Andrew Symonds death: ದಾಖಲೆಗಳ ಸರದಾರ ಈ ಆಸೀಸ್ ಆಟಗಾರ; ಆಂಡ್ರ್ಯೂ ಸೈಮಂಡ್ಸ್ ವಿಶೇಷ​​ ರೆಕಾರ್ಡ್​​ಗಳು ಇಲ್ಲಿವೆ

| Updated By: shivaprasad.hs

Updated on: May 15, 2022 | 2:02 PM

Andrew Symonds : ಆಸ್ಟ್ರೇಲಿಯಾ ವಿಶ್ವಕಪ್​ನಲ್ಲಿ ಗೆಲುವಿನ ದಾಖಲೆ ಬರೆಯುವುದಕ್ಕೆ ಸೈಮಂಡ್ಸ್​​ ಕೊಡುಗೆ ದೊಡ್ಡದಿದೆ. ಇದೇ ಕಾರಣಕ್ಕೆ ಕಾಂಗರೂ ನಾಡಿನ ಈ ಆಟಗಾರನಿಗೆ ವಿಶ್ವಾದ್ಯಂತ ಅಭಿಮಾನಿ ವೃಂದವಿದೆ. ಸೈಮಂಡ್ಸ್ ವೃತ್ತಿ ಜೀವನದ ದಾಖಲೆಗಳ ಪಟ್ಟಿ ಇಲ್ಲಿದೆ.

Andrew Symonds death: ದಾಖಲೆಗಳ ಸರದಾರ ಈ ಆಸೀಸ್ ಆಟಗಾರ; ಆಂಡ್ರ್ಯೂ ಸೈಮಂಡ್ಸ್ ವಿಶೇಷ​​ ರೆಕಾರ್ಡ್​​ಗಳು ಇಲ್ಲಿವೆ
ವಿಶ್ವಕಪ್​ಗಳ ಜತೆ ಆಂಡ್ರ್ಯೂ ಸೈಮಂಡ್ಸ್
Follow us on

ಆಸೀಸ್ ಕ್ರಿಕೆಟ್ ತಾರೆ 46 ವರ್ಷದ ಆಂಡ್ರ್ಯೂ ಸೈಮಂಡ್ಸ್​​ (Andrew Symonds) ಶನಿವಾರ ರಾತ್ರಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಮತ್ತೋರ್ವ ತಾರಾ ಆಟಗಾರನ ನಿಧನಕ್ಕೆ ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ. ಅಂತಾರಾಷ್ರೀಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಸೈಮಂಡ್ಸ್ ಅವರದ್ದು ದೊಡ್ಡ ಹೆಸರು. ಅಂತಾರಾಷ್ಟ್ರೀಯ ಕ್ರಿಕೆಟ್​ ಜತೆಗೆ ಐಪಿಎಲ್​ನಲ್ಲೂ ಸೈಮಂಡ್ಸ್​​ ಹಲವು ದಾಖಲೆ ಬರೆದಿದ್ದಾರೆ. ಬೇಡದ ಕಾರಣಗಳಿಗೂ ಅವರು ಸುದ್ದಿಯಾಗಿದ್ದಿದೆ. ಅದಾಗ್ಯೂ ಸೈಮಂಡ್ಸ್​ ವರ್ಣರಂಜಿತ ವ್ಯಕ್ತಿತ್ವ, ವಿಭಿನ್ನ ಶೈಲಿ, ಆಕ್ರಮಣಕಾರಿ ಆಟ ಕ್ರಿಕೆಟ್​ಗೆ ಹೊಸ ಮೆರುಗನ್ನು ತಂದಿದ್ದು ಸುಳ್ಳಲ್ಲ. ಆಸ್ಟ್ರೇಲಿಯಾ ವಿಶ್ವಕಪ್​ನಲ್ಲಿ ಗೆಲುವಿನ ದಾಖಲೆ ಬರೆಯುವುದಕ್ಕೆ ಸೈಮಂಡ್ಸ್​​ ಕೊಡುಗೆ ದೊಡ್ಡದಿದೆ. ಇದೇ ಕಾರಣಕ್ಕೆ ಕಾಂಗರೂ ನಾಡಿನ ಈ ಆಟಗಾರನಿಗೆ ವಿಶ್ವಾದ್ಯಂತ ಅಭಿಮಾನಿ ವೃಂದವಿದೆ. ಸೈಮಂಡ್ಸ್ ವೃತ್ತಿ ಜೀವನದ ದಾಖಲೆಗಳ ಪಟ್ಟಿ ಇಲ್ಲಿದೆ.

