
ದಕ್ಷಿಣ ಆಫ್ರಿಕಾದ ಸ್ಟಾರ್ ವೇಗದ ಬೌಲರ್ ಕಗಿಸೊ ರಬಾಡ (Kagiso Rabada) ಮಧ್ಯದಲ್ಲೇ ಐಪಿಎಲ್ (IPL 2025) ತೊರೆದು ದೇಶಕ್ಕೆ ವಾಪಸ್ಸಾಗಿದ್ದು ಏಕೆ ಎಂಬುದು ಕೊನೆಗೂ ಬಹಿರಂಗವಾಗಿದೆ. ಈ ಸೀಸನ್‌ನಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ಪರ ಆಡುತ್ತಿದ್ದ ರಬಾಡ, ಮಾದಕ ದ್ರವ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ಇದ್ದಕ್ಕಿದ್ದಂತೆ ಐಪಿಎಲ್ ತೊರೆದು ತಮ್ಮ ದೇಶವಾದ ದಕ್ಷಿಣ ಆಫ್ರಿಕಾಕ್ಕೆ ಮರಳಿದ್ದರು. ಇದೀಗ ತನ್ನ ದೇಶದಿಂದ ತಾನು ಐಪಿಎಲ್‌ನಿಂದ ಹೊರಬಂದಿದ್ದು ಏಕೆ ಎಂಬುದನ್ನು ಬಹಿರಂಗ ಪಡಿಸಿರುವ ರಬಾಡ ತನ್ನ ತಪ್ಪನ್ನು ಒಪ್ಪಿಕೊಂಡು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ವಾಸ್ತವವಾಗಿ ಗುಜರಾತ್ ಟೈಟಾನ್ಸ್ ತಂಡವು ರಬಾಡ ಅವರನ್ನು 10.75 ಕೋಟಿ ರೂ.ಗಳಿಗೆ ಖರೀದಿಸಿತ್ತು. ಆ ಪ್ರಕಾರ ಈ ಸೀಸನ್‌ನಲ್ಲಿ ಗುಜರಾತ್ ಪರ ಕೇವಲ 2 ಪಂದ್ಯಗಳನ್ನು ಆಡಿದ್ದ ರಬಾಡ ಇದ್ದಕ್ಕಿದ್ದಂತೆ ಏಪ್ರಿಲ್ 2 ರಂದು ಐಪಿಎಲ್ ಅನ್ನು ಅರ್ಧದಲ್ಲೇ ತೊರೆದು ದೇಶಕ್ಕೆ ಮರಳಿದ್ದರು. ಈ ವೇಳೆ ವೈಯಕ್ತಿಕ ಕಾರಣಗಳಿಗಾಗಿ ರಬಾಡ ತಮ್ಮ ದೇಶಕ್ಕೆ ಹಿಂತಿರುಗಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ರಬಾಡ ಟೂರ್ನಿಯಿಂದ ಹೊರಬೀಳಲು ನಿಜವಾದ ಕಾರಣ ಬಹಿರಂಗವಾಗಿದೆ.
ಮೇ 3 ರ ಶನಿವಾರದಂದು ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ಸಂಘವನ್ನು ಉಲ್ಲೇಖಿಸಿ ಹೇಳಿಕೆ ನೀಡಿರುವ ರಬಾಡ, ತಮ್ಮ ಮಾದಕ ದ್ರವ್ಯ ಪರೀಕ್ಷೆಯ ವರದಿ ಪಾಸಿಟಿವ್ ಬಂದ ಕಾರಣ ಐಪಿಎಲ್‌ನಿಂದ ಇದ್ದಕ್ಕಿದ್ದಂತೆ ಹಿಂತಿರುಗಬೇಕಾಯಿತು. ನಿಷೇಧಿತ ಔಷಧಿಗಳನ್ನು ಸೇವಿಸಿದ್ದರಿಂದ ನನ್ನನ್ನು ತಾತ್ಕಾಲಿಕವಾಗಿ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ಅಮಾನತುಗೊಳಿಸಲಾಗಿದೆ. ನಾನು ನಿರಾಶೆಗೊಳಿಸಿದ ಎಲ್ಲರಿಗೂ ನಾನು ಕ್ಷಮೆಯಾಚಿಸುತ್ತೇನೆ. ಕ್ರಿಕೆಟ್ ಆಡುವುದು ನನಗೆ ಸಿಕ್ಕ ದೊಡ್ಡ ಗೌರವ ಮತ್ತು ನಾನು ಅದನ್ನು ಎಂದಿಗೂ ಹಗುರವಾಗಿ ಪರಿಗಣಿಸುವುದಿಲ್ಲ. ಇದು ನನ್ನ ವೈಯಕ್ತಿಕ ಕನಸುಗಳಿಗಿಂತ ದೊಡ್ಡದಾಗಿದೆ. ಇದೀಗ ನಾನು ಅಮಾನತು ಶಿಕ್ಷೆಗೆ ಒಳಗಾಗಿದ್ದರು ಶೀಘ್ರದಲ್ಲೇ ಮರಳಿ ಬಂದು ನಾನು ಹೆಚ್ಚು ಇಷ್ಟಪಡುವ ಕ್ರೀಡೆಯನ್ನು ಆಡಲು ಹಿಂತಿರುಗಲು ಬಯಸುತ್ತೇನೆ ಎಂಬ ಮಾಹಿತಿ ನೀಡಿದ್ದಾರೆ.
Kagiso Rabada confirms in a statement through South Africa’s players union that he is currently serving a provisional suspension after testing positive for a recreational drug pic.twitter.com/gUd9Uu1Vhu
— Ali Martin (@Cricket_Ali) May 3, 2025
ಇನ್ನು ರಬಾಡ ಅಲಭ್ಯತೆ ಗುಜರಾತ್ ತಂಡಕ್ಕೆ ಇದುವರೆಗೆ ಕಾಡಿಲ್ಲ ಎಂಬುದು ಅದರ ಪ್ರದರ್ಶನದಿಂದಲೇ ತಿಳಿಯುತ್ತದೆ. ಗಿಲ್ ಪಡೆ ಆಡಿರುವ10 ಪಂದ್ಯಗಳಲ್ಲಿ ಏಳು ಗೆಲುವು ಮತ್ತು ಮೂರು ಸೋಲುಗಳೊಂದಿಗೆ 14 ಅಂಕಗಳನ್ನು ಹೊಂದಿದೆ. ಇದೀಗ ಗುಜರಾತ್ ಮೇ 6 ರಂದು ಮುಂಬೈ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಜಯಗಳಿಸಿದರೆ, ತಂಡವು ಪ್ಲೇಆಫ್ ತಲುಪಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:10 pm, Sat, 3 May 25