AFG vs SA: ಅಫ್ಘಾನಿಸ್ತಾನ್ ತಂಡಕ್ಕೆ ಐತಿಹಾಸಿಕ ಸರಣಿ ಗೆಲುವು

|

Updated on: Sep 21, 2024 | 10:53 AM

Afghanistan vs South Africa: ಟಿ20 ವಿಶ್ವಕಪ್​ನಲ್ಲಿ ನ್ಯೂಝಿಲೆಂಡ್, ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳಿಗೆ ಸೋಲುಣಿಸಿದ್ದ ಅಫ್ಘಾನಿಸ್ತಾನ್ ತಂಡವು ಇದೀಗ ಏಕದಿನ ಕ್ರಿಕೆಟ್​ನಲ್ಲೂ ಪಾರುಪತ್ಯ ಮರೆಯುತ್ತಿದೆ. ಇದಕ್ಕೆ ಸಾಕ್ಷಿಯೇ ಬಲಿಷ್ಠ ಸೌತ್ ಆಫ್ರಿಕಾ ತಂಡವನ್ನು ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ ಸೋಲಿಸಿ ಏಕದಿನ ಸರಣಿ ಗೆದ್ದಿರುವುದು.

AFG vs SA: ಅಫ್ಘಾನಿಸ್ತಾನ್ ತಂಡಕ್ಕೆ ಐತಿಹಾಸಿಕ ಸರಣಿ ಗೆಲುವು
Afghanistan
Follow us on

ಟಿ20 ವಿಶ್ವಕಪ್​ನಲ್ಲಿ ಬಲಿಷ್ಠ ಪಡೆಗಳಿಗೆ ಮಣ್ಣು ಮುಕ್ಕಿಸಿದ್ದ ಅಫ್ಘಾನಿಸ್ತಾನ್ ತಂಡವು ಏಕದಿನ ಕ್ರಿಕೆಟ್​ನಲ್ಲೂ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಈ ಗೆಲುವಿನ ನಾಗಾಲೋಟದೊಂದಿಗೆ ಇದೀಗ ಸೌತ್ ಆಫ್ರಿಕಾ ವಿರುದ್ಧ ಐತಿಹಾಸಿಕ ಸರಣಿ ಜಯಿಸಿದೆ. ಈ ಮೂಲಕ ಬಲಿಷ್ಠ ತಂಡವೊಂದರ ವಿರುದ್ಧ ಚೊಚ್ಚಲ ಬಾರಿಗೆ ಸರಣಿ ಗೆಲ್ಲುವಲ್ಲಿ ಅಫ್ಘಾನ್ ಪಡೆ ಯಶಸ್ವಿಯಾಗಿದೆ.

ಶಾರ್ಜಾ ಮೈದಾನದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತ್ತು. ಅದರಂತೆ ಇನಿಂಗ್ಸ್ ಆರಂಭಿಸಿದ ಅಫ್ಘಾನ್ ಪಡೆಗೆ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಝ್ ಹಾಗೂ ರಿಯಾಝ್ ಹಸನ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 88 ರನ್​ಗಳ ಜೊತೆಯಾಟವಾಡಿದ ಬಳಿಕ ರಿಝಾಝ್ (29) ವಿಕೆಟ್ ಒಪ್ಪಿಸಿದರು. ಇದಾಗ್ಯೂ ಮತ್ತೊಂದೆಡೆ  ಗುರ್ಬಾಝ್ ಸ್ಪೋಟಕ ಇನಿಂಗ್ಸ್ ಮುಂದುವರೆಸಿದ್ದರು.

