Avesh Khan: 4 ಸಿಕ್ಸ್, 5 ಫೋರ್: ಅವೇಶ್ ಖಾನ್ ಅರ್ಧಶತಕ: ಫುಲ್ ಟ್ರೋಲ್
Asia Cup 2022: ಈ ಬಾರಿಯ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಪರ ಶಮಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು. 16 ಪಂದ್ಯಗಳಲ್ಲಿ 20 ವಿಕೆಟ್ ಕಬಳಿಸುವ ಮೂಲಕ ಗುಜರಾತ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಮೊಹಮ್ಮದ್ ಶಮಿ ಪ್ರಮುಖ ಪಾತ್ರವಹಿಸಿದ್ದರು.
ಹಾಂಗ್ ಕಾಂಗ್ ವಿರುದ್ದದ ಪಂದ್ಯದಲ್ಲಿ ಟೀಮ್ ಇಂಡಿಯಾ 40 ರನ್ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಆದರೆ ಈ ಗೆಲುವಿನ ಬಳಿಕ ಟೀಮ್ ಇಂಡಿಯಾಗೆ ಹೊಸ ಚಿಂತೆ ಶುರುವಾಗಿದೆ. ಅದೇನೆಂದರೆ ಭಾರತದ ಬೌಲಿಂಗ್ ಲೈನಪ್. ಸಾಮಾನ್ಯವಾಗಿ ಹಾಂಗ್ ಕಾಂಗ್ ತಂಡವನ್ನು ಕ್ರಿಕೆಟ್ ಶಿಶು ಎಂದು ಪರಿಗಣಿಸಲಾಗುತ್ತದೆ. ಅಂತಹ ತಂಡವನ್ನು ಆಲೌಟ್ ಮಾಡಲು ಟೀಮ್ ಇಂಡಿಯಾ ಬೌಲರ್ಗಳಿಗೆ ಸಾಧ್ಯವಾಗಿಲ್ಲ. ಅದರಲ್ಲೂ 150 ಕ್ಕೂ ಹೆಚ್ಚು ರನ್ ಬಿಟ್ಟು ಕೊಡುವ ಮೂಲಕ ಪ್ರಮುಖ ಬೌಲರ್ಗಳು ದುಬಾರಿಯಾಗಿದ್ದರು. ಹೀಗೆ ದುಬಾರಿಯಾದ ಬೌಲರ್ಗಳ ಪಟ್ಟಿಯಲ್ಲಿ ಅವೇಶ್ ಖಾನ್ ಹಾಗೂ ಅರ್ಷದೀಪ್ ಸಿಂಗ್ ಇದ್ದಾರೆ. ಈ ಇಬ್ಬರು ಪ್ರಸ್ತುತ ತಂಡದ ಖಾಯಂ ವೇಗಿಗಳು ಎಂಬುದೇ ಅಚ್ಚರಿ.
ಒಂದೆಡೆ ಅರ್ಷದೀಪ್ ಸಿಂಗ್ 4 ಓವರ್ಗಳಲ್ಲಿ 44 ರನ್ ನೀಡಿದ್ದರೆ, ಮತ್ತೊಂದೆಡೆ 4 ಓವರ್ಗಳಲ್ಲಿ 53 ರನ್ ಚಚ್ಚಿಸಿಕೊಳ್ಳುವ ಮೂಲಕ ಅವೇಶ್ ಖಾನ್ ದುಬಾರಿ ಎನಿಸಿಕೊಂಡರು. ಪಾಕಿಸ್ತಾನ್ ವಿರುದ್ದದ ಪಂದ್ಯದಲ್ಲೂಐ 2 ಓವರ್ಗಳಲ್ಲಿ 19 ರನ್ ಹೊಡೆಸಿಕೊಂಡ ಅವೇಶ್ ಖಾನ್ಗೆ ಆ ಬಳಿಕ ನಾಯಕ ರೋಹಿತ್ ಶರ್ಮಾ ಓವರ್ ನೀಡಿರಲಿಲ್ಲ. ಇನ್ನು ಹಾಂಗ್ ಕಾಂಗ್ ವಿರುದ್ದ 4 ಓವರ್ಗಳಲ್ಲಿ 53 ರನ್ ನೀಡುವ ಮೂಲಕ ಮತ್ತೊಮ್ಮೆ ದುಬಾರಿಯಾದರು.
24 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 5 ಬೌಂಡರಿ ಹೊಡೆಸಿಕೊಂಡ ಅವೇಶ್ ಖಾನ್ ಇದೀಗ ಫುಲ್ ಟ್ರೋಲ್ ಆಗುತ್ತಿದ್ದಾರೆ. ಕಡಿಮೆ ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೂ ಅವೇಶ್ ಅವರನ್ನು ಯಾರು ಕೂಡ ಗುರುತಿಸುತ್ತಿಲ್ಲ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಕಿಚಾಯಿಸುತ್ತಿದ್ದಾರೆ. ಇನ್ನು ಕೆಲವರು ಟೀಮ್ ಇಂಡಿಯಾದ ಹೊಸ ರನ್ ಮೆಷಿನ್ ಅವೇಶ್ ಖಾನ್ ಎಂದರೆ, ಮತ್ತೆ ಕೆಲವರು ದಿಂಡಾ ಅಕಾಡೆಮಿಯ ಹೊಸ ವೇಗಿ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಇವೆಲ್ಲದರ ನಡುವೆ ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಕೂಡ ಕೆಲವರು ಆಕ್ರೋಶ ಹೊರಹಾಕಿದ್ದಾರೆ. ಅನುಭವಿ ವೇಗಿ ಮೊಹಮ್ಮದ್ ಶಮಿಯನ್ನು ಕೈ ಬಿಟ್ಟು ಅವೇಶ್ ಖಾನ್ ಆಯ್ಕೆ ಮಾಡಿದ್ದೇ ದೊಡ್ಡ ತಪ್ಪು ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಪರ ಶಮಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು. 16 ಪಂದ್ಯಗಳಲ್ಲಿ 20 ವಿಕೆಟ್ ಕಬಳಿಸುವ ಮೂಲಕ ಗುಜರಾತ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಮೊಹಮ್ಮದ್ ಶಮಿ ಪ್ರಮುಖ ಪಾತ್ರವಹಿಸಿದ್ದರು.
ಇದಾಗ್ಯೂ ಶಮಿಯನ್ನು ಟಿ20 ತಂಡದ ಆಯ್ಕೆಗೆ ಪರಿಗಣಿಸಿರಲಿಲ್ಲ. ಬದಲಾಗಿ ಅವೇಶ್ ಖಾನ್ಗೆ ಸತತವಾಗಿ ಅವಕಾಶ ನೀಡಲಾಯಿತು. ಇದೀಗ ಅವೇಶ್ ಖಾನ್ ಸಾಧಾರಣ ತಂಡ ಎನಿಸಿಕೊಂಡಿರುವ ಹಾಂಗ್ ಕಾಂಗ್ ವಿರುದ್ದ ಕೂಡ 53 ರನ್ ಚಚ್ಚಿಸಿಕೊಳ್ಳುವ ಮೂಲಕ ಟೀಮ್ ಇಂಡಿಯಾ ಚಿಂತೆಗೆ ಕಾರಣವಾಗಿದ್ದಾರೆ.
Published On - 12:33 pm, Thu, 1 September 22