‘ಕಣ್ಣಿಗೆ ಕಣ್ಣೇ ಎಂದರೆ ಇಡೀ ಜಗತ್ತೇ ಕುರುಡಾಗುತ್ತದೆ’; ಶಾಂತಿ ಮಂತ್ರ ಜಪಿಸಿದ ರಾಯುಡುಗೆ ಭಾರತೀಯರ ಹಿಡಿಶಾಪ

Ambati Rayudu's Controversial Post: ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಿರುವ ಸಮಯದಲ್ಲಿ, ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಅವರು 'ಕಣ್ಣಿಗೆ ಕಣ್ಣೇ ಎಂದರೆ ಇಡೀ ಜಗತ್ತೇ ಕುರುಡಾಗುತ್ತದೆ' ಎಂದು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಅವರ ಈ ಹೇಳಿಕೆಗೆ ನೆಟ್ಟಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

‘ಕಣ್ಣಿಗೆ ಕಣ್ಣೇ ಎಂದರೆ ಇಡೀ ಜಗತ್ತೇ ಕುರುಡಾಗುತ್ತದೆ’; ಶಾಂತಿ ಮಂತ್ರ ಜಪಿಸಿದ ರಾಯುಡುಗೆ ಭಾರತೀಯರ ಹಿಡಿಶಾಪ
Ambati Rayudu

Updated on: May 09, 2025 | 3:04 PM

ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ್’ (Operation Sindoor) ನಂತರ ಉಭಯ ದೇಶಗಳ ನಡುವಿನ ಸಂಘರ್ಷ ಹೆಚ್ಚಾಗಿದೆ. ತನ್ನ ಚಟುವಟಿಕೆಗಳಿಂದ ಹಿಂದೆ ಸರಿಯದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಪಾಠ ಕಲಿಸುತ್ತಿದೆ. ಇಡೀ ದೇಶವೇ ಸರ್ಕಾರ ಮತ್ತು ಸೇನೆಯೊಂದಿಗೆ ನಿಂತು ಪಾಕಿಸ್ತಾನಕ್ಕೆ ಕಠಿಣ ಪಾಠ ಕಲಿಸುವ ಪ್ರಯತ್ನಗಳನ್ನು ಬೆಂಬಲಿಸುತ್ತಿರುವ ಸಮಯದಲ್ಲಿ, ಭಾರತದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು (Ambati Rayudu) ಅವರ ಪೋಸ್ಟ್ ಒಂದು ಕೋಲಾಹಲ ಸೃಷ್ಟಿಸಿದೆ.

ಮೇ 8 ರಂದು ಪಾಕಿಸ್ತಾನ, ಭಾರತದ ಮೇಲೆ ಇದ್ದಕ್ಕಿದ್ದಂತೆ ಡ್ರೋನ್‌ ಮತ್ತು ಕ್ಷಿಪಣಿಗಳ ಮೂಲಕ ದಾಳಿ ಮಾಡಿತು. ಜಮ್ಮು ಮತ್ತು ಕಾಶ್ಮೀರ ಮತ್ತು ರಾಜಸ್ಥಾನದ ಹಲವು ಭಾಗಗಳಲ್ಲಿ ಪಾಕಿಸ್ತಾನ ಡಜನ್‌ಗಟ್ಟಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿತು, ಈಗಾಗಲೇ ಎಚ್ಚರವಾಗಿರುವ ಭಾರತೀಯ ಪಡೆಗಳ ವಾಯು ರಕ್ಷಣಾ ವ್ಯವಸ್ಥೆಯು ಅವುಗಳನ್ನು ಯಶಸ್ವಿಯಾಗಿ ವಿಫಲಗೊಳಿಸಿತು. ಸೇನಾ ಬಲವನ್ನು ಇಡೀ ಭಾರತವೇ ಹಾಡಿಹೊಗುಳುತ್ತಿರುವ ಸಮಯದಲ್ಲಿ ಕ್ರಿಕೆಟಿಗ ಅಂಬಟಿ ರಾಯುಡು ಶಾಂತಿ ಮಂತ್ರಿ ಜಪಿಸಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಣ್ಣಿಗೆ ಕಣ್ಣೇ ಎಂದರೆ ಇಡೀ ಜಗತ್ತೇ ಕುರುಡಾಗುತ್ತದೆ

