ರೌಫ್ ಕರಾರುವಾಕ್ ದಾಳಿ: 59 ರನ್ಸ್​ಗೆ ಅಫ್ಘಾನಿಸ್ತಾನ್ ಆಲೌಟ್

| Updated By: ಝಾಹಿರ್ ಯೂಸುಫ್

Updated on: Aug 22, 2023 | 10:05 PM

Afghanistan vs Pakistan: ಪಾಕ್ ತಂಡವು ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಗಿತ್ತು. ಫಝಲ್ಹಕ್ ಫಾರೂಖಿ ಎಸೆತದಲ್ಲಿ ಕ್ಯಾಚ್ ನೀಡುವ ಮೂಲಕ ಆರಂಭಿಕ ಆಟಗಾರ ಫಖರ್ ಝಮಾನ್ (2) ಮೊದಲ ಓವರ್​ನಲ್ಲೇ ನಿರ್ಗಮಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಆಝಂ (0) ಕೂಡ ಶೂನ್ಯಕ್ಕೆ ಔಟಾದರು.

ರೌಫ್ ಕರಾರುವಾಕ್ ದಾಳಿ: 59 ರನ್ಸ್​ಗೆ ಅಫ್ಘಾನಿಸ್ತಾನ್ ಆಲೌಟ್
Haris Rauf
Follow us on

ಶ್ರೀಲಂಕಾದ ಹಂಬಂಟೋಟಾದ ಮಹಿಂದಾ ರಾಜಪಕ್ಸೆ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಬಾಬರ್ ಆಝಂ ಮೊದಲು ಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು.

ಆದರೆ ಪಾಕ್ ತಂಡವು ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಗಿತ್ತು. ಫಝಲ್ಹಕ್ ಫಾರೂಖಿ ಎಸೆತದಲ್ಲಿ ಕ್ಯಾಚ್ ನೀಡುವ ಮೂಲಕ ಆರಂಭಿಕ ಆಟಗಾರ ಫಖರ್ ಝಮಾನ್ (2) ಮೊದಲ ಓವರ್​ನಲ್ಲೇ ನಿರ್ಗಮಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಆಝಂ (0) ಕೂಡ ಶೂನ್ಯಕ್ಕೆ ಔಟಾದರು.

ಇದಾಗ್ಯೂ ಮತ್ತೊಂದೆಡೆ ಇಮಾಮ್ ಉಲ್ ಹಕ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. 94 ಎಸೆತಗಳನ್ನು ಎದುರಿಸಿದ ಇಮಾಮ್ 2 ಫೋರ್​ಗಳೊಂದಿಗೆ 61 ರನ್​ ಬಾರಿಸಿದರು.

ಇನ್ನು ಮೊಹಮ್ಮದ್ ರಿಝ್ವಾನ್ 21 ರನ್ ಬಾರಿಸಿದರೆ, ಇಫ್ತಿಕರ್ ಅಹ್ಮದ್ 30 ರನ್ ಕಲೆಹಾಕಿದರು. ಹಾಗೆಯೇ ಅಂತಿಮ ಹಂತದಲ್ಲಿ ಶಾದಾಬ್ ಖಾನ್ 39 ರನ್​ಗಳ ಕೊಡುಗೆ ನೀಡಿದರು. ಅಂತಿಮವಾಗಿ 47.1 ಓವರ್​ಗಳಲ್ಲಿ 210 ರನ್​ಗಳಿಸಿ ಪಾಕಿಸ್ತಾನ್ ತಂಡ ಆಲೌಟ್ ಆಯಿತು.

ಅಫ್ಘಾನಿಸ್ತಾನ್ ಪರ ಮುಜೀಬ್​ ಉರ್ ರೆಹಮಾನ್ 3 ವಿಕೆಟ್ ಪಡೆದರೆ, ಮೊಹಮ್ಮದ್ ನಬಿ ಹಾಗೂ ರಶೀದ್ ಖಾನ್ ತಲಾ 2 ವಿಕೆಟ್ ಕಬಳಿಸಿದರು.

