ಐಸಿಸಿ, 2024ರ ವರ್ಷದ ಪುರುಷರ ಟಿ20 ಕ್ರಿಕೆಟಿಗನ ಹೆಸರನ್ನು ಪ್ರಕಟಿಸಿದೆ. ಈ ಪ್ರಶಸ್ತಿಗಾಗಿ 4 ಆಟಗಾರರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಇದರಲ್ಲಿ ಭಾರತದ ಅರ್ಷದೀಪ್ ಸಿಂಗ್, ಪಾಕಿಸ್ತಾನದ ಬಾಬರ್ ಆಝಂ, ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಮತ್ತು ಜಿಂಬಾಬ್ವೆಯ ಸಿಕಂದರ್ ರಾಝಾ ಸೇರಿದ್ದರು. ಈ ಎಲ್ಲಾ ಸ್ಟಾರ್ ಆಟಗಾರರನ್ನು ಸೋಲಿಸಿ ಅರ್ಷದೀಪ್ ಸಿಂಗ್ ಈ ದೊಡ್ಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಅರ್ಷದೀಪ್ ಸಿಂಗ್ ಅವರು ಈ ಹಿಂದೆ ಟಿ 20 ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು ಮತ್ತು ಭಾರತ ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಈ ಸ್ಮರಣೀಯ ಪ್ರದರ್ಶನಕ್ಕೆ ಅವರು ಐಸಿಸಿ ಪ್ರಶಸ್ತಿಯೊಂದಿಗೆ ಬಹುಮಾನ ಕೂಡ ಪಡೆದಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಯುವ ವೇಗದ ಬೌಲರ್ ಅರ್ಷದೀಪ್ ಸಿಂಗ್ ಟಿ20 ಮಾದರಿಯಲ್ಲಿ ಟೀಂ ಇಂಡಿಯಾದ ಪ್ರಮುಖ ಬೌಲರ್ ಎನಿಸಿಕೊಂಡಿದ್ದಾರೆ. 2024ರಲ್ಲಿಯೂ ಅವರ ಕಡೆಯಿಂದ ಉತ್ತಮ ಆಟ ಕಂಡುಬಂದಿತ್ತು. ಕಳೆದ ವರ್ಷ ಟೀಂ ಇಂಡಿಯಾ ಪರ 18 ಟಿ20 ಪಂದ್ಯಗಳನ್ನಾಡಿದ್ದು ಅರ್ಷದೀಪ್ ಒಟ್ಟು 36 ವಿಕೆಟ್ ಪಡೆದಿದ್ದರು. ಈ ಮೂಲಕ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಆಗಿದ್ದರು.
ಮತ್ತೊಂದೆಡೆ, 17 ವರ್ಷಗಳ ನಂತರ ಭಾರತ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಅರ್ಷದೀಪ್ ಪ್ರಮುಖ ಪಾತ್ರ ವಹಿಸಿದ್ದರು. 2024 ರ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಆಗಿದ್ದರು. ಈ ಟೂರ್ನಿಯಲ್ಲಿ ಒಟ್ಟು 17 ವಿಕೆಟ್‌ಗಳನ್ನು ಕಬಳಿಸಿದ್ದ ಅವರು ಫೈನಲ್ ಪಂದ್ಯದಲ್ಲೂ 4 ಓವರ್‌ಗಳಲ್ಲಿ 20 ರನ್‌ಗಳಿಗೆ 2 ಪ್ರಮುಖ ವಿಕೆಟ್‌ಗಳನ್ನು ಪಡೆದಿದ್ದರು. ಇದರಲ್ಲಿ 19 ನೇ ಓವರ್‌ನಲ್ಲಿ ಕೇವಲ ನಾಲ್ಕು ರನ್‌ಗಳನ್ನು ನೀಡಿ ಎದುರಾಳಿ ಮೇಲೆ ಒತ್ತಡ ಹೇರಿದ್ದರು. ಈ ಓವರ್‌ನಿಂದಾಗಿ ಭಾರತ ತಂಡ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಗಿತ್ತು.
2022ರ ನವೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಅರ್ಷದೀಪ್ ಸಿಂಗ್ ಕೇವಲ 2 ವರ್ಷಗಳಲ್ಲಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನೂ ಮಾಡಿದ್ದಾರೆ. ಟೀಂ ಇಂಡಿಯಾ ಪರ ಟಿ20ಯಲ್ಲಿ ಇದುವರೆಗೆ 97 ವಿಕೆಟ್ ಪಡೆದಿದ್ದಾರೆ. ಅವರಿಗೆ ಹೋಲಿಸಿದರೆ ಭಾರತದ ಯಾವ ಬೌಲರ್‌ಗೂ ಇಷ್ಟು ವಿಕೆಟ್‌ಗಳನ್ನು ಕಬಳಿಸಲು ಸಾಧ್ಯವಾಗಿಲ್ಲ. ಈ ಮೊದಲು ಈ ದಾಖಲೆ ಯುಜ್ವೇಂದ್ರ ಚಹಾಲ್ ಹೆಸರಿನಲ್ಲಿತ್ತು. ಯುಜುವೇಂದ್ರ ಚಹಾಲ್ ಟಿ20ಯಲ್ಲಿ ಟೀಂ ಇಂಡಿಯಾ ಪರ 96 ವಿಕೆಟ್ ಪಡೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:23 pm, Sat, 25 January 25