಅಫ್ಘಾನಿಸ್ತಾನ್ ತಂಡವು  49 ಓವರ್​ಗಳಲ್ಲಿ 286 ರನ್ ಬಾರಿಸುವ ಮೂಲಕ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಇದು ಪಾಕಿಸ್ತಾನ್ ವಿರುದ್ಧದ ಅಫ್ಘಾನಿಸ್ತಾನ್​ ತಂಡದ ಮೊದಲ ಗೆಲುವು ಎಂಬುದು ವಿಶೇಷ.

ಪಾಕಿಸ್ತಾನ (ಪ್ಲೇಯಿಂಗ್ XI): ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಉಸಾಮಾ ಮಿರ್, ಶಾಹೀನ್ ಅಫ್ರಿದಿ, ಹಸನ್ ಅಲಿ, ಹ್ಯಾರಿಸ್ ರೌಫ್.

ಇದನ್ನೂ ಓದಿ: Virat Kohli: ಕಿಂಗ್ ಕೊಹ್ಲಿಯ ಅಬ್ಬರಕ್ಕೆ ಸಚಿನ್ ವಿಶ್ವ ದಾಖಲೆ ಉಡೀಸ್

ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ(ನಾಯಕ), ಅಝ್ಮತುಲ್ಲಾ ಒಮರ್ಜಾಯ್, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ನೂರ್ ಅಹ್ಮದ್.

 

Published On - 9:59 pm, Mon, 23 October 23