ಏಕದಿನ ಕ್ರಿಕೆಟ್​ನಲ್ಲಿ 5,000 ರನ್​+ 100 ವಿಕೆಟ್​​:

ಏಕದಿನ ಕ್ರಿಕೆಟ್​ನಲ್ಲಿ 5,000ಕ್ಕೂ ಹೆಚ್ಚು ರನ್ ಹಾಗೂ 100 ವಿಕೆಟ್ ಕಬಳಿಸಿದ ಕೆಲವೇ ಆಟಗಾರರಲ್ಲಿ ಸೈಮಂಡ್ಸ್ ಒಬ್ಬರು. ಅವರು 5,088 ರನ್ ಬಾರಿಸಿದ್ದು, 133 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾ ತಂಡವನ್ನು 198 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದ ಸೈಮಂಡ್ಸ್ 1998-2009ರವರೆಗೆ 11 ವರ್ಷಗಳ ಕಾಲ ಒಡಿಐ ಪಂದ್ಯಗಳನ್ನಾಡಿದ್ದರು.

ಇದನ್ನೂ ಓದಿ
SRH vs KKR: 15 ಸೆಕೆಂಡ್​ಗಳ ನಂತರ ಡಿಆರ್​ಎಸ್​; ಮನವಿಯನ್ನು ಒಪ್ಪದ ಅಂಪೈರ್ ಜತೆ ರಿಂಕು ಸಿಂಗ್ ವಾಗ್ವಾದ​
Andrew Symonds: ಕ್ರಿಕೆಟ್ ಲೋಕಕ್ಕೆ ಮತ್ತೊಂದು ಆಘಾತ: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಆ್ಯಂಡ್ರ್ಯೂ ಸೈಮಂಡ್ಸ್‌ ನಿಧನ
KKR vs SRH IPL Match Result: ರಸೆಲ್ ಅಬ್ಬರಕ್ಕೆ ಮಂಕಾದ ಹೈದರಾಬಾದ್; ಕೆಕೆಆರ್ ಪ್ಲೇ ಆಫ್ ಕನಸು ಜೀವಂತ
Sachin Tendulkar: ಸಚಿನ್ ತೆಂಡೂಲ್ಕರ್ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್ ‘ಫೇಕ್’

ಎರಡು ಬಾರಿ ವಿಶ್ವಕಪ್ ವಿಜೇತ ಆಲ್​ರೌಂಡರ್:

2003ರ ವಿಶ್ವಕಪ್​ಗೆ ಆಂಡ್ರ್ಯೂ ಸೈಮಂಡ್ಸ್​​ ಆಯ್ಕೆಯಾದಾಗ ಮೂಗು ಮುರಿದವರೇ ಹೆಚ್ಚು. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಅದುವರೆಗೆ ಸೈಮಂಡ್ಸ್​​ರಿಂದ ಸತತವಾಗಿ ಉತ್ತಮ ಪ್ರದರ್ಶನ ಬಂದಿರಲಿಲ್ಲ. ಹೀಗಾಗಿ ವಿಶ್ವಕಪ್​ಗೆ ಇಂತಹ ಆಟಗಾರನನ್ನು ಆಯ್ಕೆ ಮಾಡಿದ್ದರ ಬಗ್ಗೆ ಹಲವರಿಗೆ ಅನುಮಾನ ಇದ್ದೇ ಇತ್ತು. ಜತೆಗೆ ಅವರ ಆಯ್ಕೆ ಬಹಳ ಅನಿರೀಕ್ಷಿತವಾಗಿತ್ತು. ಆದರೆ ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 126 ಎಸೆತಗಳಲ್ಲಿ 143 ರನ್ ಚಚ್ಚಿದ ಸೈಮಂಡ್ಸ್​ ವಿಶ್ವ ಕ್ರಿಕೆಟ್​ಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ಆಸ್ಟ್ರೇಲಿಯಾ ತಂಡದ 2003 ಹಾಗೂ 2007ರ ವಿಶ್ವಕಪ್ ಗೆಲುವಿನಲ್ಲಿ ಸೈಮಂಡ್ಸ್ ಕೊಡುಗೆ ದೊಡ್ಡದಿದೆ. ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಜತೆಗೆ ಮಿಂಚಿನ ಫೀಲ್ಡಿಂಗ್ ಮೂಲಕ ಸೈಮಂಡ್ಸ್​​ ತಂಡಕ್ಕೆ ಆಸರೆಯಾಗುತ್ತಿದ್ದರು.

ವಿಶ್ವ XIರ ಬಳಗದಲ್ಲಿ ಮೂರು ಬಾರಿ ಸ್ಥಾನ ಪಡೆದ ಸೈಮಂಡ್ಸ್:

ಆಂಡ್ರ್ಯೂ ಸೈಮಂಡ್ಸ್​​ ಐಸಿಸಿ ಪ್ರಕಟಿಸುವ ಏಕದಿನ ವಿಶ್ವ XIರ ಬಳಗದಲ್ಲಿ ಸೈಮಂಡ್ಸ್​ ಮೂರು ಬಾರಿ ಸ್ಥಾನ ಪಡೆದಿದ್ದರು. 2005ರಲ್ಲಿ ಮೊದಲ ಬಾರಿಗೆ ಈ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ಸೈಮಂಡ್ಸ್ 2006ರಲ್ಲಿ 12ನೇ ಆಟಗಾರನಾಗಿ ವಿಶ್ವ 11 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. 2008ರಲ್ಲಿ ಮತ್ತೆ ವಿಶ್ವ XI ಬಳಗದಲ್ಲಿ ಅವರು ಕಾಣಿಸಿಕೊಂಡರು.

20 ವರ್ಷಗಳಿಗೂ ಅಧಿಕ ಕಾಲ ಯಾರಿಂದಲೂ ಮುರಿಯಲು ಸಾಧ್ಯವಾಗದಿದ್ದ ಸೈಮಂಡ್ಸ್ ದಾಖಲೆ:​​

ಅಂತಾರಾಷ್ಟ್ರೀಯ ಕ್ರಿಕೆಟ್ ಜತೆಗೆ ದೇಶಿ ಕ್ರಿಕೆಟ್​​ಗಳಲ್ಲೂ ಸೈಮಂಡ್ಸ್​ ಹಲವು ದಾಖಲೆ ರಚಿಸಿದ್ದರು. ಆಸ್ಟ್ರೇಲಿಯಾದಲ್ಲಿ ದೇಶಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಸೈಮಂಡ್ಸ್​​, ವಿಶ್ವದಾಖಲೆ ಬರೆದಿದ್ದು ಇಂಗ್ಲೆಂಡ್​ನಲ್ಲಿ. 1995ರಲ್ಲಿ ಗ್ಲೌಸೆಸ್ಟರ್‌ಶೈರ್ ಪರ ಆಡಿದ್ದ ಸೈಮಂಡ್ಸ್​ ಒಂದು ಇನ್ನಿಂಗ್ಸ್​​ನಲ್ಲಿ 16 ಸಿಕ್ಸರ್​​ಗಳೊಂದಿಗೆ 254 ರನ್ ಚಚ್ಚಿದ್ದರು. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಒಂದೇ ಇನ್ನಿಂಗ್ಸ್​ನಲ್ಲಿ ಯಾಔ ಆಟಗಾರನೂ ಅಷ್ಟು ಸಿಕ್ಸರ್ ಸಿಡಿಸಿರಲಿಲ್ಲ. 2015ರವರೆಗೆ ಈ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ನ್ಯೂಜಿಲ್ಯಾಂಡ್​ನ ಕಾಲಿನ್ ಮನ್ರೋ ಆಕ್ಲಂಡ್ ಹಾಗೂ ಸೆಂಟ್ರಲ್ ಡಿಸ್ಟ್ರಿಕ್ಟ್ಸ್​​ ನಡುವಿನ ಪಂದ್ಯದಲ್ಲಿ 23 ಸಿಕ್ಸರ್ ಸಿಡಿಸಿ ಸೈಮಂಡ್ಸ್​ ದಾಖಲೆ ಮುರಿದರು.

ಚೊಚ್ಚಲ ಐಪಿಎಲ್ ಪಂದ್ಯಾವಳಿಯಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರ:

2008ರ ಚೊಚ್ಚಲ ಐಪಿಎಲ್​ ಪಂದ್ಯಾವಳಿಯಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರರಾಗಿ ಹರಾಜಾಗಿದ್ದರು ಸೈಮಂಡ್ಸ್​​. 1.35 ಮಿಲಿಯನ್ ಡಾಲರ್ ನೀಡಿ ಡೆಕ್ಕನ್ ಚಾರ್ಜರ್ಸ್​​ ಸೈಮಂಡ್ಸ್​​ರನ್ನು ಖರೀದಿಸಿತ್ತು. 2009ರ ಡೆಕ್ಕನ್ ಚಾರ್ಜರ್ಸ್​​ ಐಪಿಎಲ್ ಗೆಲುವಿನಲ್ಲಿ ಸೈಮಂಡ್ಸ್​ ಮಹತ್ವದ ಕೊಡುಗೆ ನೀಡಿದ್ದರು. 2011ರ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಸೈಮಂಡ್ಸ್ ಕಣಕ್ಕಿಳಿದಿದ್ದರು. ಅದೇ ಅವರ ಕೊನೆಯ ಐಪಿಎಲ್ ಸರಣಿಯಾಗಿತ್ತು. ತಮ್ಮ ಐಪಿಎಲ್ ವೃತ್ತಿ ಜೀವನದ 39 ಪಂದ್ಯಗಳಲ್ಲಿ 974 ರನ್ ಹಾಗೂ 20 ವಿಕೆಟ್​​ಗಳನ್ನು ಸೈಮಂಡ್ಸ್​ ಪಡೆದಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:13 am, Sun, 15 May 22