ಏಷ್ಯಾಕಪ್ನ ಮದಗಜಗಳ ಕಾಳಗ ಎಂದು ಬಿಂಬಿತವಾಗಿದ್ದ ಭಾರತ-ಪಾಕಿಸ್ತಾನ್ (India vs Pakistan) ನಡುವಣ ಪಂದ್ಯಕ್ಕಿಂತ ಈ ಬಾರಿ ಹೆಚ್ಚು ಸದ್ದು ಮಾಡಿದ್ದು ಬೇರೆ ತಂಡಗಳು ಎಂಬುದು ವಿಶೇಷ. ಮೊದಲ ಸುತ್ತಿನಲ್ಲಿ ಬಾಂಗ್ಲಾದೇಶ್ ಹಾಗೂ ಶ್ರೀಲಂಕಾ ನಡುವಣ ಪೈಪೋಟಿ ತಾರಕ್ಕೇರಿದರೆ, ಸೂಪರ್-4 ಹಂತದಲ್ಲಿ ಅಫ್ಘಾನಿಸ್ತಾನ್-ಪಾಕಿಸ್ತಾನ್ ಜಿದ್ದಾಜಿದ್ದಿನ ಪೈಪೋಟಿ ನಡೆಸಿತ್ತು. ಆದರೆ ಈ ವೇಳೆ ಆಟಗಾರರು ಕ್ರೀಡಾ ಸ್ಪೂರ್ತಿಯನ್ನೇ ಮರೆತಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಪಾಕಿಸ್ತಾನ್ ಆಟಗಾರ ಆಸಿಫ್ ಅಲಿ ಹಾಗೂ ಅಫ್ಘಾನ್ ವೇಗಿ ಫರೀದ್ ಅಹ್ಮದ್ ನಡುವಣ ಜಿದ್ದಾಜಿದ್ದಿ ಕೈ ಮಿಲಾಯಿಸುವ ತನಕ ಹೋಗಿದ್ದು ವಿಪರ್ಯಾಸ.
ಒಂದೆಡೆ ಫರೀದ್ ಕೆಣಕಿದ್ದರಿಂದ ಆಸಿಫ್ ಬ್ಯಾಟ್ನಿಂದ ಹೊಡೆಯಲು ಮುಂದಾಗಿದ್ದರು ಎಂಬ ವಾದವಾದರೆ, ಇನ್ನೊಂದೆಡೆ ಆಸಿಫ್ ಔಟಾದ ಸಿಟ್ಟಿನಲ್ಲಿ ಬೌಲರ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಆರೋಪಗಳು ಕೂಡ ಕೇಳಿ ಬರುತ್ತಿವೆ. ಅದೇನಿದ್ದರೂ, ಇದೀಗ ಈ ಘಟನೆಯ ಬಳಿಕ ಪಾಕಿಸ್ತಾನದ ಮಾಜಿ ಆಟಗಾರ ಶೊಯೇಬ್ ಅಖ್ತರ್ ನೀಡಿರುವ ಹೇಳಿಕೆಯೊಂದು ಎಲ್ಲರ ಗಮನ ಸೆಳೆದಿದೆ.
ಪಾಕಿಸ್ತಾನದ ಜೊತೆ ಅಫ್ಘಾನಿಸ್ತಾನ್ ಆಟಗಾರರ ವರ್ತನೆಯ ಬಗ್ಗೆ ನಿರಾಶೆ ವ್ಯಕ್ತಪಡಿಸಿರುವ ಅಖ್ತರ್, ಫರೀದ್ ಮಾಡಿದ ತಪ್ಪಿನಿಂದಾಗಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಪ್ರತಿ ಬಾರಿಯು ಪಾಕಿಸ್ತಾನ್-ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾದಾಗ, ಅಫ್ಘಾನ್ ಆಟಗಾರರ ನಡವಳಿಕೆಯು ಸರಿಯಾಗಿರಲ್ಲ ಎಂದು ಶೊಯೇಬ್ ಅಖ್ತರ್ ಟೀಕಿಸಿದ್ದಾರೆ. ಈ ಟೀಕೆಗಳ ನಡುವೆ ರಾವಲ್ಪಿಂಡಿ ಎಕ್ಸ್ಪ್ರೆಸ್ ಟೀಮ್ ಇಂಡಿಯಾ ಆಟಗಾರರನ್ನು ಸಹ ಉಲ್ಲೇಖಿಸಿರುವುದು ವಿಶೇಷ.
