Asia Cup 2022: ಭಾರತ-ಶ್ರೀಲಂಕಾ ಪಂದ್ಯದ ವೇಳೆ ಸುಸಜ್ಜಿತ ಆಸ್ಪತ್ರೆಗಾಗಿ ಕನ್ನಡಿಗನ ಹೋರಾಟ
Asia Cup 2022: ತಿಂಗಳುಗಳ ಹಿಂದೆಯಷ್ಟೇ ಚಿಕಿತ್ಸೆಗೆಂದು ಉಡುಪಿ ಆಸ್ಪತ್ರೆಗೆ ಅಂಬ್ಯುಲೆನ್ಸ್‌ನಲ್ಲಿ ತೆರಳುತ್ತಿದ್ದ ಹೊನ್ನಾವರ ಮೂಲದ ಒಂದೇ ಕುಟುಂಬದ ನಾಲ್ವರು ಅಪಘಾತದಲ್ಲಿ ಸಾವನ್ನಪ್ಪಿದ್ದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಹೋರಾಟ ಮುಂದುವರೆದಿದೆ. ಆದರೆ ಈ ಬಾರಿ ಈ ಹೋರಾಟದ ಕೂಗು ಕೇಳಿಬಂದಿದ್ದು ದೂರದ ದುಬೈನಿಂದ. ಅದು ಕೂಡ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಿಂದ ಎಂಬುದು ವಿಶೇಷ. ಏಷ್ಯಾಕಪ್ನಲ್ಲಿನ ಸೂಪರ್-4 ಹಂತದ ಪಂದ್ಯದಲ್ಲಿ ಭಾರತ-ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿತ್ತು. ಎಲ್ಲರೂ ಟೀಮ್ ಇಂಡಿಯಾವನ್ನು ಹುರಿದುಂಬಿಸುತ್ತಿದ್ದರೆ, ಇತ್ತ ಹೊನ್ನಾವರದ ಅಬ್ದುಲ್ ಎನ್ನುವವರು ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪ್ರತೆ ಬೇಕೆಂದು ಬರಹವನ್ನು ಹಿಡಿದುಕೊಂಡು ನಿಂತು ಎಲ್ಲರ ಗಮನ ಸೆಳೆದಿದ್ದಾರೆ.
ಹೊನ್ನಾವರದ ಚಂದಾವರ ಮೂಲದವರಾಗಿರುವ ಅಬ್ದುಲ್ ಕೆಲ ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ವೇಳೆ ಭಾರತ-ಶ್ರೀಲಂಕಾ ನಡುವಣ ಪಂದ್ಯವನ್ನು ವೀಕ್ಷಿಸಲು ತೆರಳಿದ್ದಾರೆ. ಅಲ್ಲದೆ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸುತ್ತಾ ಉತ್ತರ ಕನ್ನಡಕ್ಕೆ ಒಂದು ಸುಸಜ್ಜಿತ ಆಸ್ಪತ್ರೆ ಬೇಕೆಂಬ ಬರಹ ಪ್ರದರ್ಶಿಸಿ ಊರಿನ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇಷ್ಟು ದಿನ ರಾಜ್ಯದ ಜನರ ಗಮನ ಮಾತ್ರ ಸೆಳೆಯುತ್ತಿದ್ದ ಉತ್ತರ ಕನ್ನಡ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಯ ಹೋರಾಟ ಇದೀಗ ಅಂತಾರಾಷ್ಟ್ರೀಯ ಮಟ್ಟದತ್ತ ಸಾಗುತ್ತಿದೆ. ಅಬ್ದುಲ್ ಅವರ ಈ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗಿದ್ದು, ಎಲ್ಲರೂ ಈ ರೀತಿಯಲ್ಲಿ ಸಂದರ್ಭಗಳನ್ನು ಬಳಸಿ ನಾಡಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಬೇಕೆಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.
