Ashes 2023: ಲೀಡ್ಸ್ನ ಹೆಡಿಂಗ್ಲಿ ಮೈದಾನದಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯವು ರೋಚಕಘಟ್ಟದತ್ತ ಸಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆನ್ ಸ್ಟೋಕ್ಸ್ (Ben Stokes) ಆಸ್ಟ್ರೇಲಿಯಾ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ಅದರಂತೆ ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಮಿಚೆಲ್ ಮಾರ್ಷ್ (118) ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು.
ಇತ್ತ ಮಾರ್ಕ್ ವುಡ್ ಅವರ ಕರಾರುವಾಕ್ ದಾಳಿ ಮುಂದೆ ಆಸ್ಟ್ರೇಲಿಯಾದ ಇತರೆ ಬ್ಯಾಟರ್ಗಳಿಗೆ ಕ್ರೀಸ್ ಕಚ್ಚಿ ನಿಲ್ಲಲು ಸಾಧ್ಯವಾಗಿರಲಿಲ್ಲ. ಪರಿಣಾಮ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 263 ರನ್ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಮಾರ್ಕ್ ವುಡ್ 5 ವಿಕೆಟ್ ಕಬಳಿಸಿ ಮಿಂಚಿದ್ದರು.
ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡುವಲ್ಲಿ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಯಶಸ್ವಿಯಾದರು. ಇದಾಗ್ಯೂ ಬೆನ್ ಸ್ಟೋಕ್ಸ್ 80 ರನ್ ಬಾರಿಸಿ ಆಂಗ್ಲ ಪಡೆಗೆ ಆಸರೆಯಾಗಿದ್ದರು. ಆದರೆ 6 ವಿಕೆಟ್ ಕಬಳಿಸಿ ಮಿಂಚಿದ ಪ್ಯಾಟ್ ಕಮಿನ್ಸ್ ಇಂಗ್ಲೆಂಡ್ ತಂಡವನ್ನು 237 ರನ್ಗಳಿಗೆ ಆಲೌಟ್ ಮಾಡಿದರು.
26 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ 77 ರನ್ ಬಾರಿಸಿದ್ದರು. ಇದಾಗ್ಯೂ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ದ್ವಿತೀಯ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 224 ರನ್ಗಳಿಗೆ ಆಲೌಟ್ ಆಯಿತು.
ಮೊದಲ ಇನಿಂಗ್ಸ್ನ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವು 251 ರನ್ಗಳ ಟಾರ್ಗೆಟ್ ಪಡೆಯಿತು. ಈ ಸುಲಭ ಗುರಿಯನ್ನು ಬೆನ್ನತ್ತುವ ವಿಶ್ವಾಸದಲ್ಲಿ ಇನಿಂಗ್ಸ್ ಆರಂಭಿಸಿದ್ದ ಆಂಗ್ಲರಿಗೆ ಮಿಚೆಲ್ ಸ್ಟಾರ್ಕ್ ಶಾಕ್ ನೀಡಿದ್ದಾರೆ.
ಬೆನ್ ಡಕೆಟ್ (23) ಹಾಗೂ ಮೊಯೀನ್ ಅಲಿ (5) ವಿಕೆಟ್ ಕಬಳಿಸುವ ಮೂಲಕ ಸ್ಟಾರ್ಕ್ ಬ್ಯಾಟ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟಿದ್ದಾರೆ. ಇನ್ನು ಜೋ ರೂಟ್ (21) ಗೆ ಕಮಿನ್ಸ್ ಪೆವಿಲಿಯನ್ ಹಾದಿ ತೋರಿಸಿದ್ದಾರೆ. ಇದರ ಬೆನ್ನಲ್ಲೇ ಝಾಕ್ ಕ್ರಾಲಿ (44) ಮಿಚೆಲ್ ಮಾರ್ಷ್ಗೆ ವಿಕೆಟ್ ಒಪ್ಪಿಸಿದ್ದಾರೆ.
ಇದೀಗ ಭೋಜನಾ ವಿರಾಮದ ವೇಳೆಗೆ ಇಂಗ್ಲೆಂಡ್ ತಂಡವು 4 ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿದೆ. ಕ್ರೀಸ್ನಲ್ಲಿ ಬೆನ್ ಸ್ಟೋಕ್ಸ್ (7) ಹಾಗೂ ಹ್ಯಾರಿ ಬ್ರೂಕ್ (40) ಬ್ಯಾಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Mark Wood: ಅತೀ ವೇಗದ ಬೌಲಿಂಗ್…ದಾಖಲೆ ಬರೆದ ಮಾರ್ಕ್ ವುಡ್
ಇಂಗ್ಲೆಂಡ್ಗೆ ಗೆಲ್ಲಲು ಇನ್ನೂ 98 ರನ್ಗಳ ಅವಶ್ಯಕತೆಯಿದ್ದರೆ, ಆಸ್ಟ್ರೇಲಿಯಾಗೆ 6 ವಿಕೆಟ್ಗಳ ಅಗತ್ಯತೆಯಿದೆ. ಹೀಗಾಗಿ ಭೋಜನ ವಿರಾಮದ ಬಳಿಕ ಉಭಯ ತಂಡಗಳಿಂದ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.