Asia Cup 2022: ಏಷ್ಯಾಕಪ್ ಇದೇ ಶನಿವಾರದಿಂದ (ಆಗಸ್ಟ್ 27) ಶುರುವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ತಂಡ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಇನ್ನು ಭಾರತ ತಂಡ ಪಾಕ್ (India vs Pakistan) ವಿರುದ್ದದ ಪಂದ್ಯದ ಮೂಲಕ ಭಾನುವಾರ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಈ ಪಂದ್ಯದ ಮೇಲೆ ಇದೀಗ ಇಡೀ ವಿಶ್ವ ಕ್ರಿಕೆಟ್ ಪ್ರೇಮಿಗಳ ಕಣ್ಣು ನೆಟ್ಟಿದೆ. ಏಕೆಂದರೆ ಕಳೆದ ಬಾರಿಯ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾಗೆ ಪಾಕಿಸ್ತಾನ್ ಸೋಲುಣಿಸಿತ್ತು. ಇದೀಗ ಈ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ ಟೀಮ್ ಇಂಡಿಯಾ. ಹೀಗಾಗಿ ರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.
ಇಲ್ಲಿ ಮೇಲ್ನೋಟಕ್ಕೆ ಉಭಯ ತಂಡಗಳು ಬಲಿಷ್ಠವಾಗಿದ್ದರೂ ಏಷ್ಯಾಕಪ್‌ನಲ್ಲಿ ಭಾರತ ತಂಡವೇ ಮೇಲುಗೈ ಸಾಧಿಸುತ್ತಾ ಬಂದಿದೆ. ಅಂದರೆ ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ್ 14 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಭಾರತ ಪಾಕ್ ತಂಡಕ್ಕೆ 8 ಬಾರಿ ಸೋಲುಣಿಸಿದೆ. ಇನ್ನು ಪಾಕಿಸ್ತಾನ್ ಟೀಮ್ ಇಂಡಿಯಾ ವಿರುದ್ದ ಗೆದ್ದಿದ್ದು ಕೇವಲ 5 ಬಾರಿ ಮಾತ್ರ. ಹಾಗೆಯೇ 1997ರಲ್ಲಿ ಉಭಯ ತಂಡಗಳ ನಡುವಿನ 1 ಪಂದ್ಯ ರದ್ದಾಗಿತ್ತು. ಈ ಅಂಕಿ ಅಂಶಗಳ ಪ್ರಕಾರ ಭಾರತ ತಂಡವೇ ಮೇಲುಗೈ ಹೊಂದಿದ್ದು, ಅತ್ತ ಇದುವೇ ಪಾಕ್ ತಂಡದ ದೊಡ್ಡ ಚಿಂತೆಗೆ ಕಾರಣವಾಗಿದೆ.
ಇದಾಗ್ಯೂ ಕಳೆದ ವರ್ಷದ ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ದ ಪಾಕಿಸ್ತಾನ್ ಜಯ ಸಾಧಿಸಿತ್ತು. ಇದೇ ಕಾರಣದಿಂದಾಗಿ ಈ ಪಂದ್ಯದ ಮೇಲೆ ಕುತೂಹಲ ಇಮ್ಮಡಿಯಾಗಿದೆ. ಆದರೆ ಈ ಬಾರಿ ಉಭಯ ತಂಡಗಳಲ್ಲೂ ಪ್ರಮುಖ ಆಟಗಾರರು ಕಣಕ್ಕಿಳಿಯುತ್ತಿಲ್ಲ ಎಂಬುದು ವಿಶೇಷ.
ಉಭಯ ತಂಡಗಳಿಗೂ ಹಿನ್ನಡೆ:
ಟಿ20 ಮಾದರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಅತ್ಯಂತ ಬಲಿಷ್ಠವಾಗಿವೆ. ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ ಮತ್ತು ಸೂರ್ಯಕುಮಾರ್ ಅವರಂತಹ ಬ್ಯಾಟ್ಸ್‌ಮನ್‌ಗಳಿದ್ದಾರೆ. ಅತ್ತ ಪಾಕ್ ತಂಡದಲ್ಲಿ ಬಾಬರ್ ಅಜಮ್, ಫಕರ್ ಜಮಾನ್ ಮತ್ತು ಮೊಹಮ್ಮದ್ ರಿಜ್ವಾನ್ನಂತಹ ಆಟಗಾರರಿದ್ದಾರೆ. ಬಾಬರ್ ಮತ್ತು ರಿಜ್ವಾನ್ ಪ್ರಸ್ತುತ ಟಿ20 ಕ್ರಿಕೆಟ್‌ನ ಅತ್ಯುತ್ತಮ ಆರಂಭಿಕ ಜೋಡಿಗಳಲ್ಲಿ ಒಂದು ಎಂಬುದು ವಿಶೇಷ.
ಆದರೆ ಏಷ್ಯಾಕಪ್‌ನಲ್ಲಿ ಉಭಯ ತಂಡಗಳು ತಮ್ಮ ಪ್ರಮುಖ ವೇಗದ ಬೌಲರ್ ಇಲ್ಲದೆ ಕಣಕ್ಕಿಳಿಯಲಿದೆ. ಅಂದರೆ ಬೆನ್ನು ನೋವಿನ ಸಮಸ್ಯೆಯಿಂದಾಗಿ ಜಸ್ಪ್ರೀತ್ ಬುಮ್ರಾ ಏಷ್ಯಾಕಪ್‌ನಿಂದ ಹೊರಗುಳಿದಿದ್ದಾರೆ. ಮತ್ತೊಂದೆಡೆ, ಶಾಹೀನ್ ಶಾ ಆಫ್ರಿದಿ ಮೊಣಕಾಲಿನ ಗಾಯದ ಆಡುತ್ತಿಲ್ಲ. ಹೀಗಾಗಿ ಹಿನ್ನಡೆ ವಿಷಯದಲ್ಲೂ ಉಭಯ ತಂಡಗಳ ಸಮಬಲವಾಗಿದೆ ಎನ್ನಬಹುದು.