ಪಾಕಿಸ್ತಾನದ ದಾಳಿಯನ್ನು ಮೆಟ್ಟಿ ನಿಂತಿರುವ ಭಾರತ, ಪಾಕಿಸ್ತಾನದ ಮೇಲೂ ಸತತವಾಗಿ ದಾಳಿ ನಡೆಸುತ್ತಿದೆ. ಲಾಹೋರ್, ಸಿಯಾಲ್ಕೋಟ್, ಇಸ್ಲಾಮಾಬಾದ್ ಸೇರಿದಂತೆ ಪಾಕಿಸ್ತಾನದ ಹಲವು ನಗರಗಳ ಮೇಲೆ ಭಾರತ ದಾಳಿ ಮಾಡಿತು. ಈ ನಡುವೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ತಮ್ಮ ಎಕ್ಸ್ ಖಾತೆಯಲ್ಲಿ ‘ಕಣ್ಣಿಗೆ ಕಣ್ಣೇ ಎಂದರೆ ಇಡೀ ಜಗತ್ತೇ ಕುರುಡಾಗುತ್ತದೆ’ ಎಂದು ಪೋಸ್ಟ್ ಮಾಡಿದ್ದಾರೆ.

ಇಷ್ಟು ದಿನ ಆರ್​ಸಿಬಿ ತಂಡವನ್ನು ಟೀಕಿಸಿ, ಆರ್​ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ರಾಯುಡು, ಮುಯ್ಯಿಗೆ ಮುಯ್ಯಿ ಎಂಬ ನಿರ್ಧಾರ ಸರಿ ಇಲ್ಲ. ಇದರ ಬದಲು ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂಬರ್ಥದಲ್ಲಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದೀಗ ರಾಯುಡು ಅವರ ಈ ಪೋಸ್ಟ್ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ತಮ್ಮ ಪೋಸ್ಟ್​ಗೆ ವ್ಯತಿರಿಕ್ತವಾಗಿ ಟೀಕೆಗಳು ಬರುತ್ತಿರುವುದನ್ನು ಗಮನಿಸಿದ ರಾಯುಡು ಹೊಸ ಪೋಸ್ಟ್ ಮಾಡಿ, ‘ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಭಾರತದ ಗಡಿಯ ಇತರ ಭಾಗಗಳಲ್ಲಿ ಎಲ್ಲರ ಸುರಕ್ಷತೆ ಮತ್ತು ಶಾಂತಿಗಾಗಿ ಪ್ರಾರ್ಥಿಸುತ್ತಿದ್ದೇನೆ. ಇದರಿಂದ ಬಾಧಿತರಾದ ಎಲ್ಲರಿಗೂ ಸುರಕ್ಷತೆ, ಶಕ್ತಿ ಮತ್ತು ತ್ವರಿತ ಪರಿಹಾರಕ್ಕಾಗಿ ಆಶಿಸುತ್ತಿದ್ದೇನೆ. ಜೈ ಹಿಂದ್’ ಎಂದು ಬರೆದುಕೊಂಡಿದ್ದಾರೆ. ಆದಾಗ್ಯೂ, ರಾಯುಡು ಅವರ ಈ ಪೋಸ್ಟ್ ಬಗ್ಗೆಯೂ ನೆಟ್ಟಿಗರಿಂದ ಸಾಕಷ್ಟು ಟೀಕೆಗಳು ಕೇಳಿಬಂದಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:03 pm, Fri, 9 May 25