Asia Cup 2022: ಏಷ್ಯಾಕಪ್ನ ಸೂಪರ್-4 ಹಂತದ ನಾಲ್ಕನೇ ಪಂದ್ಯದಲ್ಲಿ ಭಾರತ-ಶ್ರೀಲಂಕಾ (India vs Sri Lanka) ತಂಡಗಳು ಮುಖಾಮುಖಿಯಾಗಲಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ (Team India) ಪಾಲಿಗೆ ನಿರ್ಣಾಯಕ. ಏಕೆಂದರೆ ಈಗಾಗಲೇ ಶ್ರೀಲಂಕಾ ತಂಡವು ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡಕ್ಕೆ ಸೋಲುಣಿಸಿದೆ. ಇನ್ನು ಈ ಪಂದ್ಯದಲ್ಲಿ ಗೆದ್ದರೆ ಫೈನಲ್ ಪ್ರವೇಶಿಸುವ ಹಾದಿ ಸುಗಮವಾಗಲಿದೆ. ಇತ್ತ ಪಾಕಿಸ್ತಾನ್ ವಿರುದ್ಧ ಸೋತಿರುವ ಟೀಮ್ ಇಂಡಿಯಾ ಲಂಕಾ ವಿರುದ್ಧ ಗೆಲ್ಲಲೇಬೇಕು. ಆದರೆ ಲಂಕಾ ತಂಡವನ್ನು ಸೋಲಿಸುವುದು ಅಂದುಕೊಂಡಷ್ಟು ಸುಲಭವಲ್ಲ.
ಏಕೆಂದರೆ ಈ ಬಾರಿಯ ಏಷ್ಯಾಕಪ್ನಲ್ಲಿ ಸಾಧಾರಣ ತಂಡವಾಗಿ ಕಾಣಿಸಿಕೊಂಡಿದ್ದ ಶ್ರೀಲಂಕಾ ಇದೀಗ ಬಾಂಗ್ಲಾದೇಶ್ ಹಾಗೂ ಅಫ್ಘಾನಿಸ್ತಾನ್ ವಿರುದ್ಧ ಬೃಹತ್ ಮೊತ್ತವನ್ನು ಚೇಸ್ ಮಾಡುವ ಮೂಲಕ ಗೆಲುವು ದಾಖಲಿಸಿದೆ. ಬ್ಯಾಕ್ ಟು ಬ್ಯಾಕ್ ಎರಡು ಭರ್ಜರಿ ಗೆಲುವಿನ ಹುಮ್ಮಸ್ಸಿನಲ್ಲಿರುವ ಲಂಕಾ ಆಟಗಾರರಿಂದ ಟೀಮ್ ಇಂಡಿಯಾ ತೀವ್ರ ಪೈಪೋಟಿ ಎದುರಿಸುವ ಸಾಧ್ಯತೆಯಿದೆ.
ಇದಾಗ್ಯೂ ಟಿ20 ಕ್ರಿಕೆಟ್ನಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಮೇಲುಗೈ ಹೊಂದಿರುವುದು ವಿಶೇಷ. ಉಭಯ ತಂಡಗಳು ಇದುವರೆಗೆ 25 ಟಿ20 ಪಂದ್ಯಗಳನ್ನಾಡಿದೆ. ಈ ವೇಳೆ ಶ್ರೀಲಂಕಾ ಗೆದ್ದಿರುವುದು ಕೇವಲ 7 ಬಾರಿ ಮಾತ್ರ. ಅಂದರೆ 17 ಬಾರಿ ಬಾರಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯವು ರದ್ದಾಗಿತ್ತು.
ಇದು ಟಿ20 ಕ್ರಿಕೆಟ್ನ ಅಂಕಿ ಅಂಶವಾದರೆ, ಒಟ್ಟಾರೆ ಏಷ್ಯಾಕಪ್ನಲ್ಲಿ ಉಭಯ ತಂಡಗಳು ಸಮಬಲ ಹೊಂದಿದೆ. ಅಂದರೆ ಭಾರತ-ಶ್ರೀಲಂಕಾ ಏಷ್ಯಾಕಪ್ನಲ್ಲಿ ಇದುವರೆಗೆ 20 ಪಂದ್ಯಗಳನ್ನಾಡಿದೆ. ಈ ವೇಳೆ ಟೀಮ್ ಇಂಡಿಯಾ 10 ಬಾರಿ ಜಯ ಸಾಧಿಸಿದರೆ, ಶ್ರೀಲಂಕಾ ಕೂಡ ಭಾರತವನ್ನು 10 ಬಾರಿ ಮಣಿಸಿತ್ತು ಎಂಬುದು ವಿಶೇಷ. ಅಂದರೆ ಏಷ್ಯಾಕಪ್ನಲ್ಲಿ ಉಭಯ ತಂಡಗಳ ಪ್ರದರ್ಶನ ಸಮಬಲದಿಂದ ಕೂಡಿದೆ.
ಇದಾಗ್ಯೂ ಕೊನೆಯ 5 ಟಿ20 ಮುಖಾಮುಖಿಯನ್ನು ಪರಿಗಣೆನೆಗೆ ತೆಗೆದುಕೊಂಡರೆ ಭಾರತ ತಂಡವೇ ಪಾರುಪತ್ಯ ಮೆರೆದಿದೆ. ಏಕೆಂದರೆ ಉಭಯ ತಂಡಗಳ ನಡುವಣ ಕೊನೆಯ ಐದು ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ 4 ಪಂದ್ಯಗಳನ್ನು ಗೆದ್ದುಕೊಂಡಿದೆ. ಅತ್ತ ಶ್ರೀಲಂಕಾ ತಂಡ ಒಂದು ಬಾರಿ ಮಾತ್ರ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಇಲ್ಲಿ ಏಷ್ಯಾಕಪ್ ಅಂಕಿ ಅಂಶವನ್ನು ಮಾತ್ರ ತೆಗೆದುಕೊಂಡರೆ ಉಭಯ ತಂಡಗಳು ಸಮಬಲ ಹೊಂದಿದೆ ಎನ್ನಬಹುದು. ಹಾಗೆಯೇ ಒಟ್ಟಾರೆ ಅಂಕಿ ಅಂಶಗಳ ಪ್ರಕಾರ ಶ್ರೀಲಂಕಾಕ್ಕಿಂತ ಟೀಮ್ ಇಂಡಿಯಾವೇ ಬಲಿಷ್ಠ ಎಂದೇಳಬಹುದು. ಹೀಗಾಗಿ ನಾಳಿನ ಪಂದ್ಯದಲ್ಲಿ ಗೆಲ್ಲುವ ಫೇವರೇಟ್ ತಂಡವಾಗಿ ಟೀಮ್ ಇಂಡಿಯಾ ಕಾಣಿಸಿಕೊಳ್ಳಲಿದೆ.
ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್.
ಮೀಸಲು ಆಟಗಾರರು: ದೀಪಕ್ ಚಹರ್ ಮತ್ತು ಶ್ರೇಯಸ್ ಅಯ್ಯರ್.
ಶ್ರೀಲಂಕಾ ತಂಡ ಹೀಗಿದೆ:
ದಸುನ್ ಶನಕ (ನಾಯಕ), ಚರಿತ್ ಅಸಲಂಕಾ (ಉಪನಾಯಕ), ಧನುಷ್ಕ ಗುಣತಿಲಕ, ಪಾತುಮ್ ನಿಸ್ಸಾಂಕ, ಕುಶಾಲ್ ಮೆಂಡಿಸ್ (ವಿಕೆಟ್‌ಕೀಪರ್), ಭಾನುಕಾ ರಾಜಪಕ್ಸೆ (ವಿಕೆಟ್‌ಕೀಪರ್), ಅಶೆನ್ ಬಂಡಾರ, ಧನಂಜಯ ಡಿ ಸಿಲ್ವಾ, ವನಿಂದು ಹಸ್ಸರಂಗ, ಮಹೇಶ್ ತೀಕ್ಷಣ, ಜೆಫ್ರಿ ವಾಂಡರ್ಸೆ, ಪ್ರವೀಣ್ ದ್ವಾಂಡರ್ಸೆ, ಬಿನೂರ ಫೆರ್ನಾಂಡೊ, ಚಾಮಿಕ ಕರುಣಾರತ್ನೆ, ದಿಲ್ಶನ್ ಮಧುಶಂಕ, ಮತಿಶ ಪತಿರಾನ, ದಿನೇಶ್ ಚಾಂಡಿಮಲ್ (ವಿಕೆಟ್ ಕೀಪರ್), ನುವಾನಿಂದು ಫೆರ್ನಾಂಡೊ, ಕಸುನ್ ರಜಿತ.