ಓ 36 ರನ್​​ಗೆ ಆಲೌಟ್ ಆದವರು… ಟೀಮ್ ಇಂಡಿಯಾವನ್ನು ಹೀಯಾಳಿಸಿದ ಆಸ್ಟ್ರೇಲಿಯಾ ಆಟಗಾರ

|

Updated on: Dec 03, 2024 | 2:59 PM

India vs Australia 2nd Test: ಬಾರ್ಡರ್ - ಗವಾಸ್ಕರ್ ಟೆಸ್ಟ್ ಸರಣಿಯ‌ ಎರಡನೇ ಪಂದ್ಯ ಶುಕ್ರವಾರದಿಂದ ಶುರುವಾಗಲಿದೆ. ಹೊನಲು ಬೆಳಕಿನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಪಿಂಕ್ ಬಾಲ್ ಬಳಸಲಾಗುತ್ತದೆ. ಹಾಗಾಗಿಯೇ ಈ ಪಂದ್ಯವನ್ನು ಪಿಂಕ್ ಬಾಲ್ ಟೆಸ್ಟ್‌ ಎಂದು ಕರೆಯಲಾಗುತ್ತದೆ.

ಓ 36 ರನ್​​ಗೆ ಆಲೌಟ್ ಆದವರು... ಟೀಮ್ ಇಂಡಿಯಾವನ್ನು ಹೀಯಾಳಿಸಿದ ಆಸ್ಟ್ರೇಲಿಯಾ ಆಟಗಾರ
Alex Carey
Follow us on

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಿಂಕ್ ಬಾಲ್ ಟೆಸ್ಟ್​​ ಪಂದ್ಯಕ್ಕಾಗಿ ದಿನಗಣನೆ ಶುರುವಾಗಿದೆ. ಡಿಸೆಂಬರ್ 6 ರಂದು ಅಡಿಲೇಡ್​​ನ ಓವಲ್ ಮೈದಾನದಲ್ಲಿ ನಡೆಯಲಿರುವ ಹೊನಲು ಬೆಳಕಿನ ಈ ಪಂದ್ಯಕ್ಕಾಗಿ ಉಭಯ ತಂಡಗಳು ಭರ್ಜರಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಈ ಅಭ್ಯಾಸ ನಡುವೆ ಆಸ್ಟ್ರೇಲಿಯಾ ತಂಡ ವಿಕೆಟ್ ಕೀಪರ್​ ಅಲೆಕ್ಸ್ ಕ್ಯಾರಿ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದರು.

ಈ ವೇಳೆ ಮಾತನಾಡಿದ ಅಲೆಕ್ಸ್ ಕ್ಯಾರಿ, ಟೀಮ್ ಇಂಡಿಯಾ 36 ರನ್​​ಗಳಿಗೆ ಆಲೌಟ್ ಆಗಿರುವುದನ್ನು ನೆನಪಿಸಿದ್ದಾರೆ. 2020 ರಲ್ಲಿ ಆಡಿಲೇಡ್​ನಲ್ಲಿ ಆಡಲಾದ ಪಂದ್ಯದಲ್ಲಿ ಭಾರತ ತಂಡವು ಕೇವಲ 36 ರನ್​​ಗಳಿಗೆ ಆಲೌಟ್ ಆಗಿತ್ತು. ಅದು ನನಗೆ ಇನ್ನೂ ನೆನಪಿದೆ ಎಂದು ಕ್ಯಾರಿ ವ್ಯಂಗ್ಯವಾಡಿದ್ದಾರೆ.

ಅಲ್ಲದೆ ಟೀಮ್ ಇಂಡಿಯಾ 36 ರನ್​​ಗೆ ಆಲೌಟ್ ಆಗಿರುವುದು ಐತಿಹಾಸಿಕ ಘಟನೆ. ಅದು ಮತ್ತೊಮ್ಮೆ ಪುನರಾವರ್ತನೆಯಾಗುವುದಿಲ್ಲ. ಇದಾಗ್ಯೂ ಈ ಬಾರಿ ಕೂಡ ನಾವೇ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಗೆಲ್ಲುತ್ತೇವೆ ಎಂದು ಅಲೆಕ್ಸ್ ಕ್ಯಾರಿ ಹೇಳಿದ್ದಾರೆ.

ಏಕೆಂದರೆ ಆಸ್ಟ್ರೇಲಿಯಾ ತಂಡವು ತವರಿನಲ್ಲಿ ಆಡಿದ ಪಿಂಕ್ ಬಾಲ್ ಟೆಸ್ಟ್​ನಲ್ಲಿ ಅತ್ಯುತ್ತಮ ದಾಖಲೆ ಹೊಂದಿದೆ. ಇದರ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ. ಹೀಗಾಗಿ ಈ ಪಂದ್ಯವನ್ನು ಗೆದ್ದು ನಾವು ಸರಣಿಯಲ್ಲಿ ಕಂಬ್ಯಾಕ್ ಮಾಡಲಿದ್ದೇವೆ ಎಂದು ಅಲೆಕ್ಸ್ ಕ್ಯಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

36 ರನ್​​ಗೆ ಆಲೌಟ್:

2020-21ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿತ್ತು. ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​​ನಲ್ಲಿ 244 ರನ್​​ಗಳಿಸಿ ಆಲೌಟ್ ಆಗಿತ್ತು.

ಇದಕ್ಕುತ್ತರವಾಗಿ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವನ್ನು 191 ರನ್​​ಗಳಿಗೆ ಆಲೌಟ್ ಮಾಡುವಲ್ಲಿ ಟೀಮ್ ಇಂಡಿಯಾ ಬೌಲರ್​​ಗಳು ಯಶಸ್ವಿಯಾದರು.

53 ರನ್​​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಕೇವಲ 36 ರನ್​​ಗಳಿಗೆ ಆಲೌಟ್ ಆಗಿತ್ತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಭಾರತ ತಂಡದ ಅತ್ಯಂತ ಕಡಿಮೆ ಮೊತ್ತ. ಅಲ್ಲದೆ ಟೆಸ್ಟ್​ನಲ್ಲಿ ಅತೀ ಕಡಿಮೆ ಸ್ಕೋರ್​ಗಳಿಸಿದ ವಿಶ್ವದ 4ನೇ ತಂಡ ಎಂಬ ಅಪಖ್ಯಾತಿಗೂ ಟೀಮ್ ಇಂಡಿಯಾ ಒಳಗಾಗಿತ್ತು.

ಇದನ್ನೂ ಓದಿ: 15.5 ಓವರ್​​ಗಳಲ್ಲಿ ಕೇವಲ 5 ರನ್: ದಾಖಲೆ ಪುಟಕ್ಕೆ ಜೇಡನ್ ಸೀಲ್ಸ್ ಎಂಟ್ರಿ

ಈ ಹೀನಾಯ ಸೋಲನ್ನು ಪ್ರಸ್ತಾಪಿಸಿ ಇದೀಗ ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಅಡಿಲೇಡ್ ಟೆಸ್ಟ್​ನಲ್ಲಿ ಈ ಬಾರಿ ಕೂಡ ಆಸೀಸ್ ಪಡೆ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.