Asia Cup 2022: ಏಷ್ಯಾಕಪ್ನ ಸೂಪರ್-4 ಹಂತದ ಐದನೇ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಅಫ್ಘಾನಿಸ್ತಾನ್ ವಿರುದ್ಧ ರೋಚಕ ಜಯ ಸಾಧಿಸಿತು. ಕೊನೆಯ ಓವರ್ ರೋಚಕತೆಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ 2 ಸಿಕ್ಸ್ ಸಿಡಿಸಿ ನಸೀಮ್ ಶಾ ಪಾಕ್ ತಂಡಕ್ಕೆ 1 ವಿಕೆಟ್ಗಳ ಜಯ ತಂದುಕೊಟ್ಟಿದ್ದರು. ಈ ಗೆಲುವಿನ ವಿಜಯೋತ್ಸವದ ಭರದಲ್ಲಿ ಇದೀಗ ಇಬ್ಬರು ಜೀವ ಕಳೆದುಕೊಂಡಿದ್ದಾರೆ. ಅತ್ತ ಶಾರ್ಜಾದಲ್ಲಿ ಪಾಕ್ ತಂಡ ಗೆಲ್ಲುತ್ತಿದ್ದಂತೆ, ಇತ್ತ ಪಾಕಿಸ್ತಾನದ ಪೇಶಾವರದಲ್ಲಿ ಜನರು ರೈಫಲ್ಸ್ನೊಂದಿಗೆ ವಿಜಯೋತ್ಸವಕ್ಕಿಳಿದಿದ್ದರು.
ಈ ವೇಳೆ ಅನೇಕರು ಗಾಳಿಯಲ್ಲಿ ಗುಂಡು ಹಾರಿಸುತ್ತಾ ಸಂಭ್ರಮಿಸಿದ್ದರು. ಈ ಅತಿರೇಕದ ಸಂಭ್ರಮದ ನಡುವೆ ಹಲವು ಜನರಿಗೆ ಗುಂಡು ತಾಗಿದ್ದು, ಅವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಪೇಶಾವರದ ಮಾತಾನಿ ಅಡೆಜೈ ಪ್ರದೇಶದ ಸುದೇಸ್ ಗುಂಡಿನ ದಾಳಿಗೆ ಬಲಿಯಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದಲ್ಲದೆ ಖಯ್ಯಾಮ್ ಎಂಬ ಇನ್ನೊಬ್ಬ ವ್ಯಕ್ತಿ ಕೂಡ ನಗರದ ಮತ್ತೊಂದು ಪ್ರದೇಶದಲ್ಲಿ ಗುಂಡಿನ ಸಂಭ್ರಮಕ್ಕೆ ಬಲಿಯಾಗಿದ್ದಾರೆ. ಹಾಗೆಯೇ ಕೆಲ ಮಹಿಳೆಯರಿಗೂ ಗಂಭೀರ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
ಜಿಯೋ ಟಿವಿ ವರದಿ ಪ್ರಕಾರ, ಈ ಪ್ರಕರಣಗಳ ಬಗ್ಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ಗಾಳಿಯಲ್ಲಿ ಗುಂಡು ಹಾರಿಸಿದ ಅಪರಾಧಕ್ಕಾಗಿ 41 ಜನರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ನಗರದಾದ್ಯಂತ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಬಳಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮೃತರ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಮತ್ತೊಂದೆಡೆ ಅಫ್ಘಾನಿಸ್ತಾನ್ ಹಾಗೂ ಪಾಕಿಸ್ತಾನ್ ಅಭಿಮಾನಿಗಳು ಶಾರ್ಜಾ ಸ್ಟೇಡಿಯಂನಲ್ಲಿ ಹೊಡೆದಾಡಿಕೊಂಡ ಘಟನೆ ಕೂಡ ನಡೆದಿದೆ. ತಮ್ಮ ತಂಡ ಗೆಲ್ಲುತ್ತಿದ್ದಂತೆ ಅಫ್ಘಾನಿಸ್ತಾನ್ ಅಭಿಮಾನಿಗಳನ್ನು ಪಾಕ್ ಫ್ಯಾನ್ಸ್ ಹೀಯಾಳಿಸಿದ್ದರು. ಇದರಿಂದ ರೊಚ್ಚಿಗೆದ್ದ ಅಫ್ಘಾನಿಸ್ತಾನ್ ಅಭಿಮಾನಿಗಳು ಸ್ಟೇಡಿಯಂನಲ್ಲೇ ಪಾಕಿಸ್ತಾನ್ ಫ್ಯಾನ್ಸ್ಗಳ ಮೇಲೆ ಹಲ್ಲೆ ಮಾಡಿದ್ದಾರೆ. ಇದರ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.