AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಯಲ್ಲಿ ಎಡವಿದ ನಾಯಕ ರಿಂಕು ಸಿಂಗ್; ಕ್ವಾಲಿಫೈಯರ್‌ ಪಂದ್ಯ ಸೋತ ಮೀರತ್

UP Premier League Qualifier: ಉತ್ತರ ಪ್ರದೇಶ ಪ್ರೀಮಿಯರ್ ಲೀಗ್ 2025ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕಾಶಿ ರುದ್ರಾಸ್ ತಂಡವು ಮೀರತ್ ಮೇವರಿಕ್ಸ್ ತಂಡವನ್ನು 5 ರನ್‌ಗಳಿಂದ ಸೋಲಿಸಿದೆ. ಮೀರತ್ ನಾಯಕ ರಿಂಕು ಸಿಂಗ್ ಅವರ ಅಬ್ಬರದ ಇನ್ನಿಂಗ್ಸ್‌ ನಡುವೆಯೂ ಅವರ ಕೊನೆಯ ನಿಮಿಷದ ತಪ್ಪಿನಿಂದಾಗಿ ತಂಡ ಸೋಲನುಭವಿಸಿತು. ಇತ್ತ ಕಾಶಿ ರುದ್ರಾಸ್ ಫೈನಲ್‌ ತಲುಪಿದೆ.

ಕೊನೆಯಲ್ಲಿ ಎಡವಿದ ನಾಯಕ ರಿಂಕು ಸಿಂಗ್; ಕ್ವಾಲಿಫೈಯರ್‌ ಪಂದ್ಯ ಸೋತ ಮೀರತ್
Rinku Singh
ಪೃಥ್ವಿಶಂಕರ
|

Updated on: Sep 03, 2025 | 8:52 PM

Share

ಉತ್ತರ ಪ್ರದೇಶ ಪ್ರೀಮಿಯರ್ ಲೀಗ್ 2025 ರ (UP Premier League) ಮೊದಲ ಕ್ವಾಲಿಫೈಯರ್‌ ಪಂದ್ಯ ಕಾಶಿ ರುದ್ರಾಸ್ ಮತ್ತು ಮೀರತ್ ಮೇವರಿಕ್ಸ್ (Kashi Rudras vs Meerut Mavericks) ತಂಡಗಳ ನಡುವೆ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯವನ್ನು ಗೆಲ್ಲುವ ತಂಡಕ್ಕೆ ನೇರವಾಗಿ ಫೈನಲ್‌ಗೆ ತಲುಪುವ ಅವಕಾಶವಿದ್ದರಿಂದ ಎರಡೂ ತಂಡಗಳು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಿದವು. ಆದರೆ ಅಂತಿಮವಾಗಿ ಕಾಶಿ ರುದ್ರಾಸ್ ತಂಡ 5 ರನ್‌ಗಳಿಂದ ಪಂದ್ಯವನ್ನು ಗೆದ್ದು ನೇರವಾಗಿ ಫೈನಲ್​ಗೇರಿತು. ಒಂದು ಹಂತದಲ್ಲಿ ಗೆಲುವಿನ ಸನಿಹದಲ್ಲಿದ್ದ ಮೀರತ್ ತಂಡ ನಾಯಕ ರಿಂಕು ಸಿಂಗ್ (Rinku Singh) ಕೊನೆಯಲ್ಲಿ ಮಾಡಿದ ತಪ್ಪಿನಿಂದ ಸೋಲಬೇಕಾಯಿತು. ಆದಾಗ್ಯೂ ಫೈನಲ್​ಗೇರಲು ಮೀರತ್ ಮೇವರಿಕ್ಸ್ ತಂಡಕ್ಕೆ ಮತ್ತೊಂದು ಅವಕಾಶವಿರುವುದು ತಂಡಕ್ಕೆ ಕೊಂಚ ಸಮಾಧಾನಕರ ಸಂಗತಿಯಾಗಿದೆ.

