
ಏಕದಿನ ಕ್ರಿಕೆಟ್ ಶುರುವಾಗಿ ಬರೋಬ್ಬರಿ 54 ವರ್ಷಗಳಾಗಿವೆ. ಈ ಐವತ್ತನಾಲ್ಕು ವರ್ಷಗಳಲ್ಲಿ ಅತ್ಯಂತ ದುಬಾರಿ ಓವರ್ಗಳನ್ನು ಎಸೆದ ಹೀನಾಯ ದಾಖಲೆಯೊಂದು ಭಾರತೀಯ ಆಟಗಾರನ ಹೆಸರಿಗೆ ಸೇರ್ಪಡೆಯಾಗಿದೆ. ಅದು ಕೂಡ 10 ಓವರ್ಗಳಲ್ಲಿ ಬರೋಬ್ಬರಿ 123 ರನ್ಗಳನ್ನು ನೀಡುವ ಮೂಲಕ ಎಂಬುದೇ ಅಚ್ಚರಿ.
ವಿಜಯ ಹಝಾರೆ ಟೂರ್ನಿಯಲ್ಲಿ ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಪುದುಚೇರಿ ಪರ ಕಣಕ್ಕಿಳಿದ ಅಮಾನ್ ಖಾನ್ 10 ಓವರ್ಗಳಲ್ಲಿ ಬರೋಬ್ಬರಿ 123 ರನ್ಗಳನ್ನು ನೀಡಿದ್ದಾರೆ. ಈ ಮೂಲಕ ಲಿಸ್ಟ್ ಎ (ಏಕದಿನ) ಕ್ರಿಕೆಟ್ನಲ್ಲಿ 10 ಓವರ್ಗಳಲ್ಲಿ ಅತ್ಯಧಿಕ ರನ್ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಈ ಹೀನಾಯ ದಾಖಲೆ ನೆದರ್ಲೆಂಡ್ಸ್ ತಂಡದ ಬಾಸ್ ಡಿ ಲೀಡೆ ಹೆಸರಿನಲ್ಲಿತ್ತು. 2023 ರ ಏಕದಿನ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದಿದ್ದ ಬಾಸ್ ಡಿ ಲೀಡೆ 10 ಓವರ್ಗಳಲ್ಲಿ ಬರೋಬ್ಬರಿ 115 ರನ್ ನೀಡಿ ಈ ಅನಗತ್ಯ ದಾಖಲೆಗೆ ಕೊರೊಳೊಡ್ಡಿದ್ದರು.
ಇದೀಗ ಪುದುಚೇರಿ ತಂಡದ ನಾಯಕ ಅಮಾನ್ ಖಾನ್ ಈ ಹೀನಾಯ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಪ್ರತಿ ಓವರ್ಗೆ 12.30 ರನ್ ನೀಡುವ ಮೂಲಕ ಅಮಾನ್ ಒಟ್ಟು 123 ರನ್ ಚಚ್ಚಿಸಿಕೊಂಡಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದ ಅತ್ಯಂತ ದುಬಾರಿ ಓವರ್ಗಳನ್ನು ಎಸೆದ ಬೌಲರ್ ಎನಿಸಿಕೊಂಡಿದ್ದಾರೆ.
29 ವರ್ಷದ ಅಮಾನ್ ಖಾನ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯಲಿದ್ದಾರೆ. ಐಪಿಎಲ್ 2026ರ ಮಿನಿ ಹರಾಜಿನ ಮೂಲಕ ಸಿಎಸ್ಕೆ ಅಮಾನ್ ಖಾನ್ ಅವರನ್ನು 40 ಲಕ್ಷ ರೂ.ಗೆ ಖರೀದಿಸಿದ್ದಾರೆ.
ಇದನ್ನೂ ಓದಿ: 310ರ ಸ್ಟ್ರೈಕ್ ರೇಟ್ನಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ, ಆದರೆ…
ಇದಕ್ಕೂ ಮುನ್ನ ಅಮಾನ್ ಖಾನ್ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಒಟ್ಟು 12 ಪಂದ್ಯಗಳನ್ನಾಡಿರುವ ಅಮಾನ್ ಒಂದು ಅರ್ಧಶತಕದೊಂದಿಗೆ ಒಟ್ಟು 115 ರನ್ ಕಲೆಹಾಕಿದ್ದಾರೆ. ಇದೀಗ ಐಪಿಎಲ್ನಲ್ಲಿ ಹೊಸ ಇನಿಂಗ್ಸ್ ಆರಂಭಿಸುವ ಇರಾದೆಯಲ್ಲಿದ್ದ ಅಮಾನ್ ಖಾನ್ ಬೇಡದ ದಾಖಲೆಯೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.
Published On - 1:59 pm, Tue, 30 December 25