
ಗೆಲುವಿನ ಸಮೀಪ ಬಂದು ಲಾರ್ಡ್ಸ್ ಟೆಸ್ಟ್‌ನಲ್ಲಿ ಸೋತಿದ್ದ ಟೀಂ ಇಂಡಿಯಾ, ಈಗ ಮುಂದಿನ ಟೆಸ್ಟ್ ಪಂದ್ಯದ ಮೇಲೆ ಕಣ್ಣಿಟ್ಟಿದೆ. ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಜುಲೈ 23 ರಿಂದ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಪ್ರಾರಂಭವಾಗಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಗಿಲ್ ಪಡೆ ಸರಣಿಯನ್ನು ಜೀವಂತವಾಗಿರಿಸಲು ಪ್ರಯತ್ನಿಸಲಿದೆ. ಆದರೆ ಈ ಪಂದ್ಯಕ್ಕೆ ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡುವ ಸವಾಲನ್ನು ಎದುರಿಸುತ್ತಿರುವ ಟೀಂ ಇಂಡಿಯಾಕ್ಕೆ ಇದೀಗ ಸ್ಟಾರ್ ಆಟಗಾರನ ಗಾಯ ದೊಡ್ಡ ತಲೆನೋವು ತಂದೊಡ್ಡಿದೆ.ಎಡಗೈ ವೇಗದ ಬೌಲರ್ ಅರ್ಶ್ದೀಪ್ ಸಿಂಗ್ (Arshdeep Singh) ತಮ್ಮ ಎಡಗೈ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮ್ಯಾಂಚೆಸ್ಟರ್ ಟೆಸ್ಟ್ ಗೆಲ್ಲುವ ಸಲುವಾಗಿ ಟೀಂ ಇಂಡಿಯಾ ಈಗಾಗಲೇ ಅಭ್ಯಾಸದಲ್ಲಿ ನಿರತವಾಗಿದೆ. ಕೋಚ್ ಗೌತಮ್ ಗಂಭೀರ್ ಅವರ ಮೇಲ್ವಿಚಾರಣೆಯಲ್ಲಿ ತಂಡವು ನೆಟ್ಸ್‌ನಲ್ಲಿ ಬೆವರು ಹರಿಸುತ್ತಿದೆ. ಲಂಡನ್ ಬಳಿಯ ಬೆಕೆನ್‌ಹ್ಯಾಮ್‌ನಲ್ಲಿ ಟೀಮ್ ಇಂಡಿಯಾ ಅಭ್ಯಾಸ ಮಾಡುತ್ತಿದ್ದು, ಈ ವೇಳೆ ತಂಡದ ವೇಗಿ ಅರ್ಶ್‌ದೀಪ್ ಗಾಯ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ,.
ವರದಿಯ ಪ್ರಕಾರ, ಟೀಂ ಇಂಡಿಯಾ ಅಭ್ಯಾಸದ ಸಮಯದಲ್ಲಿ ಅರ್ಶ್ದೀಪ್ ಸಿಂಗ್ ಅವರ ಎಡಗೈಗೆ ಗಾಯವಾಗಿದೆ. ಅರ್ಷ್‌ದೀಪ್ ಸಿಂಗ್ ನೆಟ್ಸ್‌ನಲ್ಲಿ ಸಾಯಿ ಸುದರ್ಶನ್ ಅವರಿಗೆ ಬೌಲಿಂಗ್ ಮಾಡುತ್ತಿದ್ದಾಗ, ಸುದರ್ಶನ್ ಬಾರಿಸಿದ ಚೆಂಡನ್ನು ತಡೆಯಲು ಪ್ರಯತ್ನಿಸುವಾಗ ಅರ್ಶ್ದೀಪ್ ಅವರ ಎಡಗೈಗೆ ಗಾಯವಾಗಿದೆ. ಅಲ್ಲದೆ ಕೈಯಿಂದ ರಕ್ತ ಕೂಡ ಚಿಮ್ಮಿದೆ. ಕೂಡಲೇ ವೈದ್ಯಕೀಯ ಸಿಬ್ಬಂದಿ ಅರ್ಶ್ದೀಪ್ಗೆ ಚಿಕಿತ್ಸೆ ನೀಡಿದ್ದಾರೆ. ಆದಾಗ್ಯೂ ಅವರು ಬೌಲಿಂಗ್ ಮಾಡುವ ಕೈಗೆ ಗಾಯವಾಗಿರುವುದರಿಂದ ಅವರು ಸರಣಿಯಲ್ಲಿ ಆಡುವ ಬಗ್ಗೆ ಅನುಮಾನ ಮೂಡಿದೆ. ಆದಾಗ್ಯೂ ಅರ್ಶ್ದೀಪ್ ಅವರ ಗಾಯ ಎಷ್ಟು ಗಂಭೀರವಾಗಿದೆ ಎಂಬುದು ಇದುವರೆಗೆ ತಿಳಿದುಬಂದಿಲ್ಲ.
IND vs ENG: ಮ್ಯಾಂಚೆಸ್ಟರ್ ಟೆಸ್ಟ್ ಆಡ್ತಾರಾ ಜಸ್ಪ್ರೀತ್ ಬುಮ್ರಾ? ಹೊರಬಿತ್ತು ಖಚಿತ ಮಾಹಿತಿ
ವಾಸ್ತವವಾಗಿ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಗಳಾಗಬಹುದು ಎಂದು ಹೇಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅರ್ಶ್ದೀಪ್ ಗಾಯಕ್ಕೆ ತುತ್ತಾಗಿದ್ದಾರೆ. ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಈ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅರ್ಶ್ದೀಪ್ ಗಾಯಗೊಂಡಿರುವುದು ತಂಡದಲ್ಲಿ ಆತಂಕ ಮೂಡಿಸಿದೆ. ಅರ್ಶ್ದೀಪ್ ಇನ್ನೂ ಟೆಸ್ಟ್‌ಗೆ ಪಾದಾರ್ಪಣೆ ಮಾಡಿಲ್ಲ. ಆದಾಗ್ಯೂ, ಸರಣಿ ಮುಗಿಯುವ ಮೊದಲು ಕನಿಷ್ಠ ಒಂದು ಪಂದ್ಯದಲ್ಲಾದರೂ ಅವರಿಗೆ ಅವಕಾಶ ಸಿಗುವ ಭರವಸೆ ಇದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