ಇನ್ನು 211 ರನ್​ಗಳ ಸುಲಭ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ್ ತಂಡವು ಹ್ಯಾರಿಸ್ ರೌಫ್ ದಾಳಿಗೆ ತತ್ತರಿಸಿತು. 3ನೇ ಓವರ್​ನಲ್ಲಿ ಇಬ್ರಾಹಿಂ ಝರ್ದಾನ್ (0) ವಿಕೆಟ್ ಪಡೆಯುವ ಮೂಲಕ ಶಹೀನ್ ಅಫ್ರಿದಿ ಶುಭಾರಂಭ ಮಾಡಿದರೆ, 3ನೇ ಕ್ರಮಾಂಕದಲ್ಲಿ ರಹಮತ್ ಶಾ (0) ಕೂಡ ಬಂದ ವೇಗದಲ್ಲೇ ಹಿಂತಿರುಗಿದರು.

ನಾಯಕ ಹಶ್ಮತುಲ್ಲಾ ಶಾಹಿದಿ (0) ನಸೀಮ್ ಶಾ ಎಸೆತದಲ್ಲಿ ಕ್ಯಾಚ್ ನೀಡಿದರು. ಇನ್ನು 18 ರನ್​ಗಳಿಸಿದ್ದ ರಹಮಾನುಲ್ಲಾ ಗುರ್ಬಾಝ್​ಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ಹ್ಯಾರಿಸ್ ರೌಫ್ ಯಶಸ್ವಿಯಾದರು.

ಇತ್ತ ಕೇವಲ 35 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಅಫ್ಘಾನಿಸ್ತಾನ್ ತಂಡಕ್ಕೆ ಹ್ಯಾರಿಸ್ ರೌಫ್ ಬ್ಯಾಕ್ ಟು ಬ್ಯಾಕ್ ಶಾಕ್ ನೀಡಿದರು. ಪರಿಣಾಮ 19.2 ಓವರ್​ಗಳಲ್ಲಿ 59 ರನ್​ಗಳಿಸಿ ಅಫ್ಘಾನಿಸ್ತಾನ್ ತಂಡ ಆಲೌಟ್ ಆಯಿತು. ಇದರೊಂದಿಗೆ ಪಾಕಿಸ್ತಾನ್ ತಂಡ 142 ರನ್​ಗಳ ಜಯ ಸಾಧಿಸಿತು.

ಪಾಕ್ ಪರ ಕರಾರುವಾಕ್ ದಾಳಿ ಸಂಘಟಿಸಿದ ಹ್ಯಾರಿಸ್ ರೌಫ್ 6.2 ಓವರ್​ಗಳಲ್ಲಿ ಕೇವಲ 18 ರನ್ ನೀಡಿ 5 ವಿಕೆಟ್ ಕಬಳಿಸಿದರು. ಇನ್ನು ಶಹೀನ್ ಅಫ್ರಿದಿ 4 ಓವರ್​​ಗಳಲ್ಲಿ 9 ರನ್ ನೀಡಿ 2 ವಿಕೆಟ್ ಪಡೆದರು.

ಅಫ್ಘಾನಿಸ್ತಾನ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ಇಬ್ರಾಹಿಂ ಝದ್ರಾನ್ , ರಹಮತ್ ಷಾ , ಹಶ್ಮತುಲ್ಲಾ ಶಾಹಿದಿ (ನಾಯಕ) , ಮೊಹಮ್ಮದ್ ನಬಿ , ಇಕ್ರಮ್ ಅಲಿಖಿಲ್ , ಅಜ್ಮತುಲ್ಲಾ ಒಮರ್ಜಾಯ್ , ರಶೀದ್ ಖಾನ್ , ಅಬ್ದುಲ್ ರಹಮಾನ್ , ಮುಜೀಬ್ ಉರ್ ರಹಮಾನ್ , ಫಝಲ್ಹಕ್ ಫಾರೂಖಿ.

ಇದನ್ನೂ ಓದಿ: RCB ಯಿಂದ ಇಬ್ಬರು, CSK ಯಿಂದ ಒಬ್ಬರು: ತಂಡದಲ್ಲಿ ಮುಂಬೈ ಅವರದ್ದೇ ದರ್ಬಾರು..!

ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್ , ಇಮಾಮ್-ಉಲ್-ಹಕ್ , ಬಾಬರ್ ಆಝಂ (ನಾಯಕ) , ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್) , ಇಫ್ತಿಕರ್ ಅಹ್ಮದ್ , ಅಘಾ ಸಲ್ಮಾನ್ , ಶಾದಾಬ್ ಖಾನ್ , ಉಸಾಮಾ ಮಿರ್ , ಶಹೀನ್ ಅಫ್ರಿದಿ , ನಸೀಮ್ ಶಾ , ಹ್ಯಾರಿಸ್ ರೌಫ್.