IND vs WI 3rd T20: ಸೂರ್ಯನ ಸಿಡಿಲಬ್ಬರಕ್ಕೆ ತತ್ತರಿಸಿದ ವಿಂಡೀಸ್
IND vs WI 3rd T20 Highlights: 165 ರನ್ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಇನಿಂಗ್ಸ್ ಆರಂಭಿಸಿದ್ದರು.
ಭಾರತ-ವೆಸ್ಟ್ ಇಂಡೀಸ್ (India vs West Indies) ನಡುವಣ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಹಿಟ್ಮ್ಯಾನ್ ನಿರ್ಧಾರವನ್ನು ಪ್ರಶ್ನಿಸುವಂತೆ ವಿಂಡೀಸ್ ಆರಂಭಿಕ ದಾಂಡಿಗ ಕೈಲ್ ಮೇಯರ್ಸ್ ಸ್ಪೋಟಕ ಇನಿಂಗ್ಸ್ ಆಡಿದರು.
50 ಎಸೆತಗಳನ್ನು ಎದುರಿಸಿದ ಮೇಯರ್ಸ್ 4 ಸಿಕ್ಸ್ ಹಾಗೂ 8 ಫೋರ್ನೊಂದಿಗೆ 73 ರನ್ ಬಾರಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಆದರೆ ಮತ್ತೊಂದೆಡೆ ವೆಸ್ಟ್ ಇಂಡೀಸ್ನ ಇತರೆ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕುವಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಯಶಸ್ವಿಯಾಗಿದ್ದರು. ಪರಿಣಾಮ ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕುವಲ್ಲಿ ಮಾತ್ರ ಸಫಲವಾಯಿತು.
ಅದರಂತೆ 165 ರನ್ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಇನಿಂಗ್ಸ್ ಆರಂಭಿಸಿದ್ದರು. ಆದರೆ 11 ರನ್ಗಳಿಸಿದ್ದ ವೇಳೆ ಗಾಯಗೊಂಡ ರೋಹಿತ್ ಶರ್ಮಾ ಅರ್ಧದಲ್ಲೇ ಮೈದಾನ ತೊರೆಯಬೇಕಾಯಿತು. ಈ ಹಂತದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ ವಿಂಡೀಸ್ ವೇಗಿಗಳ ಬೆಂಡೆತ್ತಿದ್ದರು. ಮತ್ತೊಂದೆಡೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಅಯ್ಯರ್ (24) ಉತ್ತಮ ಸಾಥ್ ನೀಡಿದರು.
ಬಿರುಸಿನ ಇನಿಂಗ್ಸ್ ಆಡಿದ ಸೂರ್ಯಕುಮಾರ್ ಯಾದವ್ ಸಿಕ್ಸ್-ಫೋರ್ಗಳ ಸುರಿಮಳೆಯೊಂದಿಗೆ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದಾದ ಬಳಿಕ ರನ್ ವೇಗವನ್ನು ಹೆಚ್ಚಿಸಿ ಸೂರ್ಯ 4 ಸಿಕ್ಸ್ ಹಾಗೂ 8 ಫೋರ್ಗಳನ್ನು ಬಾರಿಸಿದರು. ಅಲ್ಲದೆ ಕೇವಲ 50 ಎಸೆತಗಳಲ್ಲಿ 76 ರನ್ ಸಿಡಿಸುವ ಮೂಲಕ ತಂಡವನ್ನು ಗುರಿಯತ್ತ ಕೊಂಡೊಯ್ದರು.
14.3 ಓವರ್ಗಳಲ್ಲಿ ತಂಡದ ಮೊತ್ತ 135 ರನ್ ಆಗಿದ್ದ ವೇಳೆ ಅಲ್ಝಾರಿ ಜೋಸೆಫ್ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ವಿಕೆಟ್ ಒಪ್ಪಿಸಿ ಹೊರನಡೆಯಬೇಕಾಯಿತು. ಆದರೆ ಅದಾಗಲೇ ಟೀಮ್ ಇಂಡಿಯಾ ಒಂಪೂರ್ಣ ಒತ್ತಡದಿಂದ ಪಾರಾಗಿತ್ತು. ಹೀಗಾಗಿ ಅಂತಿಮ ಹಂತದಲ್ಲಿ ರಿಷಭ್ ಪಂತ್ (33) ಹಾಗೂ ದೀಪಕ್ ಹೂಡಾ (10) ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿ 19 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 165 ರನ್ಗಳ ಗುರಿ ತಲುಪಿಸಿದರು. ಇದರೊಂದಿಗೆ ಟೀಮ್ ಇಂಡಿಯಾ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಇನ್ನು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದ ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.