ರಹಮತ್ ಶಾ ಜೊತೆಗೂಡಿ 2ನೇ ವಿಕೆಟ್​ಗೆ 101 ರನ್​ಗಳ ಜೊತೆಯಾಟವಾಡಿದ ರಹಮಾನುಲ್ಲಾ ಗುರ್ಬಾಝ್ 107 ಎಸೆತಗಳಲ್ಲಿ ಶತಕ ಪೂರೈಸಿ ಬ್ಯಾಟ್ ಮೇಲೆತ್ತಿದ್ದರು. ಅಲ್ಲದೆ 110 ಎಸೆತಗಳನ್ನು ಎದುರಿಸಿದ ಗುರ್ಬಾಝ್ 3 ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 105 ರನ್ ಬಾರಿಸಿ ಔಟಾದರು.

ಇತ್ತ 66 ಎಸೆತಗಳಲ್ಲಿ 50 ರನ್ ಕಲೆಹಾಕಿಇದ ಬಳಿಕ ರಹಮತ್ ಶಾ ವಿಕೆಟ್ ಕೈಚೆಲ್ಲಿದರು. ಈ ಹಂತದಲ್ಲಿ ಕಣಕ್ಕಿಳಿದ ಅಝ್ಮತುಲ್ಲಾ ಒಮರ್​ಝಾಹಿ  ಬಿರುಸಿನ ಬ್ಯಾಟಿಂಗ್​ ಪ್ರದರ್ಶಿಸಿದರು.

ಕೇವಲ 50 ಎಸೆತಗಳನ್ನು ಎದುರಿಸಿದ ಅಝ್ಮತುಲ್ಲಾ 6 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 86 ರನ್​ ಚಚ್ಚಿದರು. ಈ ಸ್ಪೋಟಕ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ್ ತಂಡವು 50 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 311 ರನ್​ ಕಲೆಹಾಕಿತು.

ರಶೀದ್ ಖಾನ್ ಸ್ಪಿನ್ ಮೋಡಿ:

312 ರನ್​ಗಳ ಕಠಿಣ ಗುರಿ ಪಡೆದ ಸೌತ್ ಆಫ್ರಿಕಾ ತಂಡವು ಮೊದಲ ಹತ್ತು ಓವರ್​ಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆರಂಭಿಕರಾದ ತೆಂಬಾ ಬವುಮಾ ಹಾಗೂ ಟೋನಿ ಡಿ ಝೋರ್ಝಿ ಮೊದಲ ವಿಕೆಟ್​ಗೆ 73 ರನ್​ಗಳ ಜೊತೆಯಾಟವಾಡಿದ್ದರು. ಈ ಹಂತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ಬವುಮಾ (38) ಒಮರ್​ಝಾಹಿಗೆ ವಿಕೆಟ್​ ಒಪ್ಪಿಸಿದರು.

ಮೊದಲ ವಿಕೆಟ್ ಪತನದ ಬೆನ್ನಲ್ಲೇ ದಾಳಿಗಿಳಿದ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು. ಟೋನಿ ಡಿ ಝೋರ್ಝಿ (31) ವಿಕೆಟ್ ಪಡೆಯುವುದರೊಂದಿಗೆ ವಿಕೆಟ್ ಬೇಟೆ ಶುರು ಮಾಡಿದ ರಶೀದ್ ಖಾನ್, ಆ ಬಳಿಕ ಐಡೆನ್ ಮಾರ್ಕ್ರಾಮ್ (21), ಟ್ರಿಸ್ಟನ್ ಸ್ಟಬ್ಸ್ (5), ಕೈಲ್ ವೆರೆನ್ನೆ (2) ಹಾಗೂ ವಿಯಾನ್ ಮುಲ್ಡರ್​ಗೆ​ (2) ಪೆವಿಲಿಯನ್ ಹಾದಿ ತೋರಿಸಿದರು.

