Najibullah Zadran
Asia Cup 2022: ಏಷ್ಯಾಕಪ್ನ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ದ ಅಬ್ಬರಿಸುವ ಮೂಲಕ ಅಫ್ಘಾನಿಸ್ತಾನದ ಎಡಗೈ ಬ್ಯಾಟ್ಸ್ಮನ್ ನಜೀಬುಲ್ಲಾ ಝರ್ದಾನ್ (Najibullah Zadran) ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಸಿಡಿಲಬ್ಬರದ ಸಿಕ್ಸ್ ಸಿಡಿಸುವ ಮೂಲಕ ಎಂಬುದು ವಿಶೇಷ. ಈ ಪಂದ್ಯದಲ್ಲಿ ಬಾಂಗ್ಲಾದೇಶ್ ನೀಡಿದ 128 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಅಫ್ಘಾನಿಸ್ತಾನ್ ತಂಡವು 13 ಓವರ್‌ಗಳಲ್ಲಿ ಕಲೆಹಾಕಿದ್ದು ಕೇವಲ 62 ರನ್ ಮಾತ್ರ. ಅದರಂತೆ ಕೊನೆಯ 7 ಓವರ್‌ಗಳಲ್ಲಿ 67 ರನ್ಗಳ ಗುರಿ ಪಡೆದ ಅಫ್ಘಾನಿಸ್ತಾನ್ ಪರ ನಜೀಬುಲ್ಲಾ ಝರ್ದಾನ್ ಅಬ್ಬರಿಸಿದ್ದರು. ಅದರಲ್ಲೂ ಡೆತ್ ಓವರ್‌ಗಳಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದರು.
ಕೇವಲ 17 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 1 ಫೋರ್ನೊಂದಿಗೆ 43 ರನ್ ಬಾರಿಸಿದ ಝರ್ದಾನ್, ಟಿ20 ಕ್ರಿಕೆಟ್ನಲ್ಲಿ 2 ವಿಶ್ವ ದಾಖಲೆಯನ್ನು ಕೂಡ ನಿರ್ಮಿಸಿದರು. ಆ ದಾಖಲೆಗಳೆಂದರೆ…
- ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನ ಚೇಸಿಂಗ್ ವೇಳೆ ಡೆತ್ ಓವರ್‌ಗಳಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ನಜೀಬುಲ್ಲಾ ಝರ್ದಾನ್ ಪಾತ್ರರಾಗಿದ್ದಾರೆ. ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಮೋರ್ಗನ್ ಮತ್ತು ಶ್ರೀಲಂಕಾದ ಆಲ್‌ರೌಂಡರ್ ತಿಸಾರ ಪೆರೆರಾ ಚೇಸಿಂಗ್ ವೇಳೆ ಡೆತ್ ಓವರ್‌ಗಳಲ್ಲಿ 17 ಸಿಕ್ಸ್ಗಳನ್ನು ಬಾರಿಸಿ ದಾಖಲೆ ಬರೆದಿದ್ದರು. ಇದೀಗ ಬಾಂಗ್ಲಾ ವಿರುದ್ಧ 6 ಸಿಕ್ಸರ್ ಸಿಡಿಸುವ ಮೂಲಕ ನಜೀಬುಲ್ಲಾ ಚೇಸಿಂಗ್ ವೇಳೆ ಒಟ್ಟು 18 ಸಿಕ್ಸ್ಗಳನ್ನು ಬಾರಿಸಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ.
- ಇನ್ನು ಈ 6 ಸಿಕ್ಸರ್ಗಳೊಂದಿಗೆ ಟಿ20 ಕ್ರಿಕೆಟ್ನ ಡೆತ್ ಓವರ್‌ಗಳಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟ್ಸ್ಮನ್ ಎಂಬ ಎಂಬ ದಾಖಲೆಯನ್ನೂ ಅಫ್ಘಾನಿಸ್ತಾನದ ಎಡಗೈ ದಾಂಡಿಗ ಪಾತ್ರರಾಗಿದ್ದಾರೆ. ನಜೀಬುಲ್ಲಾ ಝರ್ದಾನ್ ಡೆತ್ ಓವರ್‌ಗಳಲ್ಲಿ ಇದುವರೆಗೆ 53 ಸಿಕ್ಸ್ಗಳನ್ನು ಬಾರಿಸಿದ್ದಾರೆ. ವಿಶೇಷ ಎಂದರೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಡೆತ್ ಓವರ್‌ಗಳಲ್ಲಿ ಯಾವುದೇ ಬ್ಯಾಟ್ಸ್ಮನ್ 50 ಸಿಕ್ಸ್ಗಳನ್ನು ಬಾರಿಸಿಲ್ಲ. ಈ ಹಿಂದೆ ಡೇವಿಡ್ ಮಿಲ್ಲರ್ ಡೆತ್ ಓವರ್‌ಗಳಲ್ಲಿ 47 ಸಿಕ್ಸ್ ಬಾರಿಸಿದ್ದು ದಾಖಲೆಯಾಗಿತ್ತು. ಇದೀಗ ಬಾಂಗ್ಲಾದೇಶ್ ವಿರುದ್ದ 6 ಭರ್ಜರಿ ಸಿಕ್ಸ್ ಬಾರಿಸುವ ಮೂಲಕ ನಜೀಬುಲ್ಲಾ ಝರ್ದಾನ್ ಅಪರೂಪದ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.