ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯದ ಮೂಲಕ ರವಿಚಂದ್ರನ್ ಅಶ್ವಿನ್ (R Ashwin) ಹಾಗೂ ಜಾನಿ ಬೈರ್‌ಸ್ಟೋವ್ ವಿಶೇಷ ಮೈಲುಗಲ್ಲು ದಾಟಿದ್ದಾರೆ. ಅದು ಕೂಡ ಟೆಸ್ಟ್ ಕ್ರಿಕೆಟ್ನಲ್ಲಿ ಜೊತೆಯಾಗಿ 100ನೇ ಪಂದ್ಯವನ್ನಾಡುವ ಮೂಲಕ ಎಂಬುದು ವಿಶೇಷ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್ 100ನೇ ಪಂದ್ಯವಾಡುತ್ತಿದ್ದರೆ, ಇಂಗ್ಲೆಂಡ್ ಪರ ಜಾನಿ ಬೈರ್‌ಸ್ಟೋವ್ 100ನೇ ಮ್ಯಾಚ್ ಆಡುತ್ತಿದ್ದಾರೆ. ಈ ಮೂಲಕ ಒಂದೇ ಟೆಸ್ಟ್ನಲ್ಲಿ ಜೊತೆಯಾಗಿ 100ನೇ ಪಂದ್ಯವಾಡಿದ ಅಪರೂಪದ ದಾಖಲೆ ಬರೆದಿದ್ದಾರೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೀಗೆ ಜೊತೆಯಾಗಿ ಒಂದೇ ಪಂದ್ಯದ ಮೂಲಕ ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಆಟಗಾರರು 100ನೇ ಪಂದ್ಯವಾಡುತ್ತಿರುವುದು ಇದು 4ನೇ ಬಾರಿ. ಇದಕ್ಕೂ ಮುನ್ನ 7 ಆಟಗಾರರು ಈ ಸಾಧನೆ ಮಾಡಿದ್ದರು.
2000 ರಲ್ಲಿ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರಾದ ಮೈಕೆಲ್ ಅಥರ್ಟನ್ ಮತ್ತು ಅಲೆಕ್ ಸ್ಟೀವರ್ಟ್ ಜೊತೆಯಾಗಿ 100ನೇ ಟೆಸ್ಟ್ ಪಂದ್ಯವಾಡಿದ ವಿಶೇಷ ದಾಖಲೆ ಬರೆದಿದ್ದರು.
2006 ರಲ್ಲಿ ಸೌತ್ ಆಫ್ರಿಕಾದ ಜಾಕ್ವೆಸ್ ಕಾಲಿಸ್, ಶಾನ್ ಪೊಲಾಕ್ ಮತ್ತು ನ್ಯೂಝಿಲೆಂಡ್ನ ಸ್ಟೀಫನ್ ಫ್ಲೆಮಿಂಗ್ ಜೊತೆಯಾಗಿ 100ನೇ ಟೆಸ್ಟ್ ಪಂದ್ಯವಾಡಿದ ಸಾಧನೆ ಮಾಡಿದ್ದರು.
2013 ರಲ್ಲಿ ಪರ್ತ್‌ನಲ್ಲಿ ನಡೆದ ಇಂಗ್ಲೆಂಡ್-ಆಸ್ಟ್ರೇಲಿಯಾ ಆ್ಯಶಸ್ ಸರಣಿಯಲ್ಲಿ ಅಲಸ್ಟೈರ್ ಕುಕ್ ಮತ್ತು ಮೈಕೆಲ್ ಕ್ಲಾರ್ಕ್ ಜೊತೆಯಾಗಿ 100 ಟೆಸ್ಟ್ ಪಂದ್ಯಗಳ ಮೈಲುಗಲ್ಲನ್ನು ದಾಟಿದ್ದರು.
2024 ರಲ್ಲಿ ಜಾನಿ ಬೈರ್‌ಸ್ಟೋವ್ ಹಾಗೂ ರವಿಚಂದ್ರನ್ ಅಶ್ವಿನ್ ಜೊತೆಯಾಗಿ 100ನೇ ಟೆಸ್ಟ್ ಪಂದ್ಯವನ್ನಾಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಜೊತೆಯಾಗಿ 100 ಟೆಸ್ಟ್ ಪಂದ್ಯಗಳನ್ನು ಪೂರೈಸಿದ ವಿಶೇಷ ದಾಖಲೆ ಬರೆದಿದ್ದಾರೆ.
ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ ತಂಡವು 2 ವಿಕೆಟ್ ಕಳೆದುಕೊಂಡು 100 ರನ್ ಕಲೆಹಾಕಿದೆ.
ಇಂಗ್ಲೆಂಡ್ ವಿರುದ್ಧದ ಈ ಪಂದ್ಯದ ಮೂಲಕ ಕರ್ನಾಟಕದ ಆಟಗಾರ ದೇವದತ್ ಪಡಿಕ್ಕಲ್ ಕಣಕ್ಕಿಳಿದಿದ್ದಾರೆ. ಅಂದರೆ ಅಶ್ವಿನ್ ಅವರ 100ನೇ ಟೆಸ್ಟ್ ಪಂದ್ಯದ ವೇಳೆ ಪಡಿಕ್ಕಲ್ ಟೆಸ್ಟ್ ಕ್ರಿಕೆಟ್ನಲ್ಲಿ ಕೆರಿಯರ್ ಆರಂಭಿಸುತ್ತಿರುವುದು ವಿಶೇಷ.
ಭಾರತ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ದೇವದತ್ ಪಡಿಕ್ಕಲ್, ರವೀಂದ್ರ ಜಡೇಜಾ, ಸರ್ಫರಾಝ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.
ಇದನ್ನೂ ಓದಿ: IPL 2024: 10 ತಂಡಗಳ ನಾಯಕರುಗಳ ಪಟ್ಟಿ ಇಲ್ಲಿದೆ
ಇಂಗ್ಲೆಂಡ್ ಪ್ಲೇಯಿಂಗ್ 11: ಬೆನ್ ಡಕೆಟ್, ಝಾಕ್ ಕ್ರಾಲಿ, ಒಲೀ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಟಾಮ್ ಹಾರ್ಟ್ಲಿ, ಶೊಯೆಬ್ ಬಶೀರ್, ಜೇಮ್ಸ್ ಅ್ಯಂಡರ್ಸನ್, ಮಾರ್ಕ್ ವುಡ್.