
ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ (IPL) ಹೊರಹಾಕಿದ ಬಳಿಕ ಬಿಸಿಸಿಐ (BCCI) ವಿರುದ್ಧ ಸೆಟೆದು ನಿಂತಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BPL) ಇದೀಗ ತನ್ನ ದೇಶದ ಆಟಗಾರರಿಂದಲೇ ವಿಶ್ವ ಮಟ್ಟದಲ್ಲಿ ಮುಜುಗರಕ್ಕೆ ಒಳಗಾಗಿದೆ. ವಾಸ್ತವವಾಗಿ ಇಂದು ನಡೆಯಬೇಕಿದ್ದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನ ಪಂದ್ಯಗಳು ಒಂದೇ ಒಂದು ಎಸೆತವನ್ನು ಕಾಣದೆ ರದ್ದಾಗಿವೆ. ಇದ್ದಕ್ಕೆ ಕಾರಣ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಹಾಗೂ ಬಾಂಗ್ಲಾದೇಶ ಕ್ರಿಕೆಟಿಗರ ಕಲ್ಯಾಣ ಸಂಘದ ನಡುವಿನ ವೈಮನಸ್ಸು. ಅಷ್ಟಕ್ಕೂ ಆಗಿದ್ದೇನೆಂದರೆ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಹಣಕಾಸು ಸಮಿತಿಯ ಅಧ್ಯಕ್ಷ ನಜ್ಮುಲ್ ಇಸ್ಲಾಂ, ಆಟಗಾರರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಇದರಿಂದ ಕೆರಳಿದ ಆಟಗಾರರು ನಜ್ಮುಲ್ ಇಸ್ಲಾಂ ಅವರನ್ನು ಈ ಹುದ್ದೆಯಿಂದ ತೆಗೆದುಹಾಕದಿದ್ದರೆ, ಯಾರೂ ಕೂಡ ಕ್ರಿಕೆಟ್ ಮೈದಾನಕ್ಕೆ ಇಳಿಯುವುದಿಲ್ಲ ಎಂದು ಮಂಡಳಿಗೆ ಸವಾಲೊಡ್ಡಿದ್ದರು. ಇದರ ಪರಿಣಾಮವಾಗಿ ಇಂದು ನಡೆಯಬೇಕಿದ್ದ ಎರಡೂ ಪಂದ್ಯಗಳು ರದ್ದಾಗಿವೆ.
ವಾಸ್ತವವಾಗಿ ಟಿ20 ವಿಶ್ವಕಪ್ಗಾಗಿ ಭಾರತಕ್ಕೆ ತನ್ನ ತಂಡವನ್ನು ಕಳುಹಿಸಲು ಒಪ್ಪದ ಬಾಂಗ್ಲಾ ಮಂಡಳಿ, ತನ್ನ ತಂಡದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಬೇಕೆಂದು ಐಸಿಸಿಗೆ ಮನವಿ ಮಾಡಿತ್ತು. ಆದರೆ ಈ ಬಗ್ಗೆ ಐಸಿಸಿಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಒಂದು ವೇಳೆ ಐಸಿಸಿ ತನ್ನ ಮನವಿಗೆ ಸ್ಪಂದಿಸದಿದ್ದರೆ, ಬಾಂಗ್ಲಾ ಮಂಡಳಿ ಟಿ20 ವಿಶ್ವಕಪ್ ಬಹಿಷ್ಕರಿಸುವ ಬಗ್ಗೆಯೂ ಚಿಂತಿಸುತ್ತಿದೆ. ಇದನ್ನು ಗಮನಿಸಿದ್ದ ಬಾಂಗ್ಲಾದೇಶ ತಂಡದ ಮಾಜಿ ನಾಯಕ ತಮೀಮ್ ಇಕ್ಬಾಲ್, ನಮ್ಮ ತಂಡ ಐಸಿಸಿ ಟೂರ್ನಿಗಳಲ್ಲಿ ಆಡುವುದು ಒಳಿತು. ಹೀಗಾಗಿ ಬಾಂಗ್ಲಾ ತಂಡವನ್ನು ಟಿ20 ವಿಶ್ವಕಪ್ ಆಡಲು ಭಾರತಕ್ಕೆ ಕಳುಹಿಸುವ ಬಗ್ಗೆ ಯೋಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದಿದ್ದರು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಹಣಕಾಸು ಸಮಿತಿಯ ಅಧ್ಯಕ್ಷ ನಜ್ಮುಲ್ ಇಸ್ಲಾಂ, ‘ಬಾಂಗ್ಲಾದೇಶ ತಂಡವು 2026 ರ ಟಿ20 ವಿಶ್ವಕಪ್‌ನಲ್ಲಿ ಆಡದಿದ್ದರೆ ಅದು ಆಟಗಾರರಿಗೆ ಮಾತ್ರ ನಷ್ಟವನ್ನುಂಟು ಮಾಡುತ್ತದೆಯೇ ವಿನಃ ಮಂಡಳಿಗಲ್ಲ. ಮಂಡಳಿಯು ಆಟಗಾರರಿಗಾಗುವ ಯಾವುದೇ ನಷ್ಟವನ್ನು ಬರಿಸುವುದಿಲ್ಲ ಎಂದ್ದಿದ್ದರು. ಈ ಹೇಳಿಕೆಯಿಂದ ಕೆರಳಿದ್ದ ಬಾಂಗ್ಲಾದೇಶ ಕ್ರಿಕೆಟಿಗರು ಬಿಸಿಬಿ ನಿರ್ದೇಶಕ ಮತ್ತು ಹಣಕಾಸು ಸಮಿತಿಯ ಅಧ್ಯಕ್ಷ ನಜ್ಮುಲ್ ಇಸ್ಲಾಂ ತಕ್ಷಣ ರಾಜೀನಾಮೆ ನೀಡದಿದ್ದರೆ ಎಲ್ಲಾ ರೀತಿಯ ಕ್ರಿಕೆಟ್ ಅನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದರು.
ಪರಿಣಾಮವಾಗಿ, ಜನವರಿ 15 ರಂದು ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯಗಳಿಗಾಗಿ ಆಟಗಾರರು ಮೈದಾನಕ್ಕಿಳಿಯಲಿಲ್ಲ. ಈ ಕಾರಣದಿಂದಾಗಿ ಎರಡೂ ಪಂದ್ಯಗಳನ್ನು ರದ್ದುಗೊಳಿಸಲಾಯಿತು. ಇದರ ನಂತರ ಬಿಸಿಬಿ, ನಜ್ಮುಲ್ ಇಸ್ಲಾಂ ಅವರನ್ನು ಹಣಕಾಸು ಸಮಿತಿಯ ಅಧ್ಯಕ್ಷ ಸ್ಥಾನ ಸೇರಿದಂತೆ ಎಲ್ಲಾ ಜವಾಬ್ದಾರಿಗಳಿಂದ ವಜಾಗೊಳಿಸಿತು. ಆದಾಗ್ಯೂ, CWAB ಅಧ್ಯಕ್ಷ ಮೊಹಮ್ಮದ್ ಮಿಥುನ್ ಪತ್ರಿಕಾಗೋಷ್ಠಿಯಲ್ಲಿ ಲಿಖಿತ ಖಾತರಿಯಿಲ್ಲದೆ ಆಟಗಾರರು ಮೈದಾನಕ್ಕೆ ಇಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
2025-26ರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 34 ಪಂದ್ಯಗಳು ನಡೆಯಲಿವೆ. ಇದುವರೆಗೆ 24 ಪಂದ್ಯಗಳು ಮಾತ್ರ ಪೂರ್ಣಗೊಂಡಿವೆ. ಜನವರಿ 15 ರಂದು ನಿಗದಿಯಾಗಿದ್ದ ಎರಡೂ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ. ಆದ್ದರಿಂದ, ಲೀಗ್ ಯಾವಾಗ ಪುನರಾರಂಭವಾಗುತ್ತದೆ ಎಂದು ಊಹಿಸುವುದು ಪ್ರಸ್ತುತ ಕಷ್ಟ. ಲೀಗ್ ಪುನರಾರಂಭವಾದರೆ, ಈ ಎರಡು ರದ್ದಾದ ಪಂದ್ಯಗಳನ್ನು ಮತ್ತೆ ಆಡಬಹುದು. ಈ ಆವೃತ್ತಿಯ ಫೈನಲ್ ಪಂದ್ಯವನ್ನು ಜನವರಿ 23 ರಂದು ನಿಗದಿಪಡಿಸಲಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