IPL 2025: ಐಪಿಎಲ್ ಮೆಗಾ ಹರಾಜಿನ ಬಿಗ್ ಅಪ್ಡೇಟ್
IPL 2025 Mega Auction: ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳಿಗೆ ನಾಲ್ಕರಿಂದ ಆರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡುವ ಸಾಧ್ಯತೆಯಿದೆ. ಇನ್ನುಳಿದ ಆಟಗಾರರನ್ನು ತಂಡದಿಂದ ರಿಲೀಸ್ ಮಾಡಬೇಕಾಗುತ್ತದೆ. ಹೀಗೆ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಪ್ರಕಟಿಸಲು ದಿನಾಂಕ ಸಹ ನಿಗದಿಯಾಗಿದೆ.
Updated on: Sep 19, 2024 | 8:43 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಮೆಗಾ ಹರಾಜಿನ ಕುರಿತಾದ ಬಿಗ್ ಅಪ್ಡೇಟ್ವೊಂದು ಹೊರಬಿದ್ದಿದೆ. ಈ ಮಾಹಿತಿ ಪ್ರಕಾರ, ಈ ಬಾರಿಯ ಮೆಗಾ ಆಕ್ಷನ್ ವಿದೇಶದಲ್ಲಿ ಜರುಗಲಿದೆ. ಇದಕ್ಕಾಗಿ ಈಗಾಗಲೇ ರೂಪುರೇಷೆಗಳು ಸಿದ್ಧವಾಗಿದ್ದು, ಅದರಂತೆ ನವೆಂಬರ್ ತಿಂಗಳಾಂತ್ಯದೊಳಗೆ ಮೆಗಾ ಹರಾಜು ನಡೆಯಲಿದೆ.

ಐಪಿಎಲ್ನ ಮೆಗಾ ಹರಾಜಿನ ಆತಿಥ್ಯವಹಿಸಿಕೊಳ್ಳಲು ಈಗಾಗಲೇ ಸೌದಿ ಅರೇಬಿಯಾ ಆಸಕ್ತಿವಹಿಸಿದೆ. ಈ ಹಿಂದೆ ದುಬೈನಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆಗಳು ನಡೆದಿದ್ದವು. ಹೀಗಾಗಿ ಈ ಸಲ ಕೂಡ ಅರಬ್ ನಾಡಿನಲ್ಲಿ ಮೆಗಾ ಆಕ್ಷನ್ ನಡೆಯುವುದು ಬಹುತೇಕ ಖಚಿತ ಎನ್ನಬಹುದು.

ಇನ್ನು ಬಲ್ಲ ಮೂಲಗಳ ಮಾಹಿತಿ ಪ್ರಕಾರ, ಮೆಗಾ ಹರಾಜು ನವೆಂಬರ್ 3ನೇ ಅಥವಾ 4ನೇ ವಾರ ನಡೆಯಲಿದೆ. ಅಂದರೆ ನವೆಂಬರ್ ಅಂತ್ಯದೊಳಗೆ ಹರಾಜು ಪ್ರಕ್ರಿಯೆ ಮುಗಿಸಲು ಈಗಾಗಲೇ ನಿರ್ಧರಿಸಲಾಗಿದೆ. ಹೀಗಾಗಿ ಡಿಸೆಂಬರ್ಗೂ ಮುನ್ನ 10 ಫ್ರಾಂಚೈಸಿಗಳು ತಮ್ಮ ಹೊಸ ತಂಡಗಳನ್ನು ಘೋಷಿಸುವುದು ಖಚಿತ.

ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳಿಗೆ 4 ರಿಂದ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡುವ ಸಾಧ್ಯತೆಯಿದೆ. ಹೀಗೆ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಸಲ್ಲಿಸಲು ನವೆಂಬರ್ 15 ರವರೆಗೆ ಗಡುವು ನೀಡಲಾಗುತ್ತದೆ. ಅಂದರೆ ನವೆಂಬರ್ 15 ಕ್ಕೂ ಮುಂಚಿತವಾಗಿ ಪ್ರತಿ ಫ್ರಾಂಚೈಸಿಗಳು ರಿಟೈನ್ ಪಟ್ಟಿಯನ್ನು ಸಲ್ಲಿಸಬೇಕು.

ಇದಾದ ಬಳಿಕ ಐಪಿಎಲ್ ಹರಾಜು ನೋಂದಾಣಿ ಶುರುವಾಗಲಿದೆ. ಈ ಬಾರಿ ಮೆಗಾ ಹರಾಜು ನಡೆಯುತ್ತಿರುವುದರಿಂದ ಸಾವಿರಕ್ಕೂ ಆಟಗಾರರು ತಮ್ಮ ಹೆಸರು ರಿಜಿಸ್ಟರ್ ಮಾಡಿಕೊಳ್ಳುವ ಸಾಧ್ಯತೆಯಿದೆ. ಈ ಆಟಗಾರರನ್ನು ಶಾರ್ಟ್ ಲೀಸ್ಟ್ ಮಾಡಿದ ಬಳಿಕ ಹರಾಜು ಪ್ರಕ್ರಿಯೆ ನಡೆಯಲಿದೆ. ಅದರಂತೆ 500 ರಿಂದ 600 ಆಟಗಾರರು ಈ ಬಾರಿಯ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಪ್ರಸ್ತುತ ಮಾಹಿತಿ ಪ್ರಕಾರ, ಐಪಿಎಲ್ ಮೆಗಾ ಹರಾಜಿಗೂ ಮುನ್ನ 4 ರಿಂದ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಿದ್ದಾರೆ. ಅಂದರೆ ಇಲ್ಲಿ ನಾಲ್ವರನ್ನು ರಿಟೈನ್ ಮಾಡಿಕೊಂಡರೆ, ಇಬ್ಬರ ಮೇಲೆ ಆರ್ಟಿಎಂ ಆಯ್ಕೆ ಬಳಸಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ವರದಿಗಳಾಗಿವೆ. ಅದರಂತೆ ಐಪಿಎಲ್ ಮೆಗಾ ಹರಾಜಿಗೂ ಮುನ್ನ 4+2 ನಿಯಮ ಜಾರಿಗೆಯಾಗುವ ಸಾಧ್ಯತೆಯಿದೆ.



















