ವಿಶ್ವಕಪ್ ತಂಡದಲ್ಲಿಲ್ಲ ಸ್ಥಾನ; 7 ಸಿಕ್ಸರ್, 11 ಬೌಂಡರಿ ಸಹಿತ ಸಿಡಿಲಬ್ಬರದ ಶತಕ ಸಿಡಿಸಿದ ಬ್ರೂಕ್..!
Harry Brook: ಇಂಗ್ಲೆಂಡ್ ವಿಶ್ವಕಪ್ ತಂಡದಲ್ಲಿ ಅವಕಾಶ ವಂಚಿತರಾಗಿದ್ದ ಯುವ ಬ್ಯಾಟರ್ ಹ್ಯಾರಿ ಬ್ರೂಕ್, ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್ನಲ್ಲಿ ಸಿಡಿಲಬ್ಬರದ ಶತಕ ಸಿಡಿಸಿ, ಇಂಗ್ಲೆಂಡ್ ಆಯ್ಕೆ ಮಂಡಳಿಗೆ ತಾನು ಎಂತಹ ಆಟಗಾರ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಇಂಗ್ಲೆಂಡ್ ವಿಶ್ವಕಪ್ ತಂಡದಲ್ಲಿ (ODI World Cup 2023) ಅವಕಾಶ ವಂಚಿತರಾಗಿದ್ದ ಯುವ ಬ್ಯಾಟರ್ ಹ್ಯಾರಿ ಬ್ರೂಕ್ (Harry Brook), ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ (the Hundred) ಲೀಗ್ನಲ್ಲಿ ಸಿಡಿಲಬ್ಬರದ ಶತಕ ಸಿಡಿಸಿ, ಇಂಗ್ಲೆಂಡ್ ಆಯ್ಕೆ ಮಂಡಳಿಗೆ ತಾನು ಎಂತಹ ಆಟಗಾರ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ವಾಸ್ತವವಾಗಿ ಈ ಮೊದಲು ವಿಶ್ವಕಪ್ ತಂಡದಲ್ಲಿ ಖಚಿತವಾಗಿ ಸ್ಥಾನ ಪಡೆಯುವ ಆಟಗಾರರ ಪಟ್ಟಿಯಲ್ಲಿ ರೂಟ್ ಹೆಸರಿತ್ತು. ಆದರೆ ಬೆನ್ ಸ್ಟೋಕ್ಸ್ (Ben Stokes) ತಮ್ಮ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದಿದ್ದರಿಂದಾಗಿ ಬ್ರೂಕ್ ಬದಲು ಸ್ಟೋಕ್ಸ್ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಯಿತು. ಇದೀಗ ಇಂಗ್ಲೆಂಡ್ ಆಯ್ಕೆ ಮಂಡಳಿಗೆ ತಕ್ಕ ಎದುರೇಟು ನೀಡಿರುವ ಹ್ಯಾರಿ ಬ್ರೂಕ್ ಕೇವಲ 41 ಎಸೆತಗಳಲ್ಲಿ 7 ಸಿಕ್ಸರ್, 11 ಬೌಂಡರಿ ಸಹಿತ ಸ್ಫೋಟಕ ಶತಕ ಸಿಡಿಸುವುದರೊಂದಿಗೆ ದಿ ಹಂಡ್ರೆಡ್ನಲ್ಲಿ ವೇಗದ ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ.
ನಾರ್ದರ್ನ್ ಸೂಪರ್ಚಾರ್ಜರ್ಸ್ ಮತ್ತು ವೇಲ್ಸ್ ಫೈರ್ ತಂಡದ ನಡುವೆ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಾರ್ದರ್ನ್ ಸೂಪರ್ಚಾರ್ಜರ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೂವರು ಟಾಪ್ ಆರ್ಡರ್ ಬ್ಯಾಟರ್ಗಳಲ್ಲಿ ಇಬ್ಬರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಆರಂಭಿಕ ಆಡಮ್ ಲಿಥ್ ಕೇವಲ 2 ರನ್‌ಗಳಿಗೆ ಸುಸ್ತಾಗಿದ್ದರು. ಆದರೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಬ್ರೂಕ್ ವೇಲ್ಸ್ ಫೈರ್ ತಂಡದ ಬೌಲರ್ಗಳ ಬೆವರಿಳಿಸಿದರು.
6,6,6,6,6,6,6.. ದಿ ಹಂಡ್ರೆಡ್ ಲೀಗ್ನಲ್ಲಿ ಅಬ್ಬರಿಸಿದ ಮಾಜಿ ಆರ್ಸಿಬಿ ಬೌಲರ್..!
