Asia Cup 2022: ಬಾಂಗ್ಲಾ ತಂಡವನ್ನು ಬಗ್ಗು ಬಡಿದು ಸೂಪರ್-4 ಗೆ ಎಂಟ್ರಿ ಕೊಟ್ಟ ಅಫ್ಘಾನಿಸ್ತಾನ್

Afghanistan vs Bangladesh: ಸದ್ಯ ಮೊದಲ ಸುತ್ತಿನ ಪಂದ್ಯಗಳು ನಡೆಯುತ್ತಿದ್ದು, ಈ ಸುತ್ತಿನ ಎರಡು ಗ್ರೂಪ್​ಗಳಿಂದ ಮೊದಲೆರಡು ಸ್ಥಾನ ಪಡೆಯುವ ನಾಲ್ಕು ತಂಡಗಳು ಸೂಪರ್-4 ಹಂತದಲ್ಲಿ ಆಡಲಿದೆ.

Asia Cup 2022: ಬಾಂಗ್ಲಾ ತಂಡವನ್ನು ಬಗ್ಗು ಬಡಿದು ಸೂಪರ್-4 ಗೆ ಎಂಟ್ರಿ ಕೊಟ್ಟ ಅಫ್ಘಾನಿಸ್ತಾನ್
AFG vs BAN
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 31, 2022 | 10:25 AM

Asia Cup 2022: ಏಷ್ಯಾಕಪ್​ನ 3ನೇ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಬಗ್ಗು ಬಡಿಯುವ ಮೂಲಕ ಅಫ್ಘಾನಿಸ್ತಾನ್ ತಂಡ ಸೂಪರ್-4 ಹಂತಕ್ಕೇರಿದೆ. ಬುಧವಾರ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ತಂಡದ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಪವರ್​ಪ್ಲೇನಲ್ಲೇ ಮೊದಲ ಮೂರು ವಿಕೆಟ್​ಗಳನ್ನು ಉರುಳಿಸುವ ಮೂಲಕ ಅಫ್ಘಾನಿಸ್ತಾನ್ ತಂಡಕ್ಕೆ ಮುಜೀಬ್ ಉರ್ ರಹಮಾನ್ ಆರಂಭಿಕ ಯಶಸ್ಸು ತಂದುಕೊಟ್ಟರು. ಕೇವಲ 23 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾ ತಂಡಕ್ಕೆ ಆ ಬಳಿಕ ರಶೀದ್ ಖಾನ್ ಸಹ ಶಾಕ್ ನೀಡಿದರು.

7ನೇ ಓವರ್​ನಲ್ಲಿ ಮುಷ್ಫಿಕುರ್​ ರಹೀಮ್​ರನ್ನು ಎಲ್​ಬಿ ಬಲೆಗೆ ಬೀಳಿಸಿದ ರಶೀದ್ ಖಾನ್ ಆ ಬಳಿಕ ಆಸೀಫ್ ಹುಸೇನ್​ಗೂ ಪೆವಿಲಿಯನ್ ಹಾದಿ ತೋರಿಸಿದರು. ಈ ಮೂಲಕ ಅಫ್ಘಾನಿಸ್ತಾನ್ ಸ್ಪಿನ್ನರ್​ಗಳು ಕೇವಲ 53 ರನ್​ ನೀಡಿ 5 ಪ್ರಮುಖ ವಿಕೆಟ್​ಗಳನ್ನು ಕಬಳಿಸಿದ್ದರು. ಈ ಹಂತದಲ್ಲಿ ಜೊತೆಗೂಡಿದ ಮೊಹಮ್ಮದುಲ್ಲಾ ಹಾಗೂ ಮೊಸದೆಕ್ ಹುಸೇನ್ ತಂಡಕ್ಕೆ ಆಸರೆಯಾದರು. 36 ರನ್​ಗಳ ಜೊತೆಯಾಟವಾಡಿದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕೊನೆಗೂ ರಶೀದ್ ಖಾನ್ ಯಶಸ್ವಿಯಾದರು.

ಪಂದ್ಯದ 16ನೇ ಓವರ್​ನಲ್ಲಿ ದಾಳಿಗಿಳಿದ ರಶೀದ್ ಖಾನ್ ಮೊಹಮ್ಮದುಲ್ಲಾ (25) ವಿಕೆಟ್ ಪಡೆಯುವ ಮೂಲಕ ತಂಡಕ್ಕೆ 6ನೇ ಯಶಸ್ಸು ತಂದುಕೊಟ್ಟರು. ಇದಾಗ್ಯೂ ಅಂತಿಮ ಓವರ್​ಗಳ ವೇಳೆ 31 ಎಸೆತಗಳಲ್ಲಿ 4 ಫೋರ್ ಹಾಗೂ 1 ಸಿಕ್ಸ್​ನೊಂದಿಗೆ 48 ರನ್​ ಬಾರಿಸುವ ಮೂಲಕ ಮೊಸದೆಕ್ ಹುಸೇನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ನಿಗದಿತ 20 ಓವರ್​ಗಳಲ್ಲಿ ಬಾಂಗ್ಲಾದೇಶ್ ತಂಡವು 7 ವಿಕೆಟ್ ಕಳೆದುಕೊಂಡು 127 ರನ್ ಕಲೆಹಾಕಿತು.

