
ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯ ಮಾರನ್ ಮತ್ತು ದಕ್ಷಿಣ ಚಿತ್ರರಂಗದ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ದ್ ರವಿಚಂದರ್ ಕಳೆದೆರಡು ವರ್ಷಳಿಂದ ಪ್ರೀತಿಯಲ್ಲಿ ಬಿದ್ದಿದ್ದು, ಈ ಇಬ್ಬರು ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ ಎಂಬ ಸುದ್ದಿ ಸಧ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಇವರಿಬ್ಬರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೂ ವೈರಲ್ ಆಗಿದೆ. ಈ ಸುದ್ದಿ ಗಾಳಿಯಷ್ಟೇ ವೇಗವಾಗಿ ಎಲ್ಲೆಡೆ ಹಬ್ಬಿದರೂ, ಇದುವರೆಗೆ ಇವರಿಬ್ಬರಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿರಲಿಲ್ಲ. ಹೀಗಾಗಿ ಅಭಿಮಾನಿಗಳು ಕೂಡ ಈ ಸುದ್ದಿ ನಿಜ ಎಂದು ಭಾವಿಸಿದ್ದರು. ಆದರೀಗ ಈ ಸುದ್ದಿಯ ಗಂಭೀರತೆಯನ್ನು ಮನಗಂಡ ಅನಿರುದ್ಧ್, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಈ ಎಲ್ಲಾ ವದಂತಿಗಳನ್ನು ತಳ್ಳಿಹಾಕಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ಸಹ-ಮಾಲಕಿ ಕಾವ್ಯಾ ಮಾರನ್ ಅವರೊಂದಿಗಿನ ತಮ್ಮ ವಿವಾಹದ ವದಂತಿಗಳನ್ನು ಅನಿರುದ್ಧ್ ರವಿಚಂದರ್ ಲಘುವಾಗಿ ತಳ್ಳಿಹಾಕಿದ್ದಾರೆ. ತಮ್ಮ ಅಭಿಮಾನಿಗಳು ಶಾಂತವಾಗಿರಲು ಮನವಿ ಮಾಡಿರುವ ಅನಿರುದ್ಧ್ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ‘ಮದುವೆ? ಹಹಹ… ಶಾಂತವಾಗಿರಿ, ದಯವಿಟ್ಟು ವದಂತಿಗಳನ್ನು ಹರಡುವುದನ್ನು ನಿಲ್ಲಿಸಿ’ ಎಂದು ಬರೆದುಕೊಂಡಿದ್ದಾರೆ. ಈ ತಮಾಷೆಯ ಟ್ವೀಟ್‌ನೊಂದಿಗೆ, ಅವರು ತಮ್ಮ ಮತ್ತು ಕಾವ್ಯಾ ಮಾರನ್ ನಡುವಿನ ಸಂಬಂಧದ ಬಗ್ಗೆ ಹರಿದಾಡುತ್ತಿರುವ ಎಲ್ಲಾ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ. ಆದಾಗ್ಯೂ, ಡೇಟಿಂಗ್ ವದಂತಿಗಳ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಈ ಇಬ್ಬರೂ ಸಧ್ಯಕ್ಕೆ ಮದುವೆಯಾಗುತ್ತಿಲ್ಲವಾದರೂ, ಖಂಡಿತವಾಗಿಯೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ.
Marriage ah? lol .. Chill out guys 😃 pls stop spreading rumours 🙏🏻
— Anirudh Ravichander (@anirudhofficial) June 14, 2025
ಅನಿರುದ್ಧ್ ಮತ್ತು ಕಾವ್ಯ ಕಳೆದ ಒಂದು ವರ್ಷದಿಂದ ಡೇಟಿಂಗ್ನಲ್ಲಿದ್ದು, ಶೀಘ್ರದಲ್ಲೇ ಮದುವೆಯಾಗಲು ಯೋಜಿಸುತ್ತಿದ್ದಾರೆ ಎಂಬ ಪೋಸ್ಟ್ವೊಂದು ಭಾರಿ ವೈರಲ್ ಆಗಿತ್ತು. ಅಲ್ಲದೆ ಇವರಿಬ್ಬರು ಖಾಸಗಿ ಭೋಜನಕೂಟದಲ್ಲಿ ಒಟ್ಟಿಗೆ ಸಮಯ ಕಳೆಯುವುದನ್ನು ನೋಡಿದ್ದೇವೆ ಎಂದು ಕೆಲವರು ಹೇಳಿಕೊಂಡಿದ್ದರು. ಹಾಗೆಯೇ, ಅನಿರುದ್ಧ್ ಅವರ ಸಂಬಂಧಿಯಾಗಿರುವ ಸೂಪರ್‌ಸ್ಟಾರ್ ರಜನಿಕಾಂತ್, ಕಾವ್ಯಾ ಅವರ ತಂದೆ ಮತ್ತು ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಅವರೊಂದಿಗೆ ಈ ಸಂಬಂಧದ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಲಾಗಿತ್ತು.
34 ವರ್ಷದ ಅನಿರುದ್ಧ್ ರವಿಚಂದರ್ ತಮಿಳು ಮತ್ತು ತೆಲುಗು ಚಿತ್ರರಂಗದ ಅತ್ಯಂತ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಅವರು ರಜನಿಕಾಂತ್, ಕಮಲ್ ಹಾಸನ್, ಶಾರುಖ್ ಖಾನ್ ಮತ್ತು ಜೂನಿಯರ್ ಎನ್‌ಟಿಆರ್‌ನಂತಹ ಸ್ಟಾರ್ ನಟರ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅನಿರುದ್ಧ್ ಕಲಾತ್ಮಕ ಕುಟುಂಬದಿಂದ ಬಂದವರಾಗಿದ್ದು, ಅವರ ತಂದೆ ರವಿ ರಾಘವೇಂದ್ರ ಒಬ್ಬ ನಟ, ಮತ್ತು ಅವರ ಚಿಕ್ಕಮ್ಮ ಲತಾ ರಜನಿಕಾಂತ್ ಅವರ ಪತ್ನಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:18 pm, Sun, 15 June 25