7 ಸಿಕ್ಸರ್, 11 ಬೌಂಡರಿ, 42 ಎಸೆತ, 105* ರನ್
ಈ ಪಂದ್ಯದಲ್ಲಿ ಬ್ರೂಕ್ 42 ಎಸೆತಗಳನ್ನು ಎದುರಿಸಿ ಅಜೇಯ 105 ರನ್ ಸಿಡಿಸಿದರು. ತಮ್ಮ ಇನ್ನಿಂಗ್ಸ್‌ನ 41ನೇ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಶತಕ ಪೂರೈಸಿದ ಬ್ರೂಕ್ ಅವರ ಇನ್ನಿಂಗ್ಸ್‌ನಲ್ಲಿ ಒಟ್ಟು 7 ಸಿಕ್ಸರ್‌ಗಳು ಮತ್ತು 11 ಬೌಂಡರಿಗಳು ಸೇರಿದ್ದವು. 55 ನಿಮಿಷಗಳ ಕಾಲ ಬ್ಯಾಟ್ ಬೀಸಿದ ಬ್ರೂಕ್ 24 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅಂದರೆ, 50 ರನ್‌ಗಳಿಂದ 100 ರನ್‌ಗಳನ್ನು ತಲುಪಲು, ಅವರು ಕೇವಲ 17 ಎಸೆತಗಳನ್ನು ಮಾತ್ರ ತೆಗೆದುಕೊಂಡರು.
🆕 NEW RECORD 🆕
🏏 42 balls💨 105 runs🤩 1 outstanding innings
The fastest 100 in #TheHundred men's competition 🔥 pic.twitter.com/R6ZWDmqaOh
— The Hundred (@thehundred) August 22, 2023
ಕೊನೆಯ 10 ಎಸೆತಗಳಲ್ಲಿ ಬ್ರೂಕ್ ರೌದ್ರಾವತಾರ
ವಿಶೇಷವೆಂದರೆ ನಾರ್ದರ್ನ್ ಸೂಪರ್‌ಚಾರ್ಜರ್ಸ್ ಇನ್ನಿಂಗ್ಸ್‌ನಲ್ಲಿ ಕೊನೆಯ 10 ಎಸೆತಗಳು ಬಾಕಿ ಇದ್ದಾಗ ಹ್ಯಾರಿ ಬ್ರೂಕ್ 76 ರನ್ ಗಳಿಸಿ ಆಡುತ್ತಿದ್ದರು. ಆದರೆ ಆ ಕೊನೆಯ 10 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವಿನಿಂದ 30 ರನ್ ಗಳಿಸಿ ಶತಕ ಪೂರೈಸಿದರು. ಬ್ರೂಕ್ ಅವರ ಈ ಬಿರುಸಿನ ಇನ್ನಿಂಗ್ಸ್‌ನ ಪರಿಣಾಮವೆಂದರೆ ಒಂದು ಹಂತದಲ್ಲಿ ಕೇವಲ 28 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ನಾರ್ದರ್ನ್ ಸೂಪರ್‌ಚಾರ್ಜರ್ಸ್ ತಂಡವು 100 ಎಸೆತಗಳಲ್ಲಿ 7 ವಿಕೆಟ್‌ಗೆ 158 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಬ್ರೂಕ್ ಶತಕ ವ್ಯರ್ಥ
ಆದಾಗ್ಯೂ, ಹ್ಯಾರಿ ಬ್ರೂಕ್ ಸಿಡಿಸಿದ ಸಿಡಿಲಬ್ಬರದ ಶತಕ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಸಾಧ್ಯವಾಗಲಿಲ್ಲ. ನಾರ್ದರ್ನ್ ಸೂಪರ್‌ಚಾರ್ಜರ್ಸ್ ನೀಡಿದ 158 ರನ್ಗಳ ಗುರಿ ಬೆನ್ನಟ್ಟಿದ ವೇಲ್ಸ್ ಫೈರ್ ತಂಡದ ಬ್ಯಾಟ್ಸ್‌ಮನ್‌ಗಳು ಇನ್ನೂ 10 ಎಸೆತಗಳು ಬಾಕಿ ಇರುವಂತೆಯೇ ಗುರಿ ಬೆನ್ನತ್ತಿ 8 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡರು. ವೇಲ್ಸ್ ಫೈರ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಸ್ಟೀವಿ ಎಸ್ಕಿನಾಜಿ 28 ಎಸೆತಗಳಲ್ಲಿ 58 ರನ್, ಜಾನಿ ಬೈರ್‌ಸ್ಟೋವ್ 39 ಎಸೆತಗಳಲ್ಲಿ 44 ರನ್ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆ ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಜೋ ಕ್ಲಾರ್ಕ್ 22 ಎಸೆತಗಳಲ್ಲಿ 42 ರನ್ ಸಿಡಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:48 am, Wed, 23 August 23