ಇದನ್ನೂ ಓದಿ
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಸಾಧಾರಣ ಗುರಿ ಪಡೆದ ಅಫ್ಘಾನಿಸ್ತಾನ್ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಗುರ್ಬಾಜ್ 5ನೇ ಓವರ್​ನಲ್ಲಿ ಸ್ಟಂಪ್ ಔಟ್ ಆಗುವ ಮೂಲಕ ಹೊರನಡೆದರು. ಅಷ್ಟೇ ಅಲ್ಲದೆ ಮೊದಲ ಹತ್ತು ಓವರ್​ಗಳಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಬಾಂಗ್ಲಾ ಬೌಲರ್​ಗಳು ನೀಡಿದ್ದು ಕೇವಲ 45 ರನ್​ಗಳು ಮಾತ್ರ.

ಅಷ್ಟೇ ಅಲ್ಲದೆ 10ನೇ ಓವರ್​ನಲ್ಲಿ ಮೊಸದೆಕ್ ಹುಸೇನ್ ಎಸೆತದಲ್ಲಿ ಝಝೈ (23) ಕೂಡ ವಿಕೆಟ್ ಒಪ್ಪಿಸಿದ್ದರು. ಇನ್ನು ನಾಯಕ ಮೊಹಮ್ಮದ್ ನಬಿ 8 ರನ್​ಗಳಿಸಿ ಸೈಫುದ್ದೀನ್​ ಎಸೆತಕ್ಕೆ ಎಲ್​ಬಿಡಬ್ಲ್ಯೂ ಆದರು. ಈ ವೇಳೆ 13 ಓವರ್​ಗಳಲ್ಲಿ ಅಫ್ಘಾನಿಸ್ತಾನ್ ತಂಡ ಕಲೆಹಾಕಿದ್ದು ಕೇವಲ 62 ರನ್ ಮಾತ್ರ.

ಆದರೆ ಕೊನೆಯ 7 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ನಜೀಬುಲ್ಲಾ ಝರ್ದಾನ್. ಕ್ರೀಸ್​ಗೆ ಆಗಸುತ್ತಿದ್ದಂತೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಝರ್ದಾನ್ ಬಾಂಗ್ಲಾ ಬೌಲರ್​ಗಳ ಬೆಂಡೆತ್ತಿದ್ದರು. ಸಿಕ್ಸ್​-ಫೋರ್​ಗಳನ್ನು ಸಿಡಿಸುವ ಮೂಲಕ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಅಫ್ಘಾನ್ ತಂಡವನ್ನು ಮೇಲೆತ್ತಿದರು.

ಇತ್ತ ಝರ್ದಾನ್ ಅಬ್ಬರಕ್ಕೆ ಬಾಂಗ್ಲಾ ಬೌಲರ್​ಗಳು ಲಯ ತಪ್ಪಿದರು. ಇದರ ಸಂಪೂರ್ಣ ಲಾಭ ಪಡೆದ ಎಡಗೈ ದಾಂಡಿಗ ಝರ್ದಾನ್ 6 ಸಿಕ್ಸ್​ ಹಾಗೂ 1 ಫೋರ್​ನೊಂದಿಗೆ ಕೇವಲ 17 ಎಸೆತಗಳಲ್ಲಿ ಅಜೇಯ 43 ರನ್​ ಚಚ್ಚಿದರು. ಪರಿಣಾಮ 18.3 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಅಫ್ಘಾನಿಸ್ತಾನ್ ತಂಡವು 131 ರನ್​ಗಳಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ್ ತಂಡವು ಗ್ರೂಪ್-ಬಿ ನಿಂದ ಸೂಪರ್- 4 ಹಂತಕ್ಕೇರಿದೆ.

ಇನ್ನು ಇಂದಿನ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ದ ಟೀಮ್ ಇಂಡಿಯಾ ಗೆಲುವು ದಾಖಲಿಸಿದರೆ ಗ್ರೂಪ್-ಎ ನಿಂದ ಸೂಪರ್-4 ಹಂತಕ್ಕೇರಬಹುದು. ಸದ್ಯ ಮೊದಲ ಸುತ್ತಿನ ಪಂದ್ಯಗಳು ನಡೆಯುತ್ತಿದ್ದು, ಈ ಸುತ್ತಿನ ಎರಡು ಗ್ರೂಪ್​ಗಳಿಂದ ಮೊದಲೆರಡು ಸ್ಥಾನ ಪಡೆಯುವ ನಾಲ್ಕು ತಂಡಗಳು ಸೂಪರ್-4 ಹಂತದಲ್ಲಿ ಆಡಲಿದೆ. ಅದರಂತೆ ಮುಂದಿನ ಹಂತದಲ್ಲಿ ನಾಲ್ಕು ತಂಡಗಳ ನಡುವೆ ರೌಂಡ್ ರಾಬಿನ್ ಸ್ವರೂಪದಲ್ಲಿ ಪಂದ್ಯಗಳು ನಡೆಯಲಿದೆ. ಸೂಪರ್-4 ಹಂತದ ಪಾಯಿಂಟ್ ಟೇಬಲ್​ನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಫೈನಲ್ ಆಡಲಿವೆ.