ಐಪಿಎಲ್ಗೂ ಮುನ್ನ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ ಅರ್ಜುನ್- ಸಾನಿಯಾ; ದಿನಾಂಕ ಬಹಿರಂಗ
Arjun Tendulkar Wedding: ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ 2026 ಮಾರ್ಚ್‌ನಲ್ಲಿ ತಮ್ಮ ದೀರ್ಘಕಾಲದ ಗೆಳತಿ ಸಾನಿಯಾ ಚಾಂದೋಕ್ ಅವರನ್ನು ವಿವಾಹವಾಗಲಿದ್ದಾರೆ. ಇವರ ನಿಶ್ಚಿತಾರ್ಥ ಈಗಾಗಲೇ ಖಾಸಗಿಯಾಗಿ ನಡೆದಿದೆ. ಮುಂಬೈನಲ್ಲಿ ನಡೆಯುವ ಈ ಮದುವೆ ಸಮಾರಂಭವು ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರಿಗೆ ಮಾತ್ರ ಸೀಮಿತವಾಗಿರುತ್ತದೆ. ಸಾನಿಯಾ ಯಶಸ್ವಿ ಉದ್ಯಮಿ ಮತ್ತು ರವಿ ಘಾಯ್ ಅವರ ಮೊಮ್ಮಗಳು.

ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಮಗ ಅರ್ಜುನ್ ತೆಂಡೂಲ್ಕರ್ (Arjun Tendulkar) ಶೀಘ್ರದಲ್ಲೇ ತಮ್ಮ ದೀರ್ಘಕಾಲದ ಸಂಗಾತಿ ಸಾನಿಯಾ ಚಾಂದೋಕ್ (Sania Chandok) ಅವರನ್ನು ವಿವಾಹವಾಗಲಿದ್ದಾರೆ. ವರದಿಗಳ ಪ್ರಕಾರ, ಈ ಜೋಡಿ ಮಾರ್ಚ್ 2026 ರಲ್ಲಿ ವಿವಾಹವಾಗಲಿದ್ದು, ದಿನಾಂಕವನ್ನೂ ಸಹ ಬಹಿರಂಗಪಡಿಸಲಾಗಿದೆ. ವಾಸ್ತವವಾಗಿ ಕಳೆದ ಆಗಸ್ಟ್ನಲ್ಲಿ ಅರ್ಜುನ್ ಹಾಗೂ ಸಾನಿಯಾ ಅವರ ನಿಶ್ಚಿತಾರ್ಥ ಬಹಳ ಖಾಸಗಿಯಾಗಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಇಬ್ಬರ ಕುಟುಂಬ ಸದಸ್ಯರು ಮತ್ತು ಕೆಲವು ಆಪ್ತರು ಮಾತ್ರ ಹಾಜರಿದ್ದರು. ಅದಾದ ಕೆಲವು ದಿನಗಳ ಬಳಿಕ ಸ್ವತಃ ಸಚಿನ್ ತೆಂಡೂಲ್ಕರ್ ಅವರೇ ತಮ್ಮ ಮಗನ ನಿಶ್ಚಿತಾರ್ಥದ ವಿಚಾರವನ್ನು ಸಾರ್ವಜನಿಕಗೊಳಿಸಿದ್ದರು. ಇದೀಗ 2026 ರಲ್ಲಿ ಅರ್ಜುನ್ ಹಾಗೂ ಸಾನಿಯಾ ಹಸೆಮಣೆ ಏರಲಿದ್ದಾರೆ.
ಅರ್ಜುನ್ ಮದುವೆ ದಿನಾಂಕ ಬಹಿರಂಗ
ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ಐಪಿಎಲ್ 2026 ಕ್ಕೂ ಮುಂಚಿತವಾಗಿ ವಿವಾಹದ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅರ್ಜುನ್ ಮತ್ತು ಸಾನಿಯಾ ಚಾಂದೋಕ್ ಅವರ ವಿವಾಹ ದಿನಾಂಕವನ್ನು ಮಾರ್ಚ್ 5, 2026 ಕ್ಕೆ ನಿಗದಿಪಡಿಸಲಾಗಿದೆ. ಮಾರ್ಚ್ 3 ರಂದು ವಿವಾಹಪೂರ್ವ ಸಮಾರಂಭಗಳು ಪ್ರಾರಂಭವಾಗಲಿವೆ. ಸಾನಿಯಾ ಮುಂಬೈನ ಪ್ರಮುಖ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳಾಗಿದ್ದು, ತೆಂಡೂಲ್ಕರ್ ಕುಟುಂಬಕ್ಕೆ ಬಹಳ ಹಿಂದಿನಿಂದಲೂ ಹತ್ತಿರವಾಗಿದ್ದಾರೆ. ವಿವಾಹ ಆಚರಣೆಗಳು ಮುಂಬೈನಲ್ಲಿ ನಡೆಯಲಿದ್ದು, ಕುಟುಂಬ, ಆಪ್ತ ಸ್ನೇಹಿತರು ಮತ್ತು ಕ್ರಿಕೆಟ್ ಜಗತ್ತಿನ ಆಯ್ದ ಕೆಲವರು ಮಾತ್ರ ಭಾಗವಹಿಸುವ ಖಾಸಗಿ ಕಾರ್ಯಕ್ರಮವಾಗಿರಲಿದೆ ಎಂದು ವರದಿಯಾಗಿದೆ.
SMAT 2025: W,W,W.. ಅರ್ಜುನ್ ಮಾರಕ ದಾಳಿಗೆ ತತ್ತರಿಸಿದ ಮಧ್ಯಪ್ರದೇಶ; ಗೋವಾಗೆ 2ನೇ ಜಯ
ಲಕ್ನೋ ಪರ ಆಡಲಿರುವ ಅರ್ಜುನ್
ಇತ್ತೀಚೆಗೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ವರ್ಗಾವಣೆಗೊಂಡಿರುವ ಅರ್ಜುನ್ ತೆಂಡೂಲ್ಕರ್ ವೃತ್ತಿಜೀವನದಂತೆ ವೈಯಕ್ತಿಕ ಜೀವನದಲ್ಲೂ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಹೀಗಾಗಿ 2026 ರ ವರ್ಷವು ಅರ್ಜುನ್‌ಗೆ ಅವರ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಸ್ಮರಣೀಯ ವರ್ಷವಾಗಲಿದೆ. ಪ್ರಸ್ತುತ ಗೋವಾ ತಂಡದ ಪರ ವಿಜಯ್ ಹಜಾರೆ ಟ್ರೋಫಿಯನ್ನು ಆಡುತ್ತಿರುವ ಅರ್ಜುನ್ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದಾರೆಯಾದರೂ, ಬ್ಯಾಟಿಂಗ್ನಲ್ಲಿ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬಂದಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:15 pm, Wed, 7 January 26