ಕೊನೆಯಲ್ಲಿ ಎಡವಿದ ರಿಂಕು ಸಿಂಗ್

ಈ ಪಂದ್ಯದಲ್ಲಿ ಮೀರತ್ ಮಾವರಿಕ್ಸ್ ತಂಡದ ನಾಯಕ ರಿಂಕು ಸಿಂಗ್ ಅಬ್ಬರದ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಾಶಿ ತಂಡ 167 ರನ್​ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಮೀರತ್ ಮೇವರಿಕ್ಸ್ ಉತ್ತಮ ಆರಂಭ ಸಿಗಲಿಲ್ಲ. ತಂಡವು ಕೇವಲ 3 ರನ್‌ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಆದಾಗ್ಯೂ ಆರಂಭಿಕ ಸ್ವಸ್ತಿಕ್ ಚಿಕಾರ 32 ಎಸೆತಗಳಲ್ಲಿ ಕೇವಲ 25 ರನ್‌ಗಳ ಇನ್ನಿಂಗ್ಸ್ ಆಡಿ ಔಟಾದರು. ರಿತುರಾಜ್ ಶರ್ಮಾ 65 ರನ್‌ಗಳ ಇನ್ನಿಂಗ್ಸ್ ಆಡಿದರಾದರೂ ಅವರಿಗೆ ಇತರ ಬ್ಯಾಟ್ಸ್‌ಮನ್‌ಗಳಿಂದ ಬೆಂಬಲ ಸಿಗಲಿಲ್ಲ. ಹೀಗಾಗಿ ರಿಂಕು ಸಿಂಗ್ ಬ್ಯಾಟಿಂಗ್‌ಗೆ ಬಂದಾಗ ತಂಡವು 13.4 ಓವರ್‌ಗಳಲ್ಲಿ 100 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಫುಲ್ ಟಾಸ್‌ ಎಸೆತದಲ್ಲಿ ಔಟ್

ಇದಾದ ನಂತರ, ರಿಂಕು ಸಿಂಗ್ ಇನ್ನಿಂಗ್ಸ್ ಜವಾಬ್ದಾರಿಯನ್ನು ವಹಿಸಿಕೊಂಡು 23 ಎಸೆತಗಳಲ್ಲಿ 173.91 ಸ್ಟ್ರೈಕ್ ರೇಟ್‌ನಲ್ಲಿ 40 ರನ್ ಗಳಿಸಿದರು . ಅವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ಅವರು ಕ್ರೀಸ್‌ನಲ್ಲಿ ಇರುವವರೆಗೂ, ಮೀರತ್ ಮೇವರಿಕ್ಸ್ ತಂಡವು ಈ ಪಂದ್ಯವನ್ನು ಗೆಲ್ಲುತ್ತದೆ ಎಂದು ತೋರುತ್ತಿತ್ತು . ಆದರೆ ಅವರ ಒಂದು ತಪ್ಪು ತಂಡಕ್ಕೆ ಭಾರಿ ನಷ್ಟವನ್ನುಂಟು ಮಾಡಿತು. ವಾಸ್ತವವಾಗಿ, ಮೀರತ್ ಮೇವರಿಕ್ಸ್‌ಗೆ ಕೊನೆಯ ಓವರ್‌ನಲ್ಲಿ ಗೆಲ್ಲಲು 20 ರನ್‌ಗಳು ಬೇಕಾಗಿದ್ದವು. ರಿಂಕು ಸಿಂಗ್ ಕೂಡ ಮೊದಲ 3 ಎಸೆತಗಳಲ್ಲಿ 10 ರನ್ ಗಳಿಸುವಲ್ಲಿ ಯಶಸ್ವಿಯಾದರು. ಆದರೆ ಮುಂದಿನ ಫುಲ್ ಟಾಸ್‌ ಎಸೆತದಲ್ಲಿ ರಿಂಕು ತಮ್ಮ ವಿಕೆಟ್ ಕಳೆದುಕೊಂಡರು. ಸಾಮಾನ್ಯವಾಗಿ ರಿಂಕು ಅಂತಹ ಚೆಂಡನ್ನು ಮೈದಾನದ ಹೊರಗೆ ಕಳುಹಿಸುವಲ್ಲಿ ನಿಸ್ಸೀಮರು. ಆದರೆ ಈ ಬಾರಿ ಎಡವಿದ ರಿಂಕು ತಮ್ಮ ವಿಕೆಟ್ ಕಳೆದುಕೊಂಡರು. ಅಂತಿಮವಾಗಿ ತಂಡವು 5 ರನ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು.

Asia Cup 2025: ಏಷ್ಯಾಕಪ್ ತಂಡಕ್ಕೆ ಆಯ್ಕೆಯಾದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರಿಂಕು ಸಿಂಗ್

ಕರಣ್ ಶರ್ಮಾ ನಾಯಕತ್ವದ ಇನ್ನಿಂಗ್ಸ್

ಟಾಸ್ ಗೆದ್ದ ಕಾಶಿ ರುದ್ರಾಸ್ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅದರಂತೆ ನಾಯಕ ಕರಣ್ ಶರ್ಮಾ 26 ಎಸೆತಗಳಲ್ಲಿ 43 ರನ್ ಗಳಿಸಿ ತಂಡವನ್ನು 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 166 ರನ್​ ಕಲೆಹಾಕುವಲ್ಲಿ ನೆರವಾದರು. ಇದೀಗ ಕಾಶಿ ರುದ್ರಾಸ್ ತಂಡವು ನೇರವಾಗಿ ಫೈನಲ್ ಪಂದ್ಯವನ್ನು ಆಡಲಿದ್ದು, ಕ್ವಾಲಿಫೈಯರ್ 2 ರ ವಿಜೇತರನ್ನು ಎದುರಿಸಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