Ashes 2023: ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ (Ashes 2023) 2ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡವು ಕೇವಲ 279 ರನ್ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಪ್ರಥಮ ಇನಿಂಗ್ಸ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿತ್ತು. ಆರಂಭಿಕ ಆಟಗಾರ ಡೇವಿಡ್ ವಾರ್ನರ್ 66 ರನ್ ಬಾರಿಸಿ ಉತ್ತಮ ಆರಂಭ ಒದಗಿಸಿದರೆ, ಆ ಬಳಿಕ ಬಂದ ಮಾರ್ನಸ್ ಲಾಬುಶೇನ್ 47 ರನ್ಗಳ ಕಾಣಿಕೆ ನೀಡಿದ್ದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟೆಸ್ಟ್ ಸ್ಪೆಷಲಿಸ್ಟ್ ಸ್ಟೀವ್ ಸ್ಮಿತ್ ಮತ್ತೊಮ್ಮೆ ಕಲಾತ್ಮಕ ಹೊಡೆತಗಳ ಮೂಲಕ ರಂಜಿಸಿದರು. ಅಲ್ಲದೆ 184 ಎಸೆತಗಳಲ್ಲಿ 15 ಫೋರ್ನೊಂದಿಗೆ 110 ರನ್ ಬಾರಿಸಿ ಜೋಶ್ ಟಂಗ್ಗೆ ವಿಕೆಟ್ ಒಪ್ಪಿಸಿದರು.
ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮೂಲಕ ಅಬ್ಬರಿಸಿದ ಟ್ರಾವಿಸ್ ಹೆಡ್ ಕೇವಲ 73 ಎಸೆತಗಳಲ್ಲಿ 14 ಫೋರ್ನೊಂದಿಗೆ 77 ರನ್ ಸಿಡಿಸಿದರು. ಪರಿಣಾಮ ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡ 416 ರನ್ಗಳಿಸಿತು.
416 ರನ್ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಝಾಕ್ ಕ್ರಾಲಿ ಹಾಗೂ ಬೆನ್ ಡಕೆಟ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 91 ಪೇರಿಸಿದ ಈ ಜೋಡಿಯನ್ನು ಮುರಿಯುವಲ್ಲಿ ನಾಥನ್ ಲಿಯಾನ್ ಯಶಸ್ವಿಯಾದರು.
ಝಾಕ್ ಕ್ರಾಲಿ (48) ನಿರ್ಗಮನದ ಬಳಿಕ ಕ್ರೀಸ್ಗೆ ಆಗಮಿದಿದ ಒಲಿ ಪೋಪ್ 42 ರನ್ಗಳಿಸಿ ಕ್ಯಾಮರೋನ್ ಗ್ರೀನ್ಗೆ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ 98 ರನ್ಗಳಿಸಿದ್ದ ಬೆನ್ ಡಕೆಟ್ 2 ರನ್ಗಳಿಂದ ಶತಕ ವಂಚಿತರಾಗಿ ಪೆವಿಲಿಯನ್ ಕಡೆ ಮರಳಿದರು.
ಈ ಹಂತದಲ್ಲಿ ಮೇಲುಗೈ ಸಾಧಿಸಿದ ಆಸ್ಟ್ರೇಲಿಯಾ ಬೌಲರ್ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಪರಿಣಾಮ ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್ (50) ಅವರನ್ನು ಹೊರತುಪಡಿಸಿದರೆ, ಮತ್ಯಾವ ಬ್ಯಾಟರ್ನಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅಲ್ಲದೆ 325 ರನ್ಗಳಿಗೆ ಆಲೌಟ್ ಆಗಿ ಇಂಗ್ಲೆಂಡ್ ತಂಡವು 91 ರನ್ಗಳ ಹಿನ್ನಡೆ ಅನುಭವಿಸಿತು.
ಇತ್ತ 91 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಒಪನರ್ ಉಸ್ಮಾನ್ ಖ್ವಾಜಾ 77 ರನ್ ಬಾರಿಸಿ ಮಿಂಚಿದ್ದರು. ಆದರೆ ಉಳಿದ ಬ್ಯಾಟರ್ಗಳು ಸ್ಟುವರ್ಟ್ ಬ್ರಾಡ್ ಅವರ ಮಾರಕ ದಾಳಿ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದರು. ಪರಿಣಾಮ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್ ಅನ್ನು ಕೇವಲ 279 ರನ್ಗಳಿಗೆ ಅಂತ್ಯಗೊಳಿಸಿತು. ಇಂಗ್ಲೆಂಡ್ ಪರ ಸ್ಟುವರ್ಟ್ ಬ್ರಾಡ್ 4 ವಿಕೆಟ್ ಪಡೆದು ಮಿಂಚಿದರೆ, ಜೋಶ್ ಟಂಗ್ ಹಾಗೂ ಒಲ್ಲಿ ರಾಬಿನ್ಸನ್ ತಲಾ 2 ವಿಕೆಟ್ ಕಬಳಿಸಿದರು.
ಇದೀಗ 4ನೇ ದಿನದಾಟದ ಮೂರನೇ ಸೆಷನ್ ಚಾಲ್ತಿಯಲ್ಲಿದ್ದು, ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 371 ರನ್ಗಳ ಅವಶ್ಯಕತೆಯಿದೆ. ಅಂದರೆ ಮೂರನೇ ಸೆಷನ್ ಹಾಗೂ ಕೊನೆಯ ದಿನದಾಟದಲ್ಲಿ 371 ರನ್ಗಳನ್ನು ಕಲೆಹಾಕಿದರೆ ಇಂಗ್ಲೆಂಡ್ ತಂಡ ಈ ಪಂದ್ಯವನ್ನು ಗೆಲ್ಲಬಹುದು. ಹೀಗಾಗಿ ಅಂತಿಮ ದಿನದಾಟದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದೇ ಕುತೂಹಲ.
ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ , ಬೆನ್ ಡಕೆಟ್ , ಒಲಿ ಪೋಪ್ , ಜೋ ರೂಟ್ , ಹ್ಯಾರಿ ಬ್ರೂಕ್ , ಬೆನ್ ಸ್ಟೋಕ್ಸ್ (ನಾಯಕ) , ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್) , ಸ್ಟುವರ್ಟ್ ಬ್ರಾಡ್ , ಒಲ್ಲಿ ರಾಬಿನ್ಸನ್ , ಜೋಶ್ ಟಂಗ್ , ಜೇಮ್ಸ್ ಅ್ಯಂಡರ್ಸನ್
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಉಸ್ಮಾನ್ ಖ್ವಾಜಾ, ಮಾರ್ನಸ್ ಲ್ಯಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್ , ಕ್ಯಾಮೆರೋನ್ ಗ್ರೀನ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಮಿಚೆಲ್ ಸ್ಟಾರ್ಕ್ , ಪ್ಯಾಟ್ ಕಮಿನ್ಸ್ (ನಾಯಕ) , ನಾಥನ್ ಲಿಯಾನ್ , ಜೋಶ್ ಹ್ಯಾಝಲ್ವುಡ್.