ಸೌತ್ ಆಫ್ರಿಕಾ ವಿರುದ್ಧ ಅಫ್ಘಾನಿಸ್ತಾನ್ ತಂಡಕ್ಕೆ ಐತಿಹಾಸಿಕ ಗೆಲುವು

Afghanistan vs South Africa: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಪಾಕಿಸ್ತಾನ್, ನ್ಯೂಝಿಲೆಂಡ್, ವೆಸ್ಟ್ ಇಂಡೀಸ್ ತಂಡಗಳಿಗೆ ಸೋಲುಣಿಸಿರುವ ಅಫ್ಘಾನಿಸ್ತಾನ್ ಪಡೆ ಇದೀಗ ಸೌತ್ ಆಫ್ರಿಕಾ ವಿರುದ್ಧ ಕೂಡ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಬಲಿಷ್ಠ ಪಡೆಗಳ ವಿರುದ್ಧ ತನ್ನ ಅದ್ಭುತ ಪ್ರದರ್ಶನವನ್ನು ಅಫ್ಘಾನಿಸ್ತಾನ್ ತಂಡ ಮುಂದುವರೆಸಿದೆ.

ಸೌತ್ ಆಫ್ರಿಕಾ ವಿರುದ್ಧ ಅಫ್ಘಾನಿಸ್ತಾನ್ ತಂಡಕ್ಕೆ ಐತಿಹಾಸಿಕ ಗೆಲುವು
Afghanistan
Follow us
|

Updated on: Sep 19, 2024 | 8:14 AM

ಸೌತ್ ಆಫ್ರಿಕಾ ವಿರುದ್ಧ ಅಫ್ಘಾನಿಸ್ತಾನ್ ತಂಡವು ಐತಿಹಾಸಿಕ ಗೆಲುವು ದಾಖಲಿಸಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನ್ ಪಡೆ 6 ವಿಕೆಟ್​ಗಳ ಜಯ ಸಾಧಿಸಿತು. ಇದು ಸೌತ್ ಆಫ್ರಿಕಾ ವಿರುದ್ಧದ ಅಫ್ಘಾನ್ ತಂಡದ ಮೊದಲ ಗೆಲುವು ಎಂಬುದು ವಿಶೇಷ. ಇದಕ್ಕೂ ಮುನ್ನ  ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಆದರೆ ಸೌತ್ ಆಫ್ರಿಕಾ ನಾಯಕನ ನಿರ್ಧಾರ ತಪ್ಪು ಎಂಬುದನ್ನು ಅಫ್ಘಾನಿಸ್ತಾನ್ ಬೌಲರ್​ಗಳು ಪವರ್​ಪ್ಲೇನಲ್ಲೇ ನಿರೂಪಿಸಿದ್ದರು. ಆರಂಭದಿಂದಲೇ ಕರಾರುವಾಕ್ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದ ಫಝಲ್​ಹಕ್ ಫಾರೂಖಿ ಮೂರನೇ ಓವರ್​ನ ಕೊನೆಯ ಎಸೆತದಲ್ಲಿ ಆರಂಭಿಕ ಆಟಗಾರ ರೀಝ ಹೆಂಡ್ರಿಕ್ಸ್ (9) ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.

ಇದರ ಬೆನ್ನಲ್ಲೇ ಐಡೆನ್ ಮಾರ್ಕ್ರಾಮ್ (2) ಸಹ ಫಾರೂಖಿ ಎಸೆತದಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರು. ಇನ್ನು ಟೋನಿ ಡಿ ಝೋರ್ಝಿ 11 ರನ್​ಗಳಿಸಿ ಫಝಲ್​ಹಕ್ ಫಾರೂಖಿಗೆ ವಿಕೆಟ್ ಒಪ್ಪಿಸಿದರು. ಈ ಆರಂಭಿಕ ಆಘಾತದಿಂದ ಪಾರಾಗುವ ಮುನ್ನವೇ ಅಲ್ಲಾ ಗಾಝನ್ಫರ್ ಸೌತ್ ಆಫ್ರಿಕಾ ತಂಡಕ್ಕೆ ಮತ್ತೊಂದು ಆಘಾತ ನೀಡಿದ್ದರು.

ಯುವ ಸ್ಪೋಟಕ ದಾಂಡಿಗ ಟ್ರಿಸ್ಟನ್ ಸ್ಟಬ್ಸ್ (0) ರನ್ನು ಶೂನ್ಯಕ್ಕೆ ಔಟ್ ಮಾಡಿದ ಅಲ್ಲಾ ಗಾಝನ್ಫರ್, ಆ ಬಳಿಕ ಜೇಸನ್ ಸ್ಮಿತ್ (0) ಹಾಗೂ ಕೈಲ್ ವೆರೆನ್ನೆ (11) ಗೆ ಪೆವಿಲಿಯನ್ ಹಾದಿ ತೋರಿಸಿದರು. ಪರಿಣಾಮ ಸೌತ್ ಆಫ್ರಿಕಾ ತಂಡವು ಕೇವಲ 36 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡಿತು.

ಈ ಹಂತದಲ್ಲಿ ಫೆಹ್ಲುಕ್ವಾಯೊ (0) ಕೂಡ ರನೌಟ್ ಆದರು. ಇದರ ನಡುವೆ ವಿಯಾನ್ ಮುಲ್ಡರ್ 84 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 52 ರನ್​ ಕಲೆಹಾಕಿದರು. ಈ ಏಕಾಂಗಿ ಹೋರಾಟದಿಂದಾಗಿ ಸೌತ್ ಆಫ್ರಿಕಾ ತಂಡದ ಸ್ಕೋರ್ 100ರ ಗಡಿದಾಟಿತು. ಅತ್ತ ಮುಲ್ಡರ್ ವಿಕೆಟ್ ಸಿಗುತ್ತಿದ್ದಂತೆ ಮತ್ತೆ ಸಾಂಘಿಕ ದಾಳಿ ಸಂಘಟಿಸಿದ ಅಫ್ಘಾನಿಸ್ತಾನ್ ತಂಡವು  33.2 ಓವರ್​ಗಳಲ್ಲಿ ಸೌತ್ ಆಫ್ರಿಕಾ ತಂಡವನ್ನು 106 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.

ಅಫ್ಘಾನಿಸ್ತಾನ್ ಪರ ಎಡಗೈ ವೇಗಿ ಫಝಲ್​ಹಕ್ ಫಾರೂಖಿ 7 ಓವರ್​ಗಳಲ್ಲಿ 35 ರನ್ ನೀಡಿ 4 ವಿಕೆಟ್ ಪಡೆದರೆ, ಅಲ್ಲಾ ಗಾಝನ್ಫರ್ 10 ಓವರ್​ಗಳಲ್ಲಿ 20 ರನ್ ನೀಡಿ 3 ವಿಕೆಟ್ ಕಬಳಿಸಿದರು. ಹಾಗೆಯೇ ರಶೀಧ್ ಖಾನ್ 8.3 ಓವರ್​ಗಳಲ್ಲಿ 30 ರನ್ ನೀಡಿ 2 ವಿಕೆಟ್ ಪಡೆದರು.

107 ರನ್​ಗಳ ಸುಲಭ ಗುರಿ:

50 ಓವರ್​ಗಳಲ್ಲಿ 107 ರನ್​ಗಳ ಗುರಿ ಪಡೆದ ಅಫ್ಘಾನಿಸ್ತಾನ್ ತಂಡವು ಮೊದಲ ಓವರ್​ನಲ್ಲೇ ರಹಮಾನುಲ್ಲಾ ಗುರ್ಬಾಝ್ (0) ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ರಹಮತ್ ಶಾ (8) ಕೂಡ ಔಟಾದರು. ಇನ್ನು ಯುವ ಆರಂಭಿಕ ಬ್ಯಾಟರ್ ರಿಯಾಝ್ ಹಸನ್ ಕೇವಲ 16 ರನ್​ಗಳಿಸಲಷ್ಟೇ ಶಕ್ತರಾದರು. ನಾಯಕ ಹಶ್ಮತುಲ್ಲಾ ಶಾಹಿದಿ (16) ಕೂಡ ಬಂದ ವೇಗದಲ್ಲೇ ಹಿಂತಿರುಗಿದರು.

ಕೇವಲ 60 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಅಫ್ಘಾನಿಸ್ತಾನ್ ತಂಡಕ್ಕೆ ಗುಲ್ಬುದ್ದೀನ್ ನೈಬ್ (34) ಹಾಗೂ ಒಮರ್​ಝೈ (25) ಆಸರೆಯಾಗಿ ನಿಂತರು. ಅಲ್ಲದೆ 26 ಓವರ್​ಗಳಲ್ಲಿ ತಂಡವನ್ನು ಗುರಿ ತಲುಪಿಸುವ ಮೂಲಕ ಅಫ್ಘಾನಿಸ್ತಾನ್ ತಂಡಕ್ಕೆ 6 ವಿಕೆಟ್​ಗಳ ಜಯ ತಂದುಕೊಟ್ಟರು. ಈ ಮೂಲಕ ಸೌತ್ ಆಫ್ರಿಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಚೊಚ್ಚಲ ಜಯ ಸಾಧಿಸುವಲ್ಲಿ ಅಫ್ಘಾನಿಸ್ತಾನ್ ತಂಡ ಯಶಸ್ವಿಯಾಗಿದೆ.

ಅಫ್ಘಾನಿಸ್ತಾನ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ರಿಯಾಝ್ ಹಸನ್ , ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ) , ಮೊಹಮ್ಮದ್ ನಬಿ , ಅಜ್ಮತುಲ್ಲಾ ಒಮರ್​ಝೈ , ಗುಲ್ಬದಿನ್ ನೈಬ್ , ರಶೀದ್ ಖಾನ್ , ಅಲ್ಲಾ ಗಾಝನ್ಫರ್ , ಫಝಲ್​ಹಕ್ ಫಾರೂಕಿ , ನಂಗೆಯಾ ಖಾರೋಟೆ.

ಇದನ್ನೂ ಓದಿ: IPL 2025: ಈ ಸಲ ಕಪ್ ನಮ್ದೆ… ಇದುವೇ ಕೆಎಲ್ ರಾಹುಲ್ ಇಚ್ಛೆ..!

ಸೌತ್ ಆಫ್ರಿಕಾ ಪ್ಲೇಯಿಂಗ್ 11: ರೀಝ ಹೆಂಡ್ರಿಕ್ಸ್ , ಟೋನಿ ಡಿ ಝೋರ್ಝಿ , ಐಡೆನ್ ಮಾರ್ಕ್ರಾಮ್ (ನಾಯಕ) ಟ್ರಿಸ್ಟನ್ ಸ್ಟಬ್ಸ್ , ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್) , ಜೇಸನ್ ಸ್ಮಿತ್ , ವಿಯಾನ್ ಮುಲ್ಡರ್ , ಆಂಡಿಲ್ ಫೆಹ್ಲುಕ್ವಾಯೊ , ಜೋರ್ನ್ ಫೋರ್ಚುಯಿನ್ , ಲುಂಗಿ ಎನ್ಗಿಡಿ , ನಾಂಡ್ರೆ ಬರ್ಗರ್.