ವೆಸ್ಟ್ ಇಂಡೀಸ್ ಮೈದಾನದಲ್ಲಿ ಜನವರಿ 14 ICC ಅಂಡರ್-19 ವಿಶ್ವಕಪ್ ಆರಂಭವಾಗುತ್ತಿದೆ. ಈ ವಿಶ್ವಕಪ್‌ನ ಅಭ್ಯಾಸ ಪಂದ್ಯಗಳು ಇದೀಗ ನಡೆಯುತ್ತಿದ್ದು, ಬಹುತೇಕ ಎಲ್ಲಾ ತಂಡಗಳು ಈ ಟೂರ್ನಿಗಾಗಿ ವೆಸ್ಟ್ ಇಂಡೀಸ್ ತಲುಪಿವೆ. ಆದರೆ ತಾಲಿಬಾನ್ ಆಡಳಿತವಿರುವ ದೇಶದ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಲು ಇನ್ನೂ ವೀಸಾ ತೆಗೆದುಕೊಳ್ಳದ ಕಾರಣ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಭಾಗವಹಿಸುವುದು ಕಷ್ಟಕರವಾಗಿದೆ. ಅಫ್ಘಾನ್ ತಂಡವು ಇನ್ನೂ ಕೆರಿಬಿಯನ್ ದೇಶವನ್ನು ತಲುಪಿಲ್ಲ, ಈ ಕಾರಣದಿಂದಾಗಿ ICC ಸೋಮವಾರ ಇಂಗ್ಲೆಂಡ್ ವಿರುದ್ಧ ಮತ್ತು ಜನವರಿ 12 ರಂದು UAE ವಿರುದ್ಧದ ಅಭ್ಯಾಸ ಪಂದ್ಯಗಳನ್ನು ರದ್ದುಗೊಳಿಸಬೇಕಾಯಿತು.
ಅಫ್ಘಾನಿಸ್ತಾನ ಜನವರಿ 16 ರಂದು ಜಿಂಬಾಬ್ವೆ ವಿರುದ್ಧ ಪಂದ್ಯಾವಳಿಯ ಮೊದಲ ಪಂದ್ಯವನ್ನು ಆಡಬೇಕಾಗಿದೆ. ವೀಸಾ ಪಡೆಯಲು ವಿಳಂಬವಾಗಿರುವ ಕಾರಣ ಅಫ್ಘಾನಿಸ್ತಾನ ತಂಡ ಇನ್ನೂ ವೆಸ್ಟ್ ಇಂಡೀಸ್‌ಗೆ ತಲುಪಿಲ್ಲ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಕಾರಣವನ್ನು ಐಸಿಸಿ ತಿಳಿಸಿಲ್ಲ
ಆದಾಗ್ಯೂ, ವೀಸಾ ಪಡೆಯುವಲ್ಲಿನ ತೊಂದರೆಗಳಿಗೆ ಕಾರಣಗಳನ್ನು ಐಸಿಸಿ ನಿರ್ದಿಷ್ಟಪಡಿಸಿಲ್ಲ. ಐಸಿಸಿ ಟೂರ್ನಮೆಂಟ್ ಮುಖ್ಯಸ್ಥ ಕ್ರಿಸ್ ಟೆಟ್ಲಿ, “ವೀಸಾ ಪಡೆಯಲು ವಿಳಂಬವಾಗಿರುವುದರಿಂದ ಅಫ್ಘಾನಿಸ್ತಾನ ತಂಡ ಇನ್ನೂ ವೆಸ್ಟ್ ಇಂಡೀಸ್ ತಲುಪಿಲ್ಲ, ಈ ವಿಷಯಕ್ಕೆ ಪರಿಹಾರ ಕಂಡುಕೊಳ್ಳಲು ಮಾತುಕತೆ ನಡೆಯುತ್ತಿದೆ.
ವೆಸ್ಟ್ ಇಂಡೀಸ್‌ಗೆ ಭೇಟಿ ನೀಡಲು ಹೆಚ್ಚಿನ ಜನರಿಗೆ ಯುಎಸ್ ಟ್ರಾನ್ಸಿಟ್ ವೀಸಾ ಅಗತ್ಯವಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅಲ್ಲಿಂದ ಅಂತಾರಾಷ್ಟ್ರೀಯ ಪ್ರಯಾಣ ಕಷ್ಟಕರವಾಗಿದೆ. ತಂಡಗಳು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ನಾವು ಅಭ್ಯಾಸ ಪಂದ್ಯಗಳನ್ನು ಮರುಹೊಂದಿಸಿದ್ದೇವೆ ಎಂದು ಟೆಟ್ಲಿ ಹೇಳಿದರು.
ಇದೀಗ ಇಂಗ್ಲೆಂಡ್ ತಂಡ ಜನವರಿ 11 ರಂದು ಯುಎಇ ವಿರುದ್ಧ ಆಡಲಿದೆ. ಜನವರಿ 16 ರಂದು ಜಿಂಬಾಬ್ವೆ ವಿರುದ್ಧದ ಪಂದ್ಯದ ನಂತರ ಅಫ್ಘಾನಿಸ್ತಾನವು ಜನವರಿ 18 ರಂದು ಪಪುವಾ ನ್ಯೂಗಿನಿಯಾವನ್ನು ಎದುರಿಸಲಿದೆ. ಇದರ ನಂತರ ಅವರು ಜನವರಿ 20 ರಂದು ಪಾಕಿಸ್ತಾನವನ್ನು ಎದುರಿಸಲಿದ್ದಾರೆ. ಈ ಎಲ್ಲಾ ತಂಡಗಳೊಂದಿಗೆ ಅಫ್ಘಾನಿಸ್ತಾನವು ಗ್ರೂಪ್-ಸಿಯಲ್ಲಿ ಸ್ಥಾನ ಪಡೆದಿದೆ.
ರಶೀದ್ ಖಾನ್ ಮನವಿ
ಅಫ್ಘಾನಿಸ್ತಾನದ ಅಧಿಕಾರವು ತಾಲಿಬಾನ್ ಕೈಗೆ ಬಂದಾಗಿನಿಂದ, ಈ ದೇಶವು ಸಂಕಷ್ಟದಲ್ಲಿದೆ. ಇದು ದೇಶದ ಕ್ರಿಕೆಟ್ ಮೇಲೂ ಪರಿಣಾಮ ಬೀರಿದೆ. ತಾಲಿಬಾನ್ ಆಗಮನದ ನಂತರ, ಅಫ್ಘಾನಿಸ್ತಾನದ ಹಿರಿಯ ತಂಡದ ಪ್ರಮುಖ ಆಟಗಾರ ರಶೀದ್ ಖಾನ್ ಟ್ವಿಟರ್‌ನಲ್ಲಿ ತನ್ನ ದೇಶವನ್ನು ಉಳಿಸುವಂತೆ ಇಡೀ ಜಗತ್ತಿಗೆ ಸಾರ್ವಜನಿಕವಾಗಿ ಮನವಿ ಮಾಡಿದ್ದರು. ಅಫ್ಘಾನಿಸ್ತಾನ ಮಹಿಳಾ ಕ್ರಿಕೆಟ್ ಆಡುವುದನ್ನು ತಾಲಿಬಾನ್ ಕೂಡ ನಿಷೇಧಿಸಿತ್ತು.