AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ತಂದೆಯನ್ನು ಕ್ಷಮಿಸಿ’; ನಿವೃತ್ತಿಯ ಮರುದಿನವೇ ರವಿಚಂದ್ರನ್ ಅಶ್ವಿನ್ ಹೀಗೆ ಹೇಳಿದ್ದು ಯಾಕೆ?

Ravi Ashwin Retires: ರವಿಚಂದ್ರನ್ ಅಶ್ವಿನ್ ಅವರ ಅನಿರೀಕ್ಷಿತ ಅಂತರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಆಘಾತ ಹುಟ್ಟುಹಾಕಿದೆ. ಅವರ ತಂದೆ ಮಾಧ್ಯಮಗಳಿಗೆ ನೀಡಿದ ಹೇಳಿಕೆಯ ಪ್ರಕಾರ, ಅಶ್ವಿನ್ ಅವರನ್ನು ತಂಡದಲ್ಲಿ ಅವಮಾನಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅಶ್ವಿನ್ ತಮ್ಮ ಎಕ್ಸ್ ಖಾತೆಯಲ್ಲಿ ತಮ್ಮ ತಂದೆಯ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ.

‘ನನ್ನ ತಂದೆಯನ್ನು ಕ್ಷಮಿಸಿ’; ನಿವೃತ್ತಿಯ ಮರುದಿನವೇ ರವಿಚಂದ್ರನ್ ಅಶ್ವಿನ್ ಹೀಗೆ ಹೇಳಿದ್ದು ಯಾಕೆ?
ಆರ್​ ಅಶ್ವಿನ್
ಪೃಥ್ವಿಶಂಕರ
|

Updated on: Dec 20, 2024 | 7:45 PM

Share

ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾದೊಂದಿಗೆ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸರಣಿಯ ಮಧ್ಯದಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಉಭಯ ತಂಡಗಳ ನಡುವೆ ನಡೆದಿದ್ದ ಗಾಬಾ ಟೆಸ್ಟ್ ಡ್ರಾದಲ್ಲಿ ಅಂತ್ಯಗೊಂಡ ಬಳಿಕ ಮಾಧ್ಯಮಗಳ ಮುಂದೆ ಈ ವಿಚಾರ ಹೇಳಿಕೊಂಡಿದ್ದ ಅಶ್ವಿನ್ ತಮ್ಮ ಅಂತ ವೃತ್ತಿಜೀವನಕ್ಕೆ ಅಂತ್ಯ ಹಾಡಿದ್ದರು. ಟೀಂ ಇಂಡಿಯಾ ಪರ ಸಾಕಷ್ಟು ವರ್ಷ ಕ್ರಿಕೆಟ್ ಆಡಿದ್ದ ಅಶ್ವಿನ್​ಗೆ ತಂಡದ ಸದಸ್ಯರಿಂದ ಹಿಡದು ಮಾಜಿ ಕ್ರಿಕೆಟಿಗರು, ವಿದೇಶಿ ಕ್ರಿಕೆಟಿಗರು ಸೇರಿದಂತೆ ಹಲವರು ಭಾವನಾತ್ಮಕ ವಿದಾಯ ಹೇಳಿದ್ದರು. ಇತ್ತ ಭಾರತದಲ್ಲೂ ಅಶ್ವಿನ್ ವಿದಾಯಕ್ಕೆ ಮಿಶ್ರ ಪ್ರತಿಕ್ರಿಯೆ ಹೊರಬಿದ್ದಿತ್ತು. ಭಾರವಾದ ಹೃದಯದಲ್ಲೇ ಟೀಂ ಇಂಡಿಯಾವನ್ನು ತೊರೆದು ಭಾರತದಕ್ಕೆ ಬಂದಿಳಿದಿದ್ದ ಅಶ್ವಿನ್, ಭಾರತಕ್ಕೆ ಬಂದೊಡನೆಯೇ ತಮ್ಮ ಎಕ್ಸ್​ ಖಾತೆಯಲ್ಲಿ ಎಲ್ಲರ ಕ್ಷಮೆ ಕೇಳಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ.