ಮತ್ತೊಂದೆಡೆ ರಶೀದ್ ಖಾನ್​ಗೆ ಉತ್ತಮ ಸಾಥ್ ನೀಡಿದ ನಂಗೆಯಲಿಯಾ ಖರೋಟೆ ರೀಝ ಹೆಂಡ್ರಿಕ್ಸ್ ಸೇರಿದಂತೆ ನಾಲ್ವರ ವಿಕೆಟ್ ಪಡೆದರು. ಪರಿಣಾಮ ಸೌತ್ ಆಫ್ರಿಕಾ ತಂಡವು 34.2 ಓವರ್​ಗಳಲ್ಲಿ 134 ರನ್​ಗಳಿಸಿ ಆಲೌಟ್ ಆಯಿತು. ಈ ಮೂಲಕ ಅಫ್ಘಾನಿಸ್ತಾನ್ ತಂಡವು 177 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಅಫ್ಘಾನಿಸ್ತಾನ್ ಪರ 9 ಓವರ್​ ಎಸೆದ ರಶೀದ್ ಖಾನ್ ಕೇವಲ 19 ರನ್ ನೀಡಿ 5 ವಿಕೆಟ್ ಪಡೆದರೆ, ನಂಗೆಯಲಿಯಾ ಖರೋಟೆ 6.2 ಓವರ್​ಗಳಲ್ಲಿ 26 ರನ್ ನೀಡಿ 4 ವಿಕೆಟ್ ಕಬಳಿಸಿದರು.

ಐತಿಹಾಸಿಕ ಸರಣಿ ಗೆಲುವು:

ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ್ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಇದಕ್ಕೂ ಮುನ್ನ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನ್ ತಂಡವು 6 ವಿಕೆಟ್​ಗಳ ಜಯ ಸಾಧಿಸಿತ್ತು. ಇದೀಗ 2ನೇ ಪಂದ್ಯದಲ್ಲೂ ಗೆಲುವು ದಾಖಲಿಸಿ ಸೌತ್ ಆಫ್ರಿಕಾ ವಿರುದ್ಧ ಚೊಚ್ಚಲ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಅಫ್ಘಾನಿಸ್ತಾನ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಝ್, ರಿಯಾಝ್ ಹಸನ್ , ರಹಮತ್ ಶಾ , ಹಶ್ಮತುಲ್ಲಾ ಶಾಹಿದಿ (ನಾಯಕ) , ಅಝ್ಮತುಲ್ಲಾ ಒಮರ್​ಝಾಹಿ , ಮೊಹಮ್ಮದ್ ನಬಿ , ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್) , ರಶೀದ್ ಖಾನ್ , ನಂಗೇಯಾಲಿಯಾ ಖರೋಟೆ , ಅಲ್ಲಾ ಘಜನ್ಫರ್ , ಫಝಲ್​ಹಕ್ ಫಾರೂಖಿ.

ಇದನ್ನೂ ಓದಿ: IPL 2025: ಐಪಿಎಲ್ ಮೆಗಾ ಹರಾಜಿನ ಬಿಗ್ ಅಪ್ಡೇಟ್

ಸೌತ್ ಆಫ್ರಿಕಾ ಪ್ಲೇಯಿಂಗ್ 11: ರೀಝ ಹೆಂಡ್ರಿಕ್ಸ್ , ಟೋನಿ ಡಿ ಝೋರ್ಝಿ , ತೆಂಬಾ ಬವುಮಾ (ನಾಯಕ) , ಐಡೆನ್ ಮಾರ್ಕ್ರಾಮ್ , ಟ್ರಿಸ್ಟಾನ್ ಸ್ಟಬ್ಸ್ , ಕೈಲ್ ವೆರೆನ್ನೆ (ವಿಕೆಟ್ ಕೀಪರ್) , ವಿಯಾನ್ ಮುಲ್ಡರ್ , ಜೋರ್ನ್ ಫಾರ್ಟುಯಿನ್ , ನಾಂಡ್ರೆ ಬರ್ಗರ್ , ನ್ಕಾಬಾ ಪೀಟರ್ , ಲುಂಗಿ ಎನ್ಗಿಡಿ.

 

Published On - 10:52 am, Sat, 21 September 24