Duleep Trophy: ತಂಡದಿಂದ ಹೊರಬಿದ್ದ ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್
Duleep Trophy 2025: ಏಷ್ಯಾಕಪ್‌ಗಾಗಿ ಭಾರತ ತಂಡಕ್ಕೆ ಆಯ್ಕೆಯಾಗಿರುವ ಅರ್ಷದೀಪ್ ಸಿಂಗ್ ಮತ್ತು ಕುಲ್ದೀಪ್ ಯಾದವ್ ಅವರನ್ನು ದುಲೀಪ್ ಟ್ರೋಫಿ ಸೆಮಿಫೈನಲ್‌ನಿಂದ ಹೊರಗಿಡಲಾಗಿದೆ. ಸೆಪ್ಟೆಂಬರ್ 4 ರಿಂದ ಬೆಂಗಳೂರಿನಲ್ಲಿ ಆರಂಭವಾಗುವ ದುಲೀಪ್ ಟ್ರೋಫಿ ಮತ್ತು ಅದೇ ದಿನ ಏಷ್ಯಾಕಪ್‌ಗಾಗಿ ಯುಎಇಗೆ ತಂಡ ಪ್ರಯಾಣಿಸುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅರ್ಷದೀಪ್ ಉತ್ತರ ವಲಯ ಮತ್ತು ಕುಲ್ದೀಪ್ ಕೇಂದ್ರ ವಲಯ ತಂಡಗಳಿಗೆ ಆಡುತ್ತಿದ್ದರು.

ಭಾರತ ಏಷ್ಯಾಕಪ್ (Asia Cup) ತಂಡದಲ್ಲಿ ಸ್ಥಾನ ಪಡೆದಿರುವ ಅರ್ಷದೀಪ್ ಸಿಂಗ್ (Arshdeep Singh) ಹಾಗೂ ಕುಲ್ದೀಪ್ ಯಾದವ್ (Kuldeep Yadav) ಅವರನ್ನು ದುಲೀಪ್ ಟ್ರೋಫಿ ತಂಡಗಳಿಂದ ಕೈಬಿಡಲಾಗಿದೆ. ವಾಸ್ತವವಾಗಿ ದುಲೀಪ್ ಟ್ರೋಫಿಯ (Duleep Trophy) ಸೆಮಿಫೈನಲ್ ಸುತ್ತು ನಾಳೆಯಿಂದ ಅಂದರೆ ಸೆಪ್ಟೆಂಬರ್ 4 ರಿಂದ ಬೆಂಗಳೂರಿನಲ್ಲಿ ಆರಂಭವಾಗುತ್ತಿದೆ. ಇತ್ತ ಟೀಂ ಇಂಡಿಯಾ ಕೂಡ ಏಷ್ಯಾಕಪ್‌ಗಾಗಿ ನಾಳೆಯೇ ಯುಎಇಗೆ ಪ್ರಯಾಣ ಬೆಳೆಸುತ್ತಿದೆ. ಹೀಗಾಗಿ ಕುಲ್ದೀಪ್ ಯಾದವ್ ಹಾಗೂ ಅರ್ಷ್‌ದೀಪ್ ಏಷ್ಯಾಕಪ್ ತಂಡದಲ್ಲಿರುವುದರಿಂದ ಇವರಿಬ್ಬರನ್ನು ತಂಡದಿಂದ ಕೈಬಿಡಲಾಗಿದೆ. ಅರ್ಷ್‌ದೀಪ್ ಸಿಂಗ್ ಉತ್ತರ ವಲಯ ತಂಡದ ಭಾಗವಾಗಿದ್ದರೆ, ಕುಲ್ದೀಪ್ ಯಾದವ್ ಕೇಂದ್ರ ವಲಯದ ಪರ ಆಡುತ್ತಿದ್ದರು.
