Shreyas Iyer: ಪಂದ್ಯ ಮುಗಿದ ಬಳಿಕ ಶ್ರೇಯಸ್ ಅಯ್ಯರ್ ಆಡಿದ ಮಾತುಗಳೇನು ಕೇಳಿ
KKR vs SRH: ಆಲ್ರೌಂಡ್ ನಿರ್ವಹಣೆ ತೋರಿದ ಕೆಕೆಆರ್ ಪ್ಲೇಯರ್ ಆಂಡ್ರೆ ರಸೆಲ್ ಎಸ್ಆರ್ಹೆಚ್ ವಿರುದ್ಧ ಕೇವಲ 28 ಎಸೆತಗಳಲ್ಲಿ ಅಜೇಯ 49 ರನ್ ಸಿಡಿಸುವ ಜೊತೆಗೆ 22 ರನ್ಗೆ 3 ವಿಕೆಟ್ ಕಿತ್ತು ಮಿಂಚಿದರು. ಪಂದ್ಯ ಮುಗಿದ ಬಳಿಕ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಮಾತನಾಡಿದ್ದು ಏನು ಹೇಳಿದ್ದಾರೆ ಕೇಳಿ.
ಐಪಿಎಲ್ 2022 ರಲ್ಲಿ (IPL 2022) ಶನಿವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR vs SRH) ತಂಡ ಬರೋಬ್ಬರಿ 54 ರನ್‌ಗಳ ಅಮೋಘ ಗೆಲುವು ಪಡೆದುಕೊಂಡಿತು. ಈ ಜಯದೊಂದಿಗೆ ಕೆಕೆಆರ್ ತನ್ನ ಪ್ಲೇ ಆಫ್ ರೇಸ್ನಲ್ಲಿ ಇನ್ನೂ ಜೀವಂತವಾಗಿದೆ. ಇತ್ತ ಎಸ್ಆರ್ಹೆಚ್ ಸ್ಥಿತಿ ಚಿಂತಾಜನಕವಾಗಿದೆ. ಆಂಡ್ರೆ ರಸೆಲ್ ಹಾಗೂ ಸ್ಯಾಮ್ ಬಿಲಿಂಗ್ಸ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ 6 ವಿಕೆಟ್‌ಗೆ 177 ರನ್ ಪೇರಿಸಿತು. ಪ್ರತಿಯಾಗಿ ಸನ್‌ರೈಸರ್ಸ್ ಅಭಿಷೇಕ್ ಶರ್ಮ (43ರನ್, 28 ಎಸೆತ, 4 ಬೌಂಡರಿ, 2 ಸಿಕ್ಸರ್) ಬಿರುಸಿನ ಆರಂಭದ ನಡುವೆಯೂ 8 ವಿಕೆಟ್‌ಗೆ 123 ರನ್‌ಗಳಿಸಲಷ್ಟೇ ಶಕ್ತವಾಯಿತು. ಆಲ್ರೌಂಡ್ ನಿರ್ವಹಣೆ ತೋರಿದ ಆಂಡ್ರೆ ರಸೆಲ್ ಕೇವಲ 28 ಎಸೆತಗಳಲ್ಲಿ ಅಜೇಯ 49 ರನ್ ಸಿಡಿಸುವ ಜೊತೆಗೆ 22 ರನ್ಗೆ 3 ವಿಕೆಟ್ ಕಿತ್ತು ಮಿಂಚಿದರು. ಪಂದ್ಯ ಮುಗಿದ ಬಳಿಕ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಮಾತನಾಡಿದ್ದು ಏನು ಹೇಳಿದ್ದಾರೆ ಕೇಳಿ.
“ಈ ಪಂದ್ಯಕ್ಕಾಗಿ ನಾವು ಮಾಡಿಕೊಂಡ ಮನಸ್ಥಿತಿ ಅತ್ಯುತ್ತಮವಾಗಿತ್ತು. ನಮ್ಮ ತಂಡದಲ್ಲಿನ ಎಲ್ಲ ಆಟಗಾರರು ಭಯ ಬಿಟ್ಟು ನೈಜ್ಯ ಆಟವಾಡಿದರು. ಟಾಸ್ ಎಲ್ಲ ಪಂದ್ಯದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಮುಖ್ಯವಾಗಿ ಪುಣೆಯಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ತಂಡ ಅನೇಕ ಪಂದ್ಯಗಳನ್ನು ಗೆದ್ದ ಉದಾಹರಣೆಗಳಿವೆ. ಎಲ್ಲವೂ ನಾವು ಅಂದುಕೊಂಡಂತೆ ಸಾಗಿತು. ನಾವು ಓವರ್ಗೆ ತಕ್ಕಂತೆ ಮುಂದೆ ಹೋದೆವು. ರಸೆಲ್ ಅವರಿಗೆ ಸಾಕಷ್ಟು ಸಮಯ ಸ್ಟ್ರೈಕ್ನಲ್ಲಿ ಇರಲು ಸೂಚಿಸಲಾಗಿತ್ತು. ಸುಂದರ್ ಅವರ ಒಂದು ಓವರ್ ಬಾಕಿಯಿತ್ತೆಂದು ತಿಳಿದಿತ್ತು. ಆ ಓವರ್ ಅನ್ನು ಟಾರ್ಗೆಟ್ ಮಾಡುವುದು ನಮ್ಮ ಪ್ಲಾನ್ ಆಗಿತ್ತು. ಸ್ಯಾಮ್ ಬಿಲ್ಲಿಂಗ್ಸ್ ಕೂಡ ಉತ್ತಮ ಸಾಥ್ ನೀಡಿದರು. ಇದು ಚೆನ್ನಾಗಿ ಕೆಸಲ ಮಾಡಿತು. ಕೊನೆಯ ಪಂದ್ಯದಲ್ಲೂ ಇದೇ ರೀತಿ ಆಗುತ್ತದೆ ಎಂದು ನಂಬಿದ್ದೇನೆ,” ಎಂಬುದು ಶ್ರೇಯಸ್ ಮಾತು.