ಆಸ್ಪತ್ರೆ ಇಲ್ಲದೆ ಅಲೆದಾಟ, ಅದುವೇ ಹೋರಾಟ:
ಉತ್ತರ ಕನ್ನಡ ಜಿಲ್ಲೆಯಲ್ಲೇ ಯಾವುದೇ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಯಿಲ್ಲ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ, ಮಂಗಳೂರನ್ನು ಅವಲಂಭಿಸುವವರೇ ಹೆಚ್ಚು. ಹೀಗಾಗಿಯೇ ಸಾಮಾಜಿಕ ಹೋರಾಟಗಾರ ಆರ್.ಜಿ. ನಾಯ್ಕ ನೇತೃತ್ವದಲ್ಲಿ ವರ್ಷಗಳ ಹಿಂದೆ ನಡೆದ ಪಕ್ಷಾತೀತ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಹೊನ್ನಪ್ಪ ನಾಯಕ, ಬಿಜೆಪಿ ಮುಖಂಡರಾದ ಜಿ.ಐ ಹೆಗಡೆ, ಎಂ.ಎಂ. ಹೆಗಡೆ ಅನೇಕರು ಭಾಗವಹಿಸಿದ್ದರು. ಅಲ್ಲದೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುಮಟಾದಲ್ಲಿ ಸ್ಥಾಪಿಸುವ ಒಮ್ಮತದ ನಿರ್ಣಯವನ್ನು ಸಹ ತೆಗೆದುಕೊಳ್ಳಲಾಗಿತ್ತು. ಅದರಂತೆ ಜಿಲ್ಲೆಯ ಕೇಂದ್ರ ಸ್ಥಳವಾದ ಕುಮಟಾದಲ್ಲಿ ಸುಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕೆಂದು ಶಾಸಕ ಶಾಸಕ ದಿನಕರ ಶೆಟ್ಟಿ ಅವರ ನೇತೃತ್ವದಲ್ಲಿ ಸರಕಾರದ ಮೇಲೆ ಒತ್ತಡ ಹೇರಲಾಗಿತ್ತು.
ಅಷ್ಟೇ ಅಲ್ಲದೆ ಈ ಬೇಡಿಕೆ ಈಡೇರಿಸುವಂತೆ ಹಲವು ರೀತಿಯಲ್ಲಿ ಹೋರಾಟಗಳು ನಡೆದಿದ್ದವು. ಇದರ ಬಗ್ಗೆ ಮಾಹಿತಿ ಪಡೆದಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಜಿಲ್ಲೆಗೆ ಭೇಟಿ ನೀಡಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಪರಿಶೀಲಿಸಿ ಬೇಡಿಕೆ ಈಡೇರಿಸುವ ಭರವಸೆಯನ್ನೂ ಸಹ ನೀಡಿದ್ದರು. ಆದರೆ ಇದಾಗಿ ತಿಂಗಳುಗಳು ಕಳೆದರೂ ಆಸ್ಪತ್ರೆ ನಿರ್ಮಾಣದ ಬಗ್ಗೆ ಸರ್ಕಾರದ ಕಡೆಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
ಇನ್ನೊಂದೆಡೆ ತಿಂಗಳುಗಳ ಹಿಂದೆಯಷ್ಟೇ ಚಿಕಿತ್ಸೆಗೆಂದು ಉಡುಪಿ ಆಸ್ಪತ್ರೆಗೆ ಅಂಬ್ಯುಲೆನ್ಸ್‌ನಲ್ಲಿ ತೆರಳುತ್ತಿದ್ದ ಹೊನ್ನಾವರ ಮೂಲದ ಒಂದೇ ಕುಟುಂಬದ ನಾಲ್ವರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಗೆ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆನ್ನುವ ಕೂಗುಗಳು ಮತ್ತೆ ಕೇಳಿಬಂದಿದ್ದವು. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಈ ಹೋರಾಟ ಮುಂದುವರೆದಿತ್ತು.
ಇದೀಗ ಈ ಹೋರಾಟವನ್ನು ಬೆಂಬಲಿಸಿ ಭಾರತ-ಶ್ರೀಲಂಕಾ ನಡುವಣ ಪಂದ್ಯದ ವೇಳೆWe Need Emergency Hospital In Uttara Kannada ಎನ್ನುವ ಬರಹ ಪ್ರದರ್ಶಿಸಿ ಅಬ್ದುಲ್ ಮತ್ತೊಮ್ಮೆ ಸರ್ಕಾರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
Published On - 11:24 am, Thu, 8 September 22