ತಂಡದಿಂದ ಹೊರಬಿದ್ದ ಕುಲ್ದೀಪ್-ಅರ್ಷದೀಪ್
ಮೇಲೆ ಹೇಳಿದಂತೆ ಕುಲ್ದೀಪ್ ಯಾದವ್ ಮತ್ತು ಅರ್ಷದೀಪ್ ಸಿಂಗ್ ಇಬ್ಬರೂ ಏಷ್ಯಾಕಪ್‌ನಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದಾರೆ. ಹೀಗಾಗಿ ಇವರಿಬ್ಬರು ಸೆಪ್ಟೆಂಬರ್ 4 ರಂದು ತಂಡದೊಂದಿಗೆ ದುಬೈಗೆ ಹೊರಡಬೇಕಾಗಿದೆ. ದುಲೀಪ್ ಟ್ರೋಫಿಯ ಸೆಮಿಫೈನಲ್ ಪಂದ್ಯಗಳು ಸೆಪ್ಟೆಂಬರ್ 4 ರಿಂದಲೇ ನಡೆಯಲಿವೆ. ಇದೇ ಕಾರಣಕ್ಕೆ ಕುಲ್ದೀಪ್ ಯಾದವ್ ಮಧ್ಯ ವಲಯದಿಂದ ಅಥವಾ ಉತ್ತರ ವಲಯದಿಂದ ಅರ್ಷದೀಪ್ ಸಿಂಗ್ ಇಬ್ಬರೂ ಆಡುತ್ತಿಲ್ಲ. ದುಲೀಪ್ ಟ್ರೋಫಿಯ ಮೊದಲ ಸೆಮಿಫೈನಲ್‌ನಲ್ಲಿ, ಉತ್ತರ ವಲಯವು ದಕ್ಷಿಣ ವಲಯದ ವಿರುದ್ಧ ಆಡಲಿದೆ. ಎರಡನೇ ಸೆಮಿಫೈನಲ್‌ನಲ್ಲಿ, ಕೇಂದ್ರ ವಲಯ ತಂಡವು ಪಶ್ಚಿಮ ವಲಯವನ್ನು ಎದುರಿಸಲಿದೆ.
ಕ್ವಾರ್ಟರ್ ಫೈನಲ್‌ನಲ್ಲಿ ಕಣಕ್ಕಿಳಿದಿದ್ದರು
ದುಲೀಪ್ ಟ್ರೋಫಿಯ ಕ್ವಾರ್ಟರ್ ಫೈನಲ್‌ನಲ್ಲಿ ಕುಲ್ದೀಪ್ ಮತ್ತು ಅರ್ಷದೀಪ್ ಇಬ್ಬರೂ ತಮ್ಮ ತಂಡಗಳನ್ನು ಪ್ರತಿನಿಧಿಸಿದ್ದರು. ಪೂರ್ವ ವಲಯ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಅರ್ಷದೀಪ್ ಸಿಂಗ್ 17 ಓವರ್‌ಗಳನ್ನು ಬೌಲ್ ಮಾಡಿ 51 ರನ್‌ಗಳಿಗೆ 1 ವಿಕೆಟ್ ಪಡೆದಿದ್ದರೆ, ಇತ್ತ ಈಶಾನ್ಯ ವಲಯ ವಿರುದ್ಧದ ಪಂದ್ಯದಲ್ಲಿ ಕೇಂದ್ರ ವಲಯದ ಪರವಾಗಿ ಆಡಿದ್ದ ಕುಲ್ದೀಪ್ ಯಾದವ್ 20 ಓವರ್‌ಗಳನ್ನು ಬೌಲ್ ಮಾಡಿ 55 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.
ಟಿ20 ಏಷ್ಯಾಕಪ್‌ನಲ್ಲಿ ಕುಲ್ದೀಪ್ ಮತ್ತು ಅರ್ಷದೀಪ್
ಈಗ ಈ ಇಬ್ಬರೂ ಆಟಗಾರರು ಮತ್ತೊಮ್ಮೆ ಏಷ್ಯಾಕಪ್‌ನಲ್ಲಿ ಭಾರತದ ಪರ ಕಣಕ್ಕಿಳಿಯಲಿದ್ದಾರೆ. ಇದು ಕುಲ್ದೀಪ್ ಯಾದವ್ ಅವರ ಮೊದಲ ಟಿ20 ಏಷ್ಯಾಕಪ್ ಆಗಲಿದೆ. ಅದೇ ಸಮಯದಲ್ಲಿ, ಅರ್ಷದೀಪ್ ಸಿಂಗ್ ಎರಡನೇ ಬಾರಿಗೆ ಟಿ20 ಏಷ್ಯಾಕಪ್‌ನಲ್ಲಿ ಆಡಲಿದ್ದಾರೆ. ಇದಕ್ಕೂ ಮೊದಲು, ಅರ್ಷದೀಪ್ 2022 ರಲ್ಲಿ ಟಿ20 ಏಷ್ಯಾಕಪ್ ಆಡಿದ್ದರು, ಇದರಲ್ಲಿ ಅವರು 5 ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಕಬಳಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
