Ashes 2023
Ashes 2023: ಲೀಡ್ಸ್ನ ಹೆಡಿಂಗ್ಲಿ ಮೈದಾನದಲ್ಲಿ ನಡೆದ ಆ್ಯಶಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ಇಂಗ್ಲೆಂಡ್ (England) 3 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಕೊನೆಯ ಇನಿಂಗ್ಸ್ನಲ್ಲಿ 251 ರನ್ಗಳ ಟಾರ್ಗೆಟ್ ಪಡೆದ ಇಂಗ್ಲೆಂಡ್ ತಂಡವು 7 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟುವ ಮೂಲಕ ರೋಚಕ ಗೆಲುವು ತನ್ನದಾಗಿಸಿಕೊಂಡಿತು. ಇದರೊಂದಿಗೆ 5 ಪಂದ್ಯಗಳ ಸರಣಿಯು 2-1 ಅಂತರಕ್ಕೆ ಬಂದು ನಿಂತಿದೆ.
ಮೊದಲೆರಡು ಟೆಸ್ಟ್ಗಳಲ್ಲಿ ಜಯ ಸಾಧಿಸಿದ್ದ ಆಸ್ಟ್ರೇಲಿಯಾಗೆ ಮೂರನೇ ಪಂದ್ಯದಲ್ಲಿ ಸೋಲುಣಿಸುವಲ್ಲಿ ಕೊನೆಗೂ ಇಂಗ್ಲೆಂಡ್ ಯಶಸ್ವಿಯಾಗಿದೆ. ವಿಶೇಷ ಎಂದರೆ ಈ ಪಂದ್ಯದಲ್ಲಿ ಹಲವು ದಾಖಲೆಗಳು ಕೂಡ ನಿರ್ಮಾಣವಾಗಿದೆ. ಆ ದಾಖಲೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
- – ಕ್ಯಾಚ್ ದಾಖಲೆ: ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಫೀಲ್ಡರ್ ಸ್ಟೀವ್ ಸ್ಮಿತ್ 5 ಕ್ಯಾಚ್ಗಳನ್ನು ಹಿಡಿದಿದ್ದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಒಂದೇ ಇನಿಂಗ್ಸ್ನಲ್ಲಿ ಅತೀ ಹೆಚ್ಚು ಬಾರಿ 4 ಕ್ಕಿಂತ ಹೆಚ್ಚು ಕ್ಯಾಚ್ ಹಿಡಿದ ದಾಖಲೆಯೊಂದು ಸ್ಮಿತ್ ಪಾಲಾಯಿತು. ಸ್ಟೀವ್ ಸ್ಮಿತ್ ಇದುವರೆಗೆ 4 ಬಾರಿ ಒಂದೇ ಇನಿಂಗ್ಸ್ನಲ್ಲಿ 4 ಕ್ಕಿಂತ ಹೆಚ್ಚು ಕ್ಯಾಚ್ಗಳನ್ನು ಹಿಡಿದಿದ್ದಾರೆ.
- – ದಾಖಲೆಯ ಸ್ಟ್ರೈಕ್ ರೇಟ್: ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ಆಟಗಾರ ಮಾರ್ಕ್ ವುಡ್ 8 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 1 ಫೋರ್ನೊಂದಿಗೆ 24 ರನ್ ಬಾರಿಸಿದ್ದರು. ಇದರೊಂದಿಗೆ ಇಂಗ್ಲೆಂಡ್ ಪರ ಟೆಸ್ಟ್ನಲ್ಲಿ 300 ರ ಸ್ಟ್ರೈಕ್ ರೇಟ್ನಲ್ಲಿ ರನ್ ಕಲೆಹಾಕಿದ ವಿಶೇಷ ದಾಖಲೆಯೊಂದು ಮಾರ್ಕ್ ವುಡ್ ಪಾಲಾಯಿತು.
- – ಆಸ್ಟ್ರೇಲಿಯಾ ದಾಖಲೆ: ಈ ಪಂದ್ಯದ ಮೂಲಕ ಸ್ಟೀವ್ ಸ್ಮಿತ್ 100 ಟೆಸ್ಟ್ಗಳನ್ನಾಡಿದ ವಿಶೇಷ ದಾಖಲೆ ನಿರ್ಮಿಸಿದ್ದರು. ಈ ವಿಶೇಷ ದಾಖಲೆಯೊಂದಿಗೆ ಆಸ್ಟ್ರೇಲಿಯಾ ಪರ ನೂರು ಟೆಸ್ಟ್ ಪಂದ್ಯಗಳನ್ನಾಡಿದ 16ನೇ ಆಟಗಾರ ಎನಿಸಿಕೊಂಡರು. ಇದರೊಂದಿಗೆ 100+ ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸಿದ ಅತಿ ಹೆಚ್ಚು ಕ್ರಿಕೆಟಿಗರನ್ನು ಹೊಂದಿರುವ ದೇಶವಾಗಿ ಆಸ್ಟ್ರೇಲಿಯಾ ಹೊರಹೊಮ್ಮಿದೆ. ಇದಕ್ಕೂ ಮುನ್ನ 15 ಆಟಗಾರರನ್ನು ಹೊಂದಿದ್ದ ಇಂಗ್ಲೆಂಡ್ ಅಗ್ರಸ್ಥಾನದಲ್ಲಿತ್ತು.
- – ಬೂಮ್ ಬೂಮ್ ಬ್ರೂಕ್: ಈ ಪಂದ್ಯದ 2ನೇ ಇನಿಂಗ್ಸ್ನಲ್ಲಿ 75 ರನ್ ಬಾರಿಸುವ ಮೂಲಕ ಇಂಗ್ಲೆಂಡ್ನ ಸ್ಪೋಟಕ ಬ್ಯಾಟರ್ ಹ್ಯಾರಿ ಬ್ರೂಕ್ ಟೆಸ್ಟ್ ಕ್ರಿಕೆಟ್ನಲ್ಲಿ 1000 ರನ್ ಪೂರೈಸಿದ್ದಾರೆ. ಇದರೊಂದಿಗೆ ಅತೀ ಕಡಿಮೆ ಎಸೆತಗಳನ್ನು ಎದುರಿಸಿ ಸಾವಿರ ರನ್ ಪೂರೈಸಿದ ದಾಖಲೆ ಬ್ರೂಕ್ ಪಾಲಾಗಿದೆ. ಇಂಗ್ಲೆಂಡ್ನ ಈ ಹೊಡಿಬಡಿ ದಾಂಡಿಗ 1058 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.
- – ಕ್ಯಾಪ್ಟನ್ ದಾಖಲೆ: ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ 250+ ರನ್ಗಳನ್ನು ಚೇಸ್ ಮಾಡಿ ಗೆದ್ದ ತಂಡದ ನಾಯಕ ಎಂಬ ಹೆಗ್ಗಳಿಕೆಗೆ ಬೆನ್ ಸ್ಟೋಕ್ಸ್ ಪಾತ್ರರಾಗಿದ್ದಾರೆ. ಈ ಹಿಂದೆ ಈ ದಾಖಲೆ ಧೋನಿ ಹೆಸರಿನಲ್ಲಿತ್ತು. ಎಂಎಸ್ಡಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 4 ಬಾರಿ ಜಯ ಸಾಧಿಸಿತ್ತು. ಇದೀಗ ಬೆನ್ ಸ್ಟೋಕ್ಸ್ ನೇತೃತ್ವದಲ್ಲಿ ಇಂಗ್ಲೆಂಡ್ ತಂಡವು 5ನೇ ಬಾರಿ 250+ ರನ್ ಚೇಸ್ ಮಾಡಿ ಗೆಲುವು ದಾಖಲಿಸಿದೆ. ಈ ಮೂಲಕ ಸ್ಟೋಕ್ಸ್ ನಾಯಕತ್ವದಲ್ಲೂ ವಿಶೇಷ ದಾಖಲೆ ನಿರ್ಮಿಸಿದ್ದಾರೆ.