IND vs AFG: ಭಾರತ-ಅಫ್ಘಾನ್ ನಡುವೆ ಔಪಚಾರಿಕ ಪಂದ್ಯ: ರೋಹಿತ್ ಪಡೆಯಲ್ಲಿ 3 ಬದಲಾವಣೆ?
Asia Cup 2022, India vs Afghanistan: ಏಷ್ಯಾಕಪ್ 2022 ರಲ್ಲಿ ಇಂದು ಭಾರತ ಹಾಗೂ ಅಫ್ಘಾನಿಸ್ತಾನ ನಡುವೆ ಔಪಚಾರಿಕ ಪಂದ್ಯ ನಡೆಯಲಿದೆ. ರೋಹಿತ್ ಪಡೆ ಇದರಲ್ಲಾದರು ಗೆದ್ದು ಮಾನ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಿದೆ.
ಹದಿನೈದನೆ ಆವೃತ್ತಿಯ ಏಷ್ಯಾಕಪ್ (Asia Cup 2022) ಟೂರ್ನಿಯ ಲೀಗ್ ಹಂತದಲ್ಲಿ ಆಡಿದ ಎರಡೂ ಪಂದ್ಯವನ್ನು ಗೆದ್ದು ಭಾರತ ಸೂಪರ್ 4 ಹಂತಕ್ಕೆ ಪ್ರವೇಶ ಪಡೆದಿತ್ತು. ಆದರೆ, ಇಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ (Pakistan Sri Lanka) ವಿರುದ್ಧ ಸೋಲುವ ಮೂಲಕ ಭಾರತ ಟೂರ್ನಿಯಿಂದ ಹೊರಬಿದ್ದಿದೆ. ಬುಧವಾರ ನಡೆದ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ನಡುವಣ ಪಂದ್ಯದಲ್ಲಿ ಪಾಕ್ ಗೆಲ್ಲುವ ಮೂಲಕ ಟೀಮ್ ಇಂಡಿಯಾ (Team India) ಹಾಗೂ ಅಫ್ಘಾನ್ ಅಧಿಕೃವಾಗಿ ಏಷ್ಯಾಕಪ್ನಿಂದ ಔಟಾಗಿದೆ. ಶ್ರೀಲಂಕಾ ಹಾಗೂ ಪಾಕಿಸ್ತಾನ ಫೈನಲ್ನಲ್ಲಿ ಕಾದಾಟ ನಡೆಸಲಿದೆ.
ಇದರ ನಡುವೆ ಇಂದು ಭಾರತ ಹಾಗೂ ಅಫ್ಘಾನಿಸ್ತಾನ ನಡುವೆ ಔಪಚಾರಿಕ ಪಂದ್ಯ ನಡೆಯಲಿದೆ. ರೋಹಿತ್ ಪಡೆ ಇದರಲ್ಲಾದರು ಗೆದ್ದು ಮಾನ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಿದೆ. ಟೂರ್ನಿಯುದ್ದಕ್ಕೂ ಎದುರಾಳಿಗರಿಗೆ ಕಠಿಣ ಸವಾಲು ನೀಡಿರುದ ನಬಿ ಪಡೆ ಭಾರತ ವಿರುದ್ಧ ಹೇಗೆ ಆಡುತ್ತೆ ಎಂಬುದು ಕುತೂಹಲ ಕೆರಳಿಸಿದೆ. ಹೀಗಾಗಿ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
ಇಂದಿನ ಪಂದ್ಯ ಉಭಯ ತಂಡಗಳಿಗೆ ಯಾವುದೇ ಪ್ರಯೋಜನ ನೀಡುವುದಿಲ್ಲ. ಆದರೂ ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ತಂಡದಲ್ಲಿ ಬದಲಾವಣೆ ಮಾಡಿ ಕೆಲವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಟೀಮ್ ಇಂಡಿಯಾ ಪರ ಸತತ ಕಳಪೆ ಫಾರ್ಮ್ನಿಂದ ತತ್ತರಿಸಿರುವ ಕೆಎಲ್ ರಾಹುಲ್ ಹೊರಗುಳಿಯಬಹುದು. ಇವರ ಬದಲು ದಿನೇಶ್ ಕಾರ್ತಿಕ್ ಸ್ಥಾನ ಪಡೆಯುವ ಸಂಭವವಿದೆ. ಯುಜ್ವೇಂದ್ರ ಚಹಲ್ ಕೈಬಿಟ್ಟು ಅಕ್ಷರ್ ಪಟೇಲ್ ಪ್ಲೇಯಿಂಗ್ XI ನಲ್ಲಿ ಕಾಣಿಸಿಕೊಳ್ಳಬಹುದು. ಟೂರ್ನಿಯುದ್ದಕ್ಕೂ ದುಬಾರಿ ಎನಿಸಿರುವ ಅರ್ಶ್ದೀಪ್ ಸಿಂಗ್ ಬದಲು ದೀಪಕ್ ಚಹರ್ ಆಡಿದರೆ ಅಚ್ಚರಿ ಪಡಬೇಕಿಲ್ಲ.