ವಾಸ್ತವವಾಗಿ ಅಶ್ವಿನ್​ ವಿದಾಯದ ಬಗ್ಗೆ ಭಾರತ ಕ್ರಿಕೆಟ್​ನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಟೀಂ ಇಂಡಿಯಾದ ಮಾಜಿ ಆಟಗಾರರು ಅಶ್ವಿನ್​ ಇನ್ನು ಸ್ವಲ್ಪ ದಿನ ಕ್ರಿಕೆಟ್ ಆಡಬಹುದಿತ್ತು ಎಂದಿದ್ದರೆ, ಇನ್ನು ಕೆಲವರು ಅಶ್ವಿನ್​ಗೆ ಸಲ್ಲಬೇಕಿದ್ದ ನಿಜವಾದ ವಿದಾಯ ಸಿಕ್ಕಿಲ್ಲ ಎಂದಿದ್ದರು. ಇದರ ನಡುವೆ ಮಾಧ್ಯಮದ ಮುಂದೆ ಮಾತನಾಡಿದ್ದ ಅಶ್ವಿನ್ ಅವರ ತಂದೆ ನನ್ನ ಮಗನನ್ನು ತಂಡದಲ್ಲಿ ನಿರಂತರವಾಗಿ ಅವಮಾನಿಸಲಾಗುತ್ತಿತ್ತು. ಹೀಗಾಗಿ ಇದನ್ನೆಲ್ಲಾ ಇನ್ನೆಷ್ಟು ದಿನ ಸಹಿಸಿಕೊಳ್ಳಲು ಸಾಧ್ಯ ಹೇಳಿ? ಹಾಗಾಗಿಯೇ ಅಶ್ವಿನ್ ನಿವೃತ್ತಿ ನಿರ್ಧಾರ ಮಾಡಿರಬಹುದು ಎಂದು ಹೇಳಿಕೆ ನೀಡಿದ್ದರು.

ಅವರನ್ನು ಕ್ಷಮಿಸಿ

ಅಶ್ವಿನ್ ಅವರ ತಂದೆಯ ಈ ರೀತಿಯ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ತಂದೆಯವರ ಹೇಳಿಕೆ ಈ ರೀತಿಯ ಚರ್ಚೆ ಹುಟ್ಟು ಹಾಕಿದ್ದನ್ನು ಗಮನಿಸಿದ ಅಶ್ವಿನ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದು, ‘ನನ್ನ ತಂದೆಗೆ ಮಾಧ್ಯಮದ ಮುಂದೆ ಹೇಗೆ ಮಾತನಾಡಬೇಕು ಎಂಬುದು ಗೊತ್ತಿಲ್ಲ. ಹೀಗಾಗಿ ಮಾಧ್ಯಮದವರು ನಮ್ಮ ತಂದೆಯ ಹೇಳಿಕೆಗೆ ಇಷ್ಟು ಮನ್ನಣೆ ನೀಡುತ್ತೀರಿ ಎಂದು ನಾನು ಭಾವಿಸಿರಲಿಲ್ಲ. ನೀವೆಲ್ಲರೂ ಅವರನ್ನು ಕ್ಷಮಿಸಿ ಮತ್ತು ಅವರನ್ನು ಬಿಟ್ಟುಬಿಡಿ ಎಂದು ವಿನಂತಿಸಿದ್ದಾರೆ.

ಅಶ್ವಿನ್ ತಂದೆ ಹೇಳಿದ್ದೇನು?

ಸಿಎನ್‌ಎನ್ ನ್ಯೂಸ್ 18 ಜೊತೆ ಮಾತನಾಡಿದ್ದ ಅಶ್ವಿನ್ ಅವರ ತಂದೆ, ಕೊನೆಯ ಕ್ಷಣದಲ್ಲಿ ಅಶ್ವಿನ್ ನಿವೃತ್ತಿಯ ಬಗ್ಗೆ ನನಗೆ ತಿಳಿಯಿತು. ಮಗನ ಮನಸ್ಸಿನಲ್ಲಿ ಏನಾಗಿದೆಯೋ ಗೊತ್ತಿಲ್ಲ. ನಿವೃತ್ತಿಯ ನಿರ್ಧಾರ ಮಗನದ್ದು ಆದರೆ ಅವರು ನಿವೃತ್ತಿಯಾಗಲು ಹಲವು ಕಾರಣಗಳಿರಬಹುದು. ಅವಮಾನದಿಂದ ಮಗ ದಿಢೀರ್ ನಿವೃತ್ತಿಯಾಗಿರುವ ಸಾಧ್ಯತೆ ಇದೆ ಎಂದು ಅಶ್ವಿನ್ ತಂದೆ ಹೇಳಿಕೆ ನೀಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