- Kannada News Photo gallery Cricket photos IPL 2025: KL Rahul Said Let's Hope so For RCB wins the IPL Trophy
IPL 2025: ಈ ಸಲ ಕಪ್ ನಮ್ದೆ… ಇದುವೇ ಕೆಎಲ್ ರಾಹುಲ್ ಇಚ್ಛೆ..!
KL Rahul: ಕೆಎಲ್ ರಾಹುಲ್ RCB ಪರ ಎರಡು ಸೀಸನ್ ಆಡಿದ್ದಾರೆ. ಈ ವೇಳೆ ಒಟ್ಟು 19 ಪಂದ್ಯಗಳನ್ನಾಡಿರುವ ಅವರು 14 ಇನಿಂಗ್ಸ್ಗಳಿಂದ 4 ಅರ್ಧಶತಕಗಳೊಂದಿಗೆ 417 ರನ್ ಕಲೆಹಾಕಿದ್ದಾರೆ. ಇದಾದ ಬಳಿಕ ಸನ್ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಪರ ಆಡಿದ್ದ ರಾಹುಲ್ ಈಗ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದಾರೆ.
Updated on: Sep 12, 2024 | 12:43 PM

IPL 2025: ಐಪಿಎಲ್ 2025 ರಲ್ಲಿ ಕೆಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಕಣಕ್ಕಿಳಿಯಲಿದ್ದಾರಾ? ಈ ಪ್ರಶ್ನೆಗೆ ಸ್ಪಷ್ಟ ಉತ್ತರವಂತು ಸಿಕ್ಕಿಲ್ಲ. ಇದಾಗ್ಯೂ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ದುಲೀಪ್ ಟ್ರೋಫಿ ಪಂದ್ಯದ ವೇಳೆ ಆರ್ಸಿಬಿ ಅಭಿಮಾನಿಗಳು ರಾಹುಲ್ಗೆ ಭರ್ಜರಿ ಬೆಂಬಲ ವ್ಯಕ್ತಪಡಿಸಿದ್ದರು. ಈ ಬೆಂಬಲದಿಂದ ಪುಳಕಿತರಾಗಿರುವ ಕನ್ನಡಿಗ ಧನ್ಯವಾದಗಳನ್ನು ಸಹ ತಿಳಿಸಿದ್ದರು.

ಮತ್ತೊಂದೆಡೆ ಐಪಿಎಲ್ 2025 ರಲ್ಲಿ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ. ಹೀಗಾಗಿ ಎಲ್ಎಸ್ಜಿ ತಂಡದಿಂದ ಕನ್ನಡಿಗ ಹೊರಬರುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಈ ವರದಿಗಳ ನಡುವೆ ರಾಹುಲ್ ಆರ್ಸಿಬಿಗೆ ಬರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

ಅದರಲ್ಲೂ ಕನ್ನಡಿಗನ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಟ್ರೋಫಿ ಎತ್ತಿ ಹಿಡಿಯಲಿ ಎಂಬ ಬಯಕೆಯನ್ನು ಆರ್ಸಿಬಿ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಕೆಎಲ್ ರಾಹುಲ್ ನೀಡಿರುವ ಹೇಳಿಕೆಯಿಂದ ಆರ್ಸಿಬಿ ಫ್ಯಾನ್ಸ್ ಕೂಡ ಪುಳಕಿತರಾಗಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಕೆಎಲ್ ರಾಹುಲ್ ಅವರಿಗೆ ಈ ಸಲ ಆರ್ಸಿಬಿ ಕಪ್ ಗೆಲ್ಲಲಿದೆಯಾ ಎಂಬ ಪ್ರಶ್ನೆಯನ್ನು ಮುಂದಿಡಲಾಗಿದೆ. ಈ ಪ್ರಶ್ನೆಗೆ ಉತ್ತರಿಸಿದ ಕೆಎಲ್ಆರ್, ನಾನು ಸಹ ಆರ್ಸಿಬಿ ಕಪ್ ಗೆಲ್ಲಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ. ಈ ಮೂಲಕ ಆರ್ಸಿಬಿ ತಂಡವು ಟ್ರೋಫಿ ಗೆಲ್ಲಬೇಕೆಂಬ ಆಸೆಯಿದೆ ಕೆಎಲ್ ರಾಹುಲ್ ಹೇಳಿದ್ದಾರೆ. ಈ ಹೇಳಿಕೆಯು ಇದೀಗ ವೈರಲ್ ಆಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಅಂದಹಾಗೆ ಕೆಎಲ್ ರಾಹುಲ್ ಆರ್ಸಿಬಿ ಪರ ಒಟ್ಟು 19 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 14 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು 4 ಅರ್ಧಶತಕಗಳೊಂದಿಗೆ ಒಟ್ಟು 417 ರನ್ ಕಲೆಹಾಕಿದ್ದಾರೆ. ಇದಾದ ಬಳಿಕ ಸನ್ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಪರ ಆಡಿದ್ದ ರಾಹುಲ್ ಈಗ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದಾರೆ.

ಒಂದು ವೇಳೆ ಕೆಎಲ್ ರಾಹುಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ, ಅವರ ಖರೀದಿಗಾಗಿ ಆರ್ಸಿಬಿ ಮುಂದಾಗಲಿರುವುದು ಸ್ಪಷ್ಟ. ಏಕೆಂದರೆ ಆರ್ಸಿಬಿ ತಂಡವು ವಿಕೆಟ್ ಕೀಪರ್ ಹಾಗೂ ನಾಯಕನನ್ನು ಎದುರು ನೋಡುತ್ತಿದೆ. ಇತ್ತ ರಾಹುಲ್ ಖರೀದಿಯಿಂದಾಗಿ ಈ ಎರಡು ಸ್ಥಾನಗಳನ್ನು ತುಂಬಬಹುದು. ಅದರಂತೆ ಕೆಎಲ್ ರಾಹುಲ್ ಮುಂದಿನ ಸೀಸನ್ನಲ್ಲಿ ಆರ್ಸಿಬಿ ಪರ ಕಣಕ್ಕಿಳಿಯಲಿದ್ದಾರಾ ಕಾದು ನೋಡಬೇಕಿದೆ.



