ಇತ್ತ ಅಫ್ಘಾನಿಸ್ತಾನ ತಂಡ ಆರಂಭಿಕರನ್ನು ಮತ್ತು ಬೌಲರ್ಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಮುಜೀಬ್ ಉರ್ ರೆಹ್ಮಾನ್ ಹಾಗೂ ರಶೀದ್ ಖಾನ್ ಬೌಲಿಂಗ್ ವಿಭಾಗದಲ್ಲಿ ದೊಡ್ಡ ಆಸ್ತಿ. ಬ್ಯಾಟಿಂಗ್ನಲ್ಲೂ ರಶೀದ್ ಅಬ್ಬರಿಸಬಲ್ಲರು. ಹಜರತುಲ್ಲಾ ಝಜೈ ಹಾಗೂ ರಹಮಾನುಲ್ಲಾ ಗುರ್ಬಾಜ್ ಬೊಂಬಾಟ್ ಫಾರ್ಮ್ನಲ್ಲಿದ್ದು ಸ್ಫೋಟಕ ಆರಂಭ ಒದಗಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಇಬ್ರಾಹಿಂ ಝದ್ರಾನ್, ನಜೀಬುಲ್ಲಾ ಝದ್ರಾನ್, ಕರೀಮ್ ಜನತ್, ಮೊಹಮ್ಮದ್ ನಬಿ ಅವರಿದ್ದು ಬಲಿಷ್ಠವಾಗಿದೆ. ಹೀಗಾಗಿ ಭಾರತಕ್ಕೆ ಕಠಿಣ ಪೈಪೋಟಿ ನೀಡುವುದು ಖಚಿತ.
ಪಿಚ್ ರಿಪೋರ್ಟ್:
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಪಿಚ್ ಸಮಯೋಜಿತವಾಗಿದೆ. ಹೊಸ ಚೆಂಡಿನಲ್ಲಿ ವೇಗಿಗಳು ಲಾಭ ಪಡೆದುಕೊಳ್ಳಬಹುದಾಗಿದೆ. ಆದರೆ, ಈ ಪಿಚ್‌ನಲ್ಲಿ ವಿಕೆಟ್‌ಗಳನ್ನು ಉಳಿಸಿಕೊಳ್ಳುವುದು ಬಹುಮುಖ್ಯ ಸಂಗತಿಯಾಗಿದೆ. ಪಂದ್ಯ ಸಾಗುತ್ತಿದ್ದಂತೆ ಬ್ಯಾಟಿಂಗ್ ಸ್ವಲ್ಪ ಸುಲಭವಾಗುತ್ತದೆ. ನಿಧಾನಗತಿಯ ಬೌಲರ್‌ಗಳು ಕೂಡ ಹೆಚ್ಚಿನ ಯಶಸ್ಸು ಸಾಧಿಸಿದ ಇತಿಹಾಸವಿದೆ. ಅಂತೆಯೆ ಸ್ಪಿನ್ನರ್‌ಗಳ ದಾಳಿಯ ಮುಂದೆ ಬ್ಯಾಟರ್‌ಗಳು ಪರದಾಡುವುದು ಖಚಿತ.
ಸಂಭಾವ್ಯ ಪ್ಲೇಯಿಂಗ್ XI:
ಭಾರತ: ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್‌ಕೀಪರ್), ದೀಪಕ್ ಹೂಡ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ಆರ್. ಅಶ್ವಿನ್.
ಅಫ್ಘಾನಿಸ್ತಾನ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ನಜೀಬುಲ್ಲಾ ಝದ್ರಾನ್, ಕರೀಮ್ ಜನತ್, ಮೊಹಮ್ಮದ್ ನಬಿ (ನಾಯಕ), ರಶೀದ್ ಖಾನ್, ಅಜ್ಮತುಲ್ಲಾ ಒಮರ್ಝೈ, ನವೀನ್–ಉಲ್–ಹಕ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ.