Asia Cup 2022 Schedule: ಏಷ್ಯಾ ಕಪ್ ವೇಳಾಪಟ್ಟಿ ಪ್ರಕಟ: ಭಾರತ-ಪಾಕ್ ಮುಖಾಮುಖಿಗೆ ಡೇಟ್ ಫಿಕ್ಸ್
Asia Cup 2022 Schedule: ವಿಶೇಷ ಎಂದರೆ ಏಷ್ಯಾಕಪ್ ಬಳಿಕ ಅಕ್ಟೋಬರ್ನಲ್ಲಿ ಮತ್ತೆ ಭಾರತ-ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಅಂದರೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಅಕ್ಟೋಬರ್ 23 ರಂದು ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ್ ವಿರುದ್ದ ಆಡಲಿದೆ.
ಏಷ್ಯಾ ಕಪ್ 2022 ರ ವೇಳಾಪಟ್ಟಿ ಪ್ರಕಟವಾಗಿದೆ. ಆಗಸ್ಟ್ 27 ರಿಂದ ಟಿ20 ಟೂರ್ನಿ ಶುರುವಾಗಲಿದ್ದು, ಭಾರತ-ಪಾಕಿಸ್ತಾನವು ಆಗಸ್ಟ್ 28 ರಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದೆ. ಹಾಗೆಯೇ ಫೈನಲ್ ಪಂದ್ಯವು ಸೆಪ್ಟೆಂಬರ್ 11 ರಂದು ನಡೆಯಲಿದೆ. ಈ ಬಾರಿಯ ಏಷ್ಯಾ ಕಪ್ ಶ್ರೀಲಂಕಾದಲ್ಲಿ ನಡೆಯಬೇಕಿತ್ತು, ಆದರೆ ಅಲ್ಲಿನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಇದೀಗ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ. ಅದರಂತೆ ಒಟ್ಟು 6 ತಂಡಗಳನ್ನು ಎರಡು ಗ್ರೂಪ್ಗಳಾಗಿ ವಿಂಗಡಿಸಿ ಟೂರ್ನಿಯನ್ನು ಆಯೋಜಿಸಲಾಗುತ್ತದೆ. ಈಗಾಗಲೇ ಐದು ತಂಡಗಳು ನೇರವಾಗಿ ಅರ್ಹತೆ ಪಡೆದುಕೊಂಡಿದ್ದು, ಇನ್ನೊಂದು ತಂಡವು ಅರ್ಹತಾ ಸುತ್ತಿನ ಮೂಲಕ ಆಯ್ಕೆಯಾಗಬೇಕಿದೆ.
ನೇರವಾಗಿ ಅರ್ಹತೆ ಪಡೆದ ತಂಡಗಳಲ್ಲಿ ಭಾರತ, ಪಾಕಿಸ್ತಾನ್, ಶ್ರೀಲಂಕಾ, ಅಫ್ಘಾನಿಸ್ತಾನ್ ಹಾಗೂ ಬಾಂಗ್ಲಾದೇಶ ಟೀಮ್ಗಳಿವೆ. ಇನ್ನು ಒಂದು ತಂಡವು ಅರ್ಹತೆ ಪಡೆಯಬೇಕಿದ್ದು, ಆಗಸ್ಟ್ 21ರಿಂದ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಲಿವೆ. ಇದರಲ್ಲಿ ಯುಎಇ, ಒಮನ್, ನೇಪಾಳ, ಹಾಂಕಾಂಗ್ ಸೇರಿದಂತೆ ಇತರೆ ತಂಡಗಳು ಸೆಣಸಲಿವೆ. ಇವುಗಳಲ್ಲಿ ಒಂದು ತಂಡವು ಪ್ರಧಾನ ಸುತ್ತಿಗೆ ಅರ್ಹತೆ ಪಡೆಯುತ್ತದೆ. ಇಲ್ಲಿ ಮೊದಲ ಸುತ್ತಿನಲ್ಲಿ ಗ್ರೂಪ್ಗಳಲ್ಲಿನ ತಂಡಗಳು ಮುಖಾಮುಖಿಯಾಗಲಿದ್ದು, ಇದರಲ್ಲಿ ಅಗ್ರಸ್ಥಾನ ಪಡೆಯುವ 2 ತಂಡಗಳು ಸೂಪರ್-4 ಹಂತದಲ್ಲಿ ಆಡಲಿದೆ. ಅಂದರೆ ಎ ಗ್ರೂಪ್ನಿಂದ 2 ತಂಡ, ಬಿ ಗ್ರೂಪ್ನಿಂದ 2 ತಂಡಗಳು ಮುಂದಿನ ಹಂತಕ್ಕೇರಲಿದೆ. ಇನ್ನು ಸೆಪ್ಟೆಂಬರ್ 3 ರಿಂದ ಸೂಪರ್- 4 ತಂಡಗಳ ಮುಖಾಮುಖಿ ಶುರುವಾಗಲಿದೆ.
ಏಷ್ಯಾ ಕಪ್ ತಂಡಗಳ ಗ್ರೂಪ್:
- ಗ್ರೂಪ್ ಎ ತಂಡಗಳು- ಭಾರತ, ಪಾಕಿಸ್ತಾನ, ಕ್ವಾಲಿಫೈಯರ್ ತಂಡ
- ಗ್ರೂಪ್ ಬಿ ತಂಡಗಳು- ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ
ಸಂಪೂರ್ಣ ವೇಳಾಪಟ್ಟಿ ಹೀಗಿದೆ:
- ಆಗಸ್ಟ್ 27 – ಶ್ರೀಲಂಕಾ vs ಅಫ್ಘಾನಿಸ್ತಾನ- ದುಬೈ
- ಆಗಸ್ಟ್ 28 – ಭಾರತ vs ಪಾಕಿಸ್ತಾನ- ದುಬೈ
- ಆಗಸ್ಟ್ 30 – ಬಾಂಗ್ಲಾದೇಶ vs ಅಫ್ಘಾನಿಸ್ತಾನ- ಶಾರ್ಜಾ
- ಆಗಸ್ಟ್ 31 – ಭಾರತ vs ಕ್ವಾಲಿಫೈಯರ್ ಟೀಮ್- ದುಬೈ
- ಸೆಪ್ಟೆಂಬರ್ 1 – ಶ್ರೀಲಂಕಾ vs ಬಾಂಗ್ಲಾದೇಶ- ದುಬೈ
- ಸೆಪ್ಟೆಂಬರ್ 2- ಪಾಕಿಸ್ತಾನ vs ಕ್ವಾಲಿಫೈಯರ್ ಟೀಮ್- ಶಾರ್ಜಾ
ಸೂಪರ್- 4 ವೇಳಾಪಟ್ಟಿ:
- ಸೆಪ್ಟೆಂಬರ್ 3 – B1 vs B2 – ಶಾರ್ಜಾ
- ಸೆಪ್ಟೆಂಬರ್ 4 A1 vs A2 – ದುಬೈ
- ಸೆಪ್ಟೆಂಬರ್ 6 A1 vs B1 – ದುಬೈ
- ಸೆಪ್ಟೆಂಬರ್ 7 A2 vs B2 – ದುಬೈ
- ಸೆಪ್ಟೆಂಬರ್ 8 A1 vs B2 – ದುಬೈ
- ಸೆಪ್ಟೆಂಬರ್ 9 B1 vs- A2 ದುಬೈ
- ಸೆಪ್ಟೆಂಬರ್ 11- ಫೈನಲ್ ಪಂದ್ಯ- ದುಬೈ
ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7.30 ಕ್ಕೆ ಪ್ರಾರಂಭವಾಗುತ್ತವೆ.
2018ರಲ್ಲಿ ಯುಎಇಯಲ್ಲಿ ಕೊನೆಯ ಬಾರಿ ಏಷ್ಯಾಕಪ್ ಪಂದ್ಯಗಳು ನಡೆದಿದ್ದವು. ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಭಾರತ 7ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತು. ಈ ಬಾರಿ ಆಯೋಜನೆಗೊಳ್ಳುತ್ತಿರುವುದು 15ನೇ ಸೀಸನ್ ಏಷ್ಯಾ ಕಪ್.
ಏಷ್ಯಾ ಕಪ್ ದಾಖಲೆ:
ಇದುವರೆಗೆ ಏಷ್ಯಾಕಪ್ ಅನ್ನು ಏಕದಿನ ಮಾದರಿಯಲ್ಲಿ ಆಡಿಸಲಾಗುತ್ತಿತ್ತು. ಇದೀಗ ಟಿ20 ಸ್ವರೂಪದಲ್ಲಿ ಟೂರ್ನಿ ನಡೆಸಲು ನಿರ್ಧರಿಸಲಾಗಿದೆ. ಇನ್ನು ಒಟ್ಟಾರೆ ಏಷ್ಯಾಕಪ್ ದಾಖಲೆಯನ್ನು ನೋಡಿದರೆ ಭಾರತ ತಂಡವೇ ಅತ್ಯಂತ ಯಶಸ್ವಿ ತಂಡವಾಗಿದೆ. ಟೀಮ್ ಇಂಡಿಯಾ 7 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದಲ್ಲದೇ ಶ್ರೀಲಂಕಾ ತಂಡ 5 ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನ ಎರಡು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.
ವಿಶೇಷ ಎಂದರೆ ಏಷ್ಯಾಕಪ್ ಬಳಿಕ ಅಕ್ಟೋಬರ್ನಲ್ಲಿ ಮತ್ತೆ ಭಾರತ-ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಅಂದರೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಅಕ್ಟೋಬರ್ 23 ರಂದು ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ್ ವಿರುದ್ದ ಆಡಲಿದೆ. ಅದಕ್ಕೂ ಮುನ್ನ ಏಷ್ಯಾಕಪ್ನಲ್ಲೂ ಭಾರತ-ಪಾಕಿಸ್ತಾನ್ ಮೊದಲ ಪಂದ್ಯದಲ್ಲೇ ಮುಖಾಮುಖಿಯಾಗುತ್ತಿರುವುದು ವಿಶೇಷ.
Published On - 5:02 pm, Tue, 2 August 22