Umran Malik: ಉಮ್ರಾನ್ ಮಲಿಕ್ ಆ ದಾಖಲೆ ಮುರಿಯಬೇಕು; ಶೋಯಬ್ ಅಖ್ತರ್ ಹೇಳಿದ್ದು ಯಾವ ದಾಖಲೆಯ ಕುರಿತು?
Shoaib Akhtar: ಉಮ್ರಾನ್ ಮಲಿಕ್ ಪ್ರಸ್ತುತ ತಮ್ಮ ಬೆಂಕಿಯ ವೇಗದಿಂದ ಎಲ್ಲೆರ ಮನಗೆಲ್ಲುತ್ತಿದ್ದಾರೆ. ವಿಶ್ವ ಕ್ರಿಕೆಟ್ನಲ್ಲಿ ಮುರಿಯದ ದಾಖಲೆಯಾಗಿರುವ 100 ಮೈಲು ವೇಗದ ಎಸೆತವನ್ನು ಉಮ್ರಾನ್ ಮುರಿಯಬೇಕು ಎನ್ನುವ ಹಂಬಲ ಹೇಳಿಕೊಂಡಿದ್ದಾರೆ ಆ ದಾಖಲೆಯ ಒಡೆಯ ಶೋಯಬ್ ಅಖ್ತರ್.
ಪ್ರಸ್ತುತ ಭಾರತದಲ್ಲಿ ಪ್ರತಿಭಾವಂತ ವೇಗಿಗಳದ್ದೇ ಸುದ್ದಿ. ಈ ಬಾರಿಯ ಐಪಿಎಲ್ನಲ್ಲಂತೂ ವೇಗಿಗಳದ್ದೇ ಕಾರುಬಾರು. ಅದರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವೇಗಿ ಉಮ್ರಾನ್ ಮಲಿಕ್ (Umran Malik) ಪ್ರಮುಖ ಹೆಸರು. ತಮ್ಮ ಮಾರಕ ವೇಗದೊಂದಿಗೆ ವಿಕೆಟ್ಗಳನ್ನೂ ಪಡೆದಿರುವ ಜಮ್ಮುವಿನ ಈ ವೇಗಿ ಸದ್ಯ ದೇಶದ ಕಣ್ಮಣಿ. ಅದಾಗ್ಯೂ ಹಿಂದಿನ ಮೂರು ಪಂದ್ಯಗಳಲ್ಲಿ ಉಮ್ರಾನ್ಗೆ ಅವರ ವೇಗವೇ ಮುಳುವಾಗಿತ್ತು. ಬ್ಯಾಟರ್ಗಳು ಅವರ ಎಸೆತವನ್ನು ನಿರಾಯಾಸವಾಗಿ ಬೌಂಡರಿಗೆ ಅಟ್ಟುತ್ತಿದ್ದರು. ಈ ಕಾರಣ ಉಮ್ರಾನ್ ಪ್ರತಿಭೆಯ ಬಗ್ಗೆ ಹಲವರು ಸಂಶಯವನ್ನೂ ವ್ಯಕ್ತಪಡಿಸಿದ್ದರು. ಆದರೆ ಕೋಲ್ಕತ್ತಾ ನಡುವಿನ ಪಂದ್ಯದ ಮೂಲಕ 22ರ ಹರೆಯದ ಉಮ್ರಾನ್ ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ. 4 ಓವರ್ಗಳಲ್ಲಿ 33 ರನ್ಗೆ 3 ವಿಕೆಟ್ ಕಬಳಿಸಿದ ಉಮ್ರಾನ್ ಮಲಿಕ್ ಮತ್ತೆ ಎಲ್ಲರ ಮನಗೆದ್ದಿದ್ದಾರೆ. ವಿಶೇಷವೆಂದರೆ ಉಮ್ರಾನ್ ಪಡೆದ ವಿಕೆಟ್ಗಳೆಲ್ಲವೂ ವಿಶ್ವದರ್ಜೆ ಬ್ಯಾಟರ್ಗಳದ್ದು. ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್ ಹಾಗೂ ನಿತೀಶ್ ರಾಣಾ ಉಮ್ರಾನ್ಗೆ ವಿಕೆಟ್ ಒಪ್ಪಿಸಿದರು. ಸದ್ಯ ಈ ವೇಗಿಯ ಪ್ರದರ್ಶನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪಾಕ್ ವೇಗಿ ಶೋಯಬ್ ಅಖ್ತರ್ (Shoaib Akhtar) ಮತ್ತೊಮ್ಮೆ ಭಾರತದ ವೇಗಿಯನ್ನು ಹೊಗಳಿದ್ದಾರೆ.