“ಸ್ಲೋ ವಿಕೆಟ್ನಲ್ಲಿ ಸುನಿಲ್ ನರೈನ್ ಮತ್ತು ವರುಣ್ ಚಕ್ರವತ್ತಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ಪ್ರಮುಖ ವಿಕೆಟ್ಗಳನ್ನು ಪಡೆದುಕೊಂಡರು. ನಾವು ಈಗ ಕಳೆದುಕೊಳ್ಳಲು ಏನೂ ಇಲ್ಲ. ನಾವು ಈ ಟೂರ್ನಿಯಲ್ಲಿ ಅತ್ಯುತ್ತಮ ಎಂಬಂತ ಪ್ರದರ್ಶನ ನೀಡಿಲ್ಲ ಎಂದು ನಾನು ಪಂದ್ಯ ಅರಂಭಕ್ಕೂ ಮುನ್ನ ಆಟಗಾರರ ಜೊತೆ ಮಾತನಾಡಿದೆ. ಈ ಪಂದ್ಯದಲ್ಲಿ ಆಟಗಾರರು ನೀಡಿದ ಪ್ರದರ್ಶನ ನನಗೆ ಖುಷಿ ತಂದಿದೆ,” ಎಂದು ಅಯ್ಯರ್ ಹೇಳಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೆಕೆಆರ್ ಪರ ಆರಂಭಿಕನಾಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್(7) ಬಹುಬೇಗನೆ ಔಟಾದರು. ಅಜಿಂಕ್ಯಾ ರಹಾನೆ(28) ಹಾಗೂ ನಿತೀಶ್ ರಾಣ(26) 2ನೇ ವಿಕೆಟ್‌ಗೆ 48 ರನ್‌ಗಳ ಉಪಯುಕ್ತ ಜೊತೆಯಾಟವಾಡಿದರು. ನಾಯಕ ಶ್ರೇಯಸ್ ಅಯ್ಯರ್(15) ಹಾಗೂ ರಿಂಕು ಸಿಂಗ್(5) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ 6ನೇ ವಿಕೆಟ್‌ಗೆ ಜೊತೆಯಾದ ಸ್ಯಾಮ್ ಬಿಲ್ಲಿಂಗ್ಸ್(34) ಹಾಗೂ ಆಂಡ್ರೆ ರಸೆಲ್(49*) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಕೊನೆ ಓವರ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರಸೆಲ್, 20 ರನ್‌ಗಳಿಸಿ ತಂಡದ ಮೊತ್ತವನ್ನ 177ಕ್ಕೆ ಏರಿಸಿದರು.
ಟಾರ್ಗೆಟ್ ಬೆನ್ನತ್ತಿದ ಸನ್‌ರೈಸರ್ಸ್ ಚೇಸಿಂಗ್‌ನಲ್ಲಿ ಮುಗ್ಗರಿಸಿತು. ಆರಂಭಿಕನಾಗಿ ಕಣಕ್ಕಿಳಿದ ನಾಯಕ ಕೇನ್ ವಿಲಿಯಂಸನ್(9) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ನಂತರ ಬಂದ ರಾಹುಲ್ ತ್ರಿಪಾಠಿ(9), ನಿಕೋಲಸ್ ಪೂರನ್(2), ವಾಷಿಂಗ್ಟನ್ ಸುಂದರ್(4), ಶಶಾಂಕ್ ಸಿಂಗ್(11), ಜಾನ್ಸನ್(1), ಭುವನೇಶ್ವರ್ ಕುಮಾರ್(6*), ಉಮ್ರಾನ್ ಮಲ್ಲಿಕ್(3*) ನಿರೀಕ್ಷೆಗೆ ತಕ್ಕಂತೆ ಆಡುವಲ್ಲಿ ಎಡವಿದರು. ಪರಿಣಾಮ ಸನ್‌ರೈಸರ್ಸ್ 123 ರನ್‌ಗಳಿಗೆ ತನ್ನ ಹೋರಾಟ ಅಂತ್ಯಗೊಳಿಸಿತು. ಪ್ರಮುಖರ ವೈಫಲ್ಯದ ನಡುವೆಯೂ ಅಭಿಷೇಕ್ ಶರ್ಮ43(28) ಹಾಗೂ ಐಡೆನ್ ಮಾರ್ಕ್ರಂ 32(25) ಜವಾಬ್ದಾರಿಯ ಆಟವಾಡಿದರೂ ಗೆಲ್ಲಲು ಸಾಧ್ಯವಾಗಲಿಲ್ಲ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.