ಸಾಂಪ್ರದಾಯಿಕ ಎದುರಾಳಿಗಳಾಗಿ ಕಣಕ್ಕಿಳಿಯುತ್ತಿರುವ ಭಾರತ-ಪಾಕಿಸ್ತಾನ್ ನಡುವಣ ಕಾದಾಟವನ್ನೇ ನಾವು ವೈಯಕ್ತಿಕಗೊಳಿಸುವುದಿಲ್ಲ. ನಾವು ಅವರೊಂದಿಗೆ ತುಂಬಾ ಚೆನ್ನಾಗಿ ವರ್ತಿಸುತ್ತೇವೆ. ಭಾರತೀಯ ಕ್ರಿಕೆಟಿಗರು ನಮ್ಮ ಆಟಗಾರರನ್ನು ಅಪ್ಪಿಕೊಳ್ಳುತ್ತಾರೆ, ಮುತ್ತಿಕ್ಕುತ್ತಾರೆ. ಅದು ಸೋಲಿರಲಿ, ಗೆಲುವಿರಲಿ. ವೈಯುಕ್ತಿಕವಾಗಿ ತೆಗೆದುಕೊಳ್ಳಬಾರದು ಎಂದು ಅಖ್ತರ್ ಹೇಳಿದ್ದಾರೆ.
ಅಷ್ಟೇ ಅಲ್ಲದೆ ಭಾರತ-ಪಾಕ್ ಆಟಗಾರರ ನಡುವಿನ ಸ್ನೇಹವನ್ನು ಉಲ್ಲೇಖಿಸಿ ಅಫ್ಘಾನಿಸ್ತಾನ್ ತಂಡವನ್ನು ತರಾಟೆಗೆ ತೆಗೆದುಕೊಂಡಿರುವ ಅಖ್ತರ್, ಈಗ ನೀವೆಲ್ಲಿದ್ದೀರಿ ಎಂದು ಯೋಚಿಸಿ. ನಾವು ನಿಮ್ಮನ್ನು ನಮ್ಮ ಸಹೋದರರು ಎಂದು ಪರಿಗಣಿಸುತ್ತೇವೆ. ನೀವು ಸಹ ನಮ್ಮ ನೆರೆಯ ರಾಷ್ಟ್ರದವರು. ನಾವು ಪ್ರೀತಿಸುತ್ತೇವೆ ಮತ್ತು ಕಾಳಜಿ ವಹಿಸುತ್ತೇವೆ. ಆದರೆ ಮೈದಾನದಲ್ಲಿ ನೀವು ತೋರಿಸಿದ್ದು ನಿರ್ಲಜ್ಜತನ. ಇದು ಸ್ವೀಕಾರಾರ್ಹವಲ್ಲ ಎಂದು ಶೊಯೇಬ್ ಅಖ್ತರ್ ಹೇಳಿದ್ದಾರೆ.
ಮತ್ತೊಂದೆಡೆ ಅಫ್ಘಾನಿಸ್ತಾನ್ ಹಾಗೂ ಪಾಕಿಸ್ತಾನ್ ಅಭಿಮಾನಿಗಳು ಶಾರ್ಜಾ ಸ್ಟೇಡಿಯಂನಲ್ಲಿ ಹೊಡೆದಾಡಿಕೊಂಡ ಘಟನೆ ಕೂಡ ನಡೆದಿದೆ. ತಮ್ಮ ತಂಡ ಗೆಲ್ಲುತ್ತಿದ್ದಂತೆ ಅಫ್ಘಾನಿಸ್ತಾನ್ ಅಭಿಮಾನಿಗಳನ್ನು ಪಾಕ್ ಫ್ಯಾನ್ಸ್ ಹೀಯಾಳಿಸಿದ್ದರು. ಇದರಿಂದ ರೊಚ್ಚಿಗೆದ್ದ ಅಫ್ಘಾನಿಸ್ತಾನ್ ಅಭಿಮಾನಿಗಳು ಸ್ಟೇಡಿಯಂನಲ್ಲೇ ಪಾಕಿಸ್ತಾನ್ ಫ್ಯಾನ್ಸ್ಗಳ ಮೇಲೆ ಹಲ್ಲೆ ಮಾಡಿದ್ದಾರೆ. ಇದರ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.