ಪ್ರಸ್ತುತ ಐಪಿಎಲ್ನಲ್ಲಿ 157 ಕಿಮೀ ವೇಗದ ಎಸೆತ ಎಸೆದು ಎಲ್ಲರ ಹುಬ್ಬೇರಿಸಿದ್ದ ಉಮ್ರಾನ್ ಮಲಿಕ್ ಮುಂಬರುವ ಟಿ20 ವಿಶ್ವಕಪ್ಗೆ ಸ್ಥಾನ ಪಡೆಯಲಿದ್ದಾರೆಯೇ ಎಂಬುದು ಸದ್ಯದ ಕುತೂಹಲ. ಈಗಾಗಲೇ ದಿಗ್ಗಜ ಆಟಗಾರರು ಉಮ್ರಾನ್ ಪರ ಬ್ಯಾಟ್ ಬೀಸಿದ್ದಾರೆ. ಭಾರತದ ಪರ ಉಮ್ರಾನ್ ಅತ್ಯುತ್ತಮ ಪ್ರದರ್ಶನ ನೀಡಬೇಕಾದರೆ ಎಸ್ಆರ್ಹೆಚ್ ಉಮ್ರಾನ್ರನ್ನು ಗಾಯಗಳಿಂದ ರಕ್ಷಿಬೇಕು ಎಂದಿದ್ದಾರೆ ಅಖ್ತರ್.
ವಿಶ್ವದಲ್ಲೇ ಮೊದಲ ಬಾರಿಗೆ 100 ಮೈಲು ವೇಗದಲ್ಲಿ (161.3 ಕಿಮೀ/ಗಂ) ಬೆಂಕಿಯ ಚೆಂಡೆಸೆದು ಎಲ್ಲರನ್ನೂ ಅಚ್ಚರಿಗೆ ತಳ್ಳಿದ್ದ ಶೋಯಬ್ ಅಖ್ತರ್, ಆ ದಾಖಲೆಯನ್ನು ಉಮ್ರಾನ್ ಮಲಿಕ್ ಮುರಿಯಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸಿದ್ದಾರೆ. ‘‘ಕೆಲವು ದಿನಗಳ ಹಿಂದೆ ನನಗೆ ಯಾರೋ 100 ಮೈಲಿ ವೇಗದಲ್ಲಿ ಚೆಂಡೆಸೆದು 20 ವರ್ಷಗಳು ತುಂಬಿದ್ದಕ್ಕೆ ಶುಭಾಶಯ ಹೇಳಿದ್ದರು. ಇದುವರೆಗೆ ಅದನ್ನು ಯಾರೂ ಬ್ರೇಕ್ ಮಾಡಿಲ್ಲ. ನನ್ನ ಪ್ರಕಾರ ಆ ದಾಖಲೆಯನ್ನು ಮುರಿಯುವವರು ಯಾರಾದರೂ ಇದ್ದೇ ಇರುತ್ತಾರೆ. ಉಮ್ರಾನ್ ಮಲಿಕ್ ಆ ಸಾದನೆ ಮಾಡಿದರೆ ನನಗೆ ಬಹಳ ಖುಷಿ. ಈ ನಡುವೆ ಅವರನ್ನು ಗಾಯದಿಂದ ರಕ್ಷಿಸಬೇಕು. ಈ ಮೂಲಕ ದೀರ್ಘಾವಧಿಯಲ್ಲಿ ಅವರು ಕ್ರಿಕೆಟ್ ಆಡುವಂತೆ ವೇದಿಕೆ ಕಲ್ಪಿಸಿಕೊಡಬೇಕು’’ ಎಂದಿದ್ದಾರೆ ಅಖ್ತರ್.
ಪ್ರಸ್ತುತ 150 ಕಿಮೀ ವೇಗದಲ್ಲಿ ಸತತವಾಗಿ ಬೌಲಿಂಗ್ ಮಾಡುವವರು ವಿರಳ ಎಂದಿರುವ ಅಖ್ತರ್, ‘‘ಉಮ್ರಾನ್ ಆ ವೇಗದಲ್ಲಿ ಸತತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅವರು ನನ್ನ ವಿಶ್ವದಾಖಲೆಯನ್ನು ಮುರಿಯಬೇಕು. 100 ಮೈಲು ವೇಗದಲ್ಲಿ ಬೌಲಿಂಗ್ ಮಾಡಿದ ಕ್ಲಬ್ಗೆ ಅವರೂ ಸೇರಬೇಕು’’ ಎಂದಿದ್ದಾರೆ.
ಇಂತಹ ವಿಶೇಷ ಪ್ರತಿಭೆಯನ್ನು ಕಾಪಾಡಿಕೊಳ್ಳಬೇಕು ಎಂದು ಬಿಸಿಸಿಐಗೆ ಕಿವಿಮಾತನ್ನೂ ಹೇಳಿದ್ದಾರೆ ಶೋಯಬ್ ಅಖ್ತರ್. ‘ವೇಗವಾಗಿ ಓಡುವ ಕಾರು ಅಪಘಾತವಾಗಿ ಇಂಜಿನ್ಗೆ ಹಾನಿಯಾಗುವ ಸಾಧ್ಯತೆಯೂ ಹೆಚ್ಚು. ಅದನ್ನು ಸರಿಯಾಗಿ ನಿಯಂತ್ರಣ ಮಾಡಬೇಕು. ವೈಜ್ಞಾನಿಕವಾಗಿ ಉಮ್ರಾನ್ಗೆ ಟ್ರೇನಿಂಗ್ ನೀಡಬೇಕು’’ ಎಂದಿದ್ದಾರೆ ಪಾಕ್ ವೇಗಿ.
ಮತ್ತಷ್ಟು ಐಪಿಎಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:01 am, Sun, 15 May 22