Asia Cup 2022: ಟೀಮ್ ಇಂಡಿಯಾದ ಮುಂದಿನ ಎದುರಾಳಿಗಳು ಯಾರು ಗೊತ್ತಾ?
India's Next Match: ಮೊದಲ ಪಂದ್ಯದಲ್ಲೇ ಸೋತಿರುವ ಟೀಮ್ ಇಂಡಿಯಾ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಪಾಯಿಂಟ್ ಟೇಬಲ್ನಲ್ಲಿ ಮೊದಲೆರಡು ಸ್ಥಾನ ಪಡೆಯುವ 2 ತಂಡಗಳು ಫೈನಲ್ ಆಡಲಿದೆ.
Asia Cup 2022: ಏಷ್ಯಾಕಪ್ನ ಸೂಪರ್-4 ಹಂತದ ತನ್ನ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ (Team India) ಸೋಲನುಭವಿಸಿದೆ. ಭಾನುವಾರ ದುಬೈ ಇಂಟರ್ನ್ಯಾಷನಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿಯ (60) ಅರ್ಧಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಪಾಕ್ ಪರ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ (71) ಅರ್ಧಶತಕ ಸಿಡಿಸಿದರು. ಇದಾಗ್ಯೂ ಅಂತಿಮ ಹಂತದಲ್ಲಿ ಪಂದ್ಯವು ರೋಚಕಘಟ್ಟದತ್ತ ಸಾಗಿತು. ಅದರಂತೆ ಕೊನೆಯ ಓವರ್ನಲ್ಲಿ 7 ರನ್ಗಳ ಟಾರ್ಗೆಟ್ ಪಡೆದ ಪಾಕಿಸ್ತಾನ್ ತಂಡವು 1 ಎಸೆತ ಬಾಕಿಯಿರುವಾಗ 182 ರನ್ಗಳ ಗುರಿ ಮುಟ್ಟುವ ಮೂಲಕ 5 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಸೂಪರ್- 4 ಹಂತದಲ್ಲಿ ಪಾಕ್ ತಂಡವು ಮೊದಲ ಜಯ ತನ್ನದಾಗಿಸಿಕೊಂಡಿದೆ.
ಇತ್ತ ಮೊದಲ ಪಂದ್ಯದಲ್ಲೇ ಸೋತಿರುವ ಟೀಮ್ ಇಂಡಿಯಾ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಪಾಯಿಂಟ್ ಟೇಬಲ್ನಲ್ಲಿ ಮೊದಲೆರಡು ಸ್ಥಾನ ಪಡೆಯುವ 2 ತಂಡಗಳು ಫೈನಲ್ ಆಡಲಿದೆ. ಹೀಗಾಗಿ ಟೀಮ್ ಇಂಡಿಯಾ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಫೈನಲ್ ಹಾದಿಯನ್ನು ಸುಗಮಗೊಳಿಸಬೇಕಿದೆ.
ಅದರಂತೆ ಭಾರತ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಮಂಗಳವಾರ (ಸೆ.6) ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸೂಪರ್-4 ಹಂತದಲ್ಲಿ ಗೆಲುವಿನ ಖಾತೆ ತೆರೆಯಬೇಕಿದೆ. ಆದರೆ ಅತ್ತ ಈಗಾಗಲೇ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡವನ್ನು ಮಣಿಸಿ ಶ್ರೀಲಂಕಾ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನ ಅಲಂಕರಿಸಿಕೊಂಡಿದೆ. ಇದೇ ವಿಶ್ವಾಸದಲ್ಲಿ ಟೀಮ್ ಇಂಡಿಯಾ ವಿರುದ್ದ ಕೂಡ ಕಣಕ್ಕಿಳಿಯಲಿದೆ.
ಇನ್ನು ಈ ಪಂದ್ಯದ ಬಳಿಕ ಭಾರತ ಆಡಬೇಕಿರುವುದು ಅಫ್ಘಾನಿಸ್ತಾನ್ ವಿರುದ್ದ. ಸೆಪ್ಟೆಂಬರ್ 8 ರಂದು, ಅಂದರೆ ಗುರುವಾರ ನಡೆಯಲಿರುವ ಅಫ್ಘಾನ್ ವಿರುದ್ದದ ಈ ಪಂದ್ಯದಲ್ಲೂ ಟೀಮ್ ಇಂಡಿಯಾ ಗೆಲ್ಲಲೇಬೇಕು. ಏಕೆಂದರೆ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿ ನೆಟ್ ರನ್ರೇಟ್ ಮೂಲಕ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನ ಅಥವಾ 2ನೇ ಸ್ಥಾನವನ್ನು ಅಲಂಕರಿಸಬಹುದು.
ಒಂದು ವೇಳೆ ಈ ಎರಡು ಪಂದ್ಯಗಳಲ್ಲಿ ಒಂದರಲ್ಲೂ ಸೋತರೂ ಫೈನಲ್ ಪ್ರವೇಶಿಸಲು ಉಳಿದ ತಂಡಗಳ ಫಲಿತಾಂಶಗಳನ್ನು ಹಾಗೂ ನೆಟ್ ರನ್ ರೇಟ್ ಅನ್ನು ಅವಲಂಭಿಸಬೇಕಾಗಿ ಬರಬಹುದು. ಹೀಗಾಗಿ ಭಾರತ ತಂಡಕ್ಕೆ ಮುಂದಿನ ಎರಡೂ ಪಂದ್ಯಗಳು ಮಾಡು ಇಲ್ಲವೇ ಮಡಿ ಪಂದ್ಯಗಳಾಗಿವೆ.
ಭಾರತ ತಂಡದ ಸೂಪರ್-4 ವೇಳಾಪಟ್ಟಿ:
- ಸೆಪ್ಟೆಂಬರ್- 6: ಭಾರತ ವ ಶ್ರೀಲಂಕಾ
- ಸೆಪ್ಟೆಂಬರ್- 8: ಭಾರತ ವ ಅಫ್ಘಾನಿಸ್ತಾನ್
- ಸೆಪ್ಟೆಂಬರ್ 11: ಫೈನಲ್ ಪಂದ್ಯ
ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್.
ಮೀಸಲು ಆಟಗಾರರು: ದೀಪಕ್ ಚಹರ್ ಮತ್ತು ಶ್ರೇಯಸ್ ಅಯ್ಯರ್.