Andre Russell: ಸಿಕ್ಸರ್ ಮ್ಯಾನ್ ರಸೆಲ್ ಅವರ ಒಂದೊಂದು ಸಿಕ್ಸ್​​ ಹೇಗಿತ್ತು ಗೊತ್ತೇ?: ಇಲ್ಲಿದೆ ನೋಡಿ

| Updated By: Vinay Bhat

Updated on: Apr 02, 2022 | 7:41 AM

KKR vs PBKS, IPl 2022: ಕೆಕೆಆರ್ ತಂಡದ ಬ್ಯಾಟ್ಸ್​​ಮನ್​ ಆಂಡ್ರೆ ರಸೆಲ್ (Andre Russell) ಸ್ಫೋಟಕ ಆಟಕ್ಕೆ ತತ್ತರಿಸಿದ ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಐಪಿಎಲ್ 2022 ರಲ್ಲಿ ಮೊದಲ ಸೋಲುಂಡಿದೆ. ಈ ಪಂದ್ಯದ ಪ್ರಮುಖ ಹೈಲೇಟ್ ರಸೆಲ್ ಅವರ ಸಿಕ್ಸರ್​​ಗಳ ಮಳೆ.

Andre Russell: ಸಿಕ್ಸರ್ ಮ್ಯಾನ್ ರಸೆಲ್ ಅವರ ಒಂದೊಂದು ಸಿಕ್ಸ್​​ ಹೇಗಿತ್ತು ಗೊತ್ತೇ?: ಇಲ್ಲಿದೆ ನೋಡಿ
Andre Russel KKR vs PBKS
Follow us on

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಶುಕ್ರವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR vs PBKS)​ ತಂಡ ಭರ್ಜರಿ ಗೆಲುವು ಸಾಧಿಸಿ ಬೀಗಿದೆ. ಆಂಡ್ರೆ ರಸೆಲ್ (Andre Russell) ಸ್ಫೋಟಕ ಆಟಕ್ಕೆ ತತ್ತರಿಸಿದ ಮಯಾಂಕ್ ಪಡೆ ಐಪಿಎಲ್ 2022 (IPL 2022) ರಲ್ಲಿ ಮೊದಲ ಸೋಲುಂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಬೊಂಬಾಟ್ ಪ್ರದರ್ಶನ ನೀಡಿದ ಅಯ್ಯರ್ ಪಡೆ 6 ವಿಕೆಟ್​ಗಳ ಅಮೋಘ ಜಯ ಕಂಡಿತು. ಇದರೊಂದಿಗೆ ಕೆಕೆಆರ್ ಪಾಯಿಂಟ್ ಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರಿದೆ. ಆಡಿದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆಲುವು, ಒಂದರಲ್ಲಿ ಸೋಲು ಕಂಡು ಒಟ್ಟು 4 ಅಂಕದೊಂದಿಗೆ +0.843 ರನ್​​ರೇಟ್​ನೊಂದಿಗೆ ನಂಬರ್ ಒನ್ ಸ್ಥಾನಕ್ಕೇರಿದೆ. ಇತ್ತ ಪಂಜಾಬ್ ಕಿಂಗ್ಸ್2 ಪಂದ್ಯಗಳಲ್ಲಿ ತಲಾ ಒಂದು ಗೆಲುವು ಸೋಲು ಕಂಡು ಎರಡು ಅಂಕದೊಂದಿಗೆ ಏಳನೇ ಸ್ಥಾನಕ್ಕೆ ಕುಸಿದಿದೆ. ಈ ಪಂದ್ಯದ ಪ್ರಮುಖ ಹೈಲೇಟ್ ರಸೆಲ್ ಅವರ ಸಿಕ್ಸರ್​​ಗಳ ಮಳೆ.

ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಬ್ಯಾಟಿಂಗ್‌ಗೆ ಇಳಿದ ಪಂಜಾಬ್ ಕಿಂಗ್ಸ್ ಮೊದಲ ಓವರ್​ನಲ್ಲೇ ವಿಕೆಟ್ ಕಳೆದುಕೊಂಡಿತು. ಉಮೇಶ್ ಯಾದವ್ ಬೌಲಿಂಗ್​ನಲ್ಲಿ ನಾಯಕ ಮಯಾಂಕ್ ಅಗರ್ವಾಲ್ 1 ರನ್ ಗಳಿಸಿ ಔಟ್ ಆದರು. ಹೀಗೆ ಆರಂಭಿಕ ಆಘಾತ ಅನುಭವಿಸಿದ ಪಂಜಾಬ್ ಕಿಂಗ್ಸ್ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾನುಕಾ ರಾಜಪಕ್ಸೆ 9 ಎಸೆತಗಳಿಗೆ 31 ರನ್ ಚಚ್ಚಿ ಟಿಮ್ ಸೌಥಿಗೆ ಕ್ಯಾಚ್ ನೀಡುವ ಮೂಲಕ ಔಟ್ ಆದರು. ಶಿಖರ್ ಧವನ್ ಆಟ 16 ರನ್​ಗೆ ಅಂತ್ಯವಾಯಿತು. ಲಿಯಾಮ್ ಲಿವಿಂಗ್‌ಸ್ಟನ್ ಕೂಡ 19 ರನ್​ಗೆ ನಿರ್ಗಮಿಸಿದರು. ಕಗಿಸೊ ರಬಾಡಾ 25 ರನ್ ಗಳಿಸಿದರು. ಈ ಮೂಲಕ ಪಂಜಾಬ್ 18.2 ಓವರ್‌ಗಳಲ್ಲೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 137 ರನ್​ಗೆ ಆಲೌಟ್ ಆಯಿತು. ಕೆಕೆಆರ್ ಪರ ಉಮೇಶ್ ಯಾದವ್ 4 ವಿಕೆಟ್ ಪಡೆದರೆ ಟಿಮ್ ಸೌಥಿ 2 ವಿಕೆಟ್ ಕಿತ್ತರು.

ಪಂಜಾಬ್ ನೀಡಿದ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಕೊಲ್ಕತ್ತಾ ತಂಡ ಸಹ ಆರಂಭದಲ್ಲಿ ಪಟಪಟನೇ ವಿಕೆಟ್ ಬೀಳುವ ಮೂಲಕ ಸಂಕಷ್ಟಕ್ಕೆ ಒಳಗಾಗಿತ್ತು. ಕೊಲ್ಕತ್ತಾ ಪರ ವೆಂಕಟೇಶ್ ಅಯ್ಯರ್ (3), ನಿತಿಶ್ ರಾಣಾ (0) ಮತ್ತು ಅಜಿಂಕ್ಯಾ ರಹಾನೆ (12) ಬೇಗನೇ ಔಟಾಗುವ ಮೂಲಕ ತಂಡ ಸಂಕಷ್ಟಕ್ಕೆ ಸಿಲುಕಿತು. ಆದರೆ ಮದ್ಯಮ ಕ್ರಮಾಂಕದಲ್ಲಿ ನಾಯಕ ಶ್ರೇಯಸ್​ ಅಯ್ಯರ್ (26) ಮತ್ತು ಸ್ಯಾಮ್ ಬಿಲ್ಲಿಂಗ್ಸ್ (24*) ಅಲ್ಪ ಪ್ರಮಾಣದ ಚೇತರಿಕೆ ನೀಡಿದರು. ಅಯ್ಯರ್ ಔಟಾದ ನಂತರ ಶುರುವಾಗಿದ್ದು ಆಂಡ್ರೆ ರಸೆಲ್ ಸ್ಫೋಟಕ ಆಟ.

ಹೌದು, ಶ್ರೇಯಸ್ ಅಯ್ಯರ್ ನಿರ್ಗಮನದ ಬಳಿಕ ಕ್ರೀಸ್​ಗೆ ಬಂದ ರಸೆಲ್ ಆರಂಭದ ಕೆಲ ಎಸೆತಗಳನ್ನು ಗಮನಿಸಿ ನಂತರ ಸಿಕ್ಸರ್​ಗಳ ಮಳೆ ಸುರಿಸಿದರು. ಪಂಜಾಬ್ ಪಾಳಯದಲ್ಲಿ ಮೂಡಿದ್ದ ಗೆಲುವು ಆಸೆಗೆ ತಣ್ಣೀರೆರಚಿದರು. ಅದ್ಭುತ ಬೌಲಿಂಗ್ ಮಾಡುತ್ತಿದ್ದ ಲೆಗ್‌ ಸ್ಪಿನ್ನರ್‌ ರಾಹುಲ್‌ ಚಹರ್‌ ಅವರಿಗೆ ಗೌರವ ಕೊಟ್ಟು, ಉಳಿದ ಬೌಲರ್‌ಗಳನ್ನು ಬಡಿದು ಬೆಂಡೆತ್ತಲು ಶುರು ಮಾಡಿದರು. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದ ರಸೆಲ್ ಕೇವಲ 31 ಎಸೆತಗಳಲ್ಲಿ 2 ಬೌಂಡರಿ ಹಾಗೂ 8 ಅಮೋಘ ಸಿಕ್ಸರ್​ಗಳ ಮೂಲಕ ಅಜೇಯ 70 ರನ್ ಚಚ್ಚಿದರು. ಅವರ ಸಿಕ್ಸರ್​ಗಳ ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ರಸೆಲ್ ಅವರ ಈ ಸ್ಫೋಟಕ ಆಟದ ನೆರವಿನಿಂದ ಕೆಕೆಆರ್ ತಂಡ 14.3 ಓವರ್​​ನಲ್ಲೇ 4 ವಿಕೆಟ್ ನಷ್ಟಕ್ಕೆ 141 ರನ್ ಸಿಡಿಸಿ 6 ವಿಕೆಟ್​ಗಳ ಭರ್ಜರಿ ಗೆಲುವು ಕಂಡಿತು. ಪಂಜಾಬ್ ಪರ ರಾಹುಲ್ ಚಹರ್ 4 ಓವರ್​ಗೆ 13 ರನ್ ನೀಡಿ 2 ವಿಕೆಟ್ ಕಿತ್ತರೆ, ಕಗಿಸೊ ರಬಾಡ ಹಾಗೂ ಓಡೆನ್ ಸ್ಮಿತ್ ತಲಾ 1 ವಿಕೆಟ್ ಪಡೆದರು.

GT vs DC Playing XI IPL 2022: ಬಲಿಷ್ಠ ಡೆಲ್ಲಿಗೆ ಗುಜರಾತ್ ಸವಾಲು; ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI

Published On - 7:38 am, Sat, 